ದೂರದ ಮುಂಬೈ ಮಹಾನಗರದಲ್ಲಿ ಕನ್ನಡವನ್ನು ಬೆಳಗುವಂತೆ ಮಾಡಿದ ಮಾಸಿಕ ಮೊಗವೀರ. ಈ ಪತ್ರಿಕೆಗೆ ಈಗ 85ರ ಸಂಭ್ರಮ. ಮರಾಠಿ ಮಣ್ಣಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿ ಇತಿಹಾಸ ನಿರ್ಮಿಸಿದ ಮೊಗವೀರ ಮಾಸಿಕ ನಡೆದ ಬಂದ ದಾರಿಯ ಕಿರು ಅವಲೋಕನ ಇಲ್ಲಿದೆ.
ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ನೂರೈವತ್ತು ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ.
ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ ಎಂಬುದಾಗಿ ಮುಂಬೈ ಮಹಾನಗರವನ್ನು ಕವಿ ಡೇಂಗಾ ದೇವರಾಯ ನಾಯ್ಕ ಬಹು ಹಿಂದೆಯೇ ಕೊಂಡಾಡಿದ್ದಾನೆ. ಕರ್ನಾಟಕದಿಂದ ಮಾಯಾನಗರಿ ಮುಂಬೈಗೆ ವಲಸೆ ಬಂದವರಲ್ಲಿ ಮೊಗವೀರರೇ ಮೊದಲಿಗರು. ಮುಂಬೈಯಲ್ಲಿ ನೆಲೆ ನಿಂತು ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮೊಗವೀರರ ಸಾಹಸ ಸಾಧನೆ ಅವಲೋಕನೀಯವಾಗಿದೆ. ಸಂಘಟನೆಯಲ್ಲಿ ಮುಂಬೈನ ತುಳು ಕನ್ನಡಿಗರದು ಎತ್ತಿದ ಕೈ. ಮೊಗವೀರ ವ್ಯವಸ್ಥಾಪಕ ಮಂಡಳಿಯು ಮುಂಬೈನ ಪ್ರತಿಷ್ಠಿತ ಸಂಘ – ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. 1902 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಮಹಾನ್ ಸಂಸ್ಥೆ ಮುಂಬೈ ಮಹಾನಗರದಲ್ಲಿ ಅದ್ಭುತವಾದ ಸಾಧನೆಗೈದಿದೆ. ಮುಂಬೈಯ ಸುತ್ತಮುತ್ತ ನೆಲೆಸಿರುವ ಮೊಗವೀರ ಬಾಂಧವರನ್ನು ಒಂದುಗೂಡಿಸಿ ಅವರ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದ ಈ ಸಂಸ್ಥೆಗೆ ಒಂದೂಕಾಲು ಶತಮಾನದ ಹಿನ್ನೆಲೆಯಿರುವುದು ಗಮನೀಯ ಅಂಶ.ದೂರದ ಮುಂಬೈಯಲ್ಲಿ ಕನ್ನಡ ತುಳು ಭಾಷೆ, ಸಾಹಿತ್ಯ ಸಂಸ್ಕೃತಿಗಳ ಬಲವರ್ಧನೆಗೆ ಅವಿರತವಾಗಿ ಶ್ರಮಿಸುತ್ತಾ ಬಂದ ಮೊಗವೀರ ಮಂಡಳಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ.
ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈಯಲ್ಲಿ ಹೆಸರು ಮಾಡಿದ ‘ಮೊಗವೀರ ಮಾಸಿಕ’ಕ್ಕೆ ವಿಶೇಷವಾದ ಸ್ಥಾನಮಾನವಿದೆ. 1939ರಲ್ಲಿ ಪ್ರಕಟಣೆ ಆರಂಭಿಸಿದ ಈ ಮಾಸ ಪತ್ರಿಕೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ. ಸಮುದಾಯದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅವರ ಜ್ಞಾನ ಕ್ಷಿತಿಜವನ್ನು ವಿಸ್ತರಿಸುತ್ತ ಬಲಿಷ್ಠ ಪ್ರಗತಿಪರ ಸಮಾಜವನ್ನು ಕಟ್ಟಲು ಮೊಗವೀರ ಪತ್ರಿಕೆ ವಾಹಕವಾಗಿ ಕೆಲಸ ಮಾಡಿದ ಬಗೆ ನಾಡಿಗೆ ಮಾದರಿಯಾಗಿದೆ.
ಮುಂಬೈಯಲ್ಲಿ ಕನ್ನಡ, ತುಳು ಭಾಷೆಗಳ ಬೆಳವಣಿಗೆಗೆ, ಕನ್ನಡ ಸಾಹಿತ್ಯದ ಪ್ರಸಾರದಲ್ಲಿ, ಕರ್ನಾಟಕ ಸಂಸ್ಕೃತಿಯ ಬಿತ್ತರದಲ್ಲಿ ಮೊಗವೀರ ಪತ್ರಿಕೆ ವಹಿಸಿದ ಪಾತ್ರ ಹಾಗೂ ಕೊಟ್ಟ ಕಾಣಿಕೆ ಮಹತ್ವದ್ದಾಗಿದೆ. ಇದು ತುಳು ಕನ್ನಡಿಗರ ಮೊದಲ ಹಾಗೂ ಸುದೀರ್ಘ ಹಿನ್ನೆಲೆ ಇರುವ ಮಾಸಿಕವೂ ಹೌದು.’ಮೊಗವೀರ’ ಮಾಸಿಕಕ್ಕೆ ಎಂಟೂವರೆ ದಶಕಕ್ಕೂ ಮಿಕ್ಕ ಇತಿಹಾಸವಿದೆ. ಈ ಸುದೀರ್ಘ ಯಾನದಲ್ಲಿ ‘ಮೊಗವೀರ’ ತನ್ನ ನಿಯತ ಪ್ರಕಟಣೆ, ವೈವಿಧ್ಯತೆ, ವಿಭಿನ್ನ ಬಗೆಯ ಸಂವಾದ, ಚಿಂತನ ಮಂಥನಗಳ ಮೂಲಕ ಮುಂಬೈಯ ತುಳು ಕನ್ನಡಿಗರ ಮನೆ ಮಾತಾಗಿದೆ. “ಮೊಗವೀರ ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದು. ಈಗ ಅದು ಸಮಾಜದ ಮುಖಪತ್ರವಾಗಿ ಮಾತ್ರ ಉಳಿದಿಲ್ಲ. ಸಾಹಿತ್ಯಕ ವೈಚಾರಿಕ ಮಾಸಿಕವಾಗಿ ‘ಮೊಗವೀರ’ವನ್ನು ತಪ್ಪದೆ ಪ್ರತಿ ಸಂಚಿಕೆಯನ್ನು ನಿರಂತರವಾಗಿ ಪ್ರಕಟಿಸಿದೆ, ಮುಂದುವರಿದಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿಯು ತನ್ನ ಹೋರಾಟಮಯ ಇತಿಹಾಸದಲ್ಲಿ ಈ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತ್ತ ಸಾಗಿದೆ. ಈ ಮೂಲಕ ಕನ್ನಡದ ಧ್ವಜವನ್ನು ಎತ್ತಿ ಹಿಡಿದ ಸಂಸ್ಥೆ ಎಂಬ ಹೊಗಳಿಕೆಗೆ ಚ್ಯುತಿ ಬಾರದಂತೆ ತನ್ನ ಕರ್ತವ್ಯವನ್ನು ಅದು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿದೆ” ಎಂಬುದಾಗಿ ನಾಡಿನ ಹಿರಿಯ ಸಾಹಿತಿ ಡಾ. ಹಾ. ಮಾ. ನಾಯಕ ಅವರು ಮೊಗವೀರ ಪತ್ರಿಕೆಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮುಂಬೈ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮೊಗವೀರ ಪತ್ರಿಕೆಗೆ ವಿಶಿಷ್ಟವಾದ ಸ್ಥಾನಮಾನವಿದೆ. ಮೊಗವೀರ ಸಮುದಾಯದ ಅಭಿವ್ಯಕ್ತಿ ಮಾಧ್ಯಮವಾಗಿ ಬೆಳಕು ಕಂಡ ‘ಮೊಗವೀರ’ ಪತ್ರಿಕೆ ಕ್ರಮೇಣ ಮುಂಬೈ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರವಾದುದು ಸಾಮಾನ್ಯ ಸಂಗತಿಯಲ್ಲ. ಈ ಪತ್ರಿಕೆ ಮುಂಬೈ ಕನ್ನಡಿಗರ ಕಾಲಕಾಲದ ಸಾಹಸ ಸಾಧನೆಗಳನ್ನೂದಾಖಲೆ ಮಾಡಿ ಮಹದುಪಕಾರ ಮಾಡಿದೆ. ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳುವಳಿ, ಮುಂಬೈಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೀಗೆ ಹತ್ತು ಹಲವು ಮಹತ್ವದ ಚಾರಿತ್ರಿಕ ಸಂಗತಿಗಳ ವರದಿ ವಿವರ ‘ಮೊಗವೀರ’ದಲ್ಲಿ ಸ್ಥಾಯಿಯಾಗಿವೆ. ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ, ನರಸಿಂಹ ಸ್ವಾಮಿ,ವ್ಯಾಸರಾಯ ಬಲ್ಲಾಳ,ಸರೋಜಿನಿ ಮಹಿಷಿ, ಶ್ರೀನಿವಾಸ ಹಾವನೂರ, ಅನಕೃ, ರಾಮಚಂದ್ರ ಉಚ್ಚಿಲ್, ಬಿ. ಎ. ಸನದಿ, ಅರವಿಂದ ನಾಡಕರ್ಣಿ ಮೊದಲಾಗಿ ನೂರಾರು ಮಂದಿ ಲೇಖಕರ, ಸಾಧಕರ ಬರವಣಿಗೆ ಈ ಮಾಸಿಕದಲ್ಲಿ ಬೆಳಕು ಕಂಡಿರುವುದು ವಿಶೇಷ. ಮುಂಬೈಯನ್ನು ಸಾಹಿತ್ಯ ವಲಯವಾಗಿ ರೂಪಿಸುವಲ್ಲಿ ಈ ಮಾಸಿಕದ ಯೋಗದಾನ ಬಲು ದೊಡ್ಡದು. ಮೊಗವೀರ ಸಾಕಷ್ಟು ಹೊಸ ಲೇಖಕರಿಗೆ ವೇದಿಕೆ ಕಲ್ಪಿಸಿಕೊಟ್ಟದ್ದು ಈಗ ಇತಿಹಾಸ. ಮೊಗವೀರ ಮಾಸಿಕದ ಮೂಲಕ ನಾನು ಬರವಣಿಗೆ ಕೃಷಿ ಮಾಡುವಂತೆ ಆಯಿತು ಎಂಬುದಾಗಿ ಹಿರಿಯ ರಂಗ ತಜ್ಞ ಸದಾನಂದ ಸುವರ್ಣ ಅವರು ಈ ಮಾಸಿಕದ ಸಹಾಯವನ್ನು ಒಂದೆಡೆ ಸ್ಮರಣೆ ಮಾಡಿಕೊಂಡಿದ್ದಾರೆ. ಅನೇಕ ದಶಕಗಳಿಂದ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡಿ ಹೊಸ ಲೇಖಕರಿಗೆ ಹುರುಪು ತುಂಬುವ ಕಾಯಕ ಸಹ ಈ ಹೊರನಾಡಿನ ಮಾಸಿಕದ ಮೂಲಕ ನಡೆದಿರುವುದು ಸಣ್ಣ ಮಾತೇನಲ್ಲ. ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಚಂದಾದಾರರಿರುವ ಈ ಪತ್ರಿಕೆ ಮರಾಠಿ ಮಣ್ಣಿನಲ್ಲಿ ಕನ್ನಡದ ಕಂಪು ಸೂಸುವಲ್ಲಿ ಯಶಸ್ಸುಕಂಡಿದೆ.
ಮುಂಬೈನ ಇತರ ಸಂಘ ಸಂಸ್ಥೆಗಳ ಮುಖವಾಣಿಗಳಿಗೆ ‘ಮೊಗವೀರ’ ಮಾಸಿಕ ಮೂಲ ಪ್ರೇರಣೆ ಹಾಗೂ ಮಾದರಿಯೂ ಆಗಿದೆ. ಈ ಮಾಸಿಕ ಮುಂಬೈ ಮಹಾನಗರದಲ್ಲಿ ಬೆಳಗಿ ಬಾಳಿದ ಬಗೆಯನ್ನು ಕವಿ, ಲೇಖಕರಾದ ಡಾ ಜಿ. ಪಿ. ಕುಸುಮಾ ಅವರು ತಮ್ಮ ‘ಮೊಗವೀರ’ ಪತ್ರಿಕೆ ಒಂದು ಅಧ್ಯಯನ ಕೃತಿಯಲ್ಲಿ ಸೊಗಸಾಗಿ ಅನಾವರಣಗೊಳಿಸಿದ್ದಾರೆ. ‘ಮೊಗವೀರ’ ಮಾಸಿಕದ ನಡಾವಳಿ, ಸಾಹಸ ಸಾಧನೆ, ಅನನ್ಯತೆಗಳನ್ನು ಎತ್ತಿ ಹಿಡಿದು ದಾಖಲಿಸಿ ಸಂಪ್ರಬಂಧ ರಚಿಸಿ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಮೊಗವೀರ ಪತ್ರಿಕೆಯ ಅನನ್ಯತೆಯನ್ನು ಅವರು ತಮ್ಮ ಕೃತಿಯಲ್ಲಿ ಹೀಗೆ ದಾಖಲಿಸಿದ್ದಾರೆ.
1. 1939 ರಿಂದ ನಿಯತವಾಗಿ ಪ್ರಕಟವಾಗುತ್ತಿರುವುದು.
2. ಪ್ರಾರಂಭದಿಂದಲೂ ಕನ್ನಡ ಬರಹಗಾರರನ್ನು ಸಂಪಾದಕರನ್ನಾಗಿ ಪಡೆದಿರುವುದು.
3. ಮುಂಬಯಿಯಲ್ಲಿ ಸಮುದಾಯದ ಸಂಘಟನೆಯ ಮುಖವಾಣಿಗಳಿಗೆ ನಾಂದಿ ಹಾಡಿದ ಪತ್ರಿಕೆ (ಕನ್ನಡ) ಇದಾಗಿರುವುದು.
4. ಜಾತ್ಯತೀತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು.
5. ಹೊರನಾಡಾದ ಮುಂಬಯಿಯಲ್ಲಿ ಎಂಬತ್ತು ಸಂವತ್ಸರಗಳನ್ನು ದಾಟಿ ನಿಂತ ಏಕೈಕ ಕನ್ನಡ ಮಾಸಿಕ ಇದಾಗಿರುವುದು.
6. ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು.
7. 20ನೆಯ ಶತಮಾನದಿಂದ ಹೊರಟು 21ನೆಯ ಶತಮಾನದಲ್ಲೂ ದಿಟ್ಟ ಹೆಜ್ಜೆಯನ್ನು ಇಟ್ಟು ಹೊರನಾಡಿನಲ್ಲಿ ಸಮೃದ್ಧವಾಗಿ ಬೆಳೆಯುತ್ತಿರುವುದು
ಹೀಗೆ ಮುಂಬೈ ಮಹಾನಗರದಲ್ಲಿ ಮೊಗವೀರ ಪತ್ರಿಕೆ ಕನ್ನಡ ಸಂಸ್ಕೃತಿಯ ಕಂಪನ್ನು ಮನೆ ಮನಕ್ಕೆ ಮುಟ್ಟಿಸುತ್ತಾ ಬಂದ ಬಗೆಯನ್ನು ಇಲ್ಲಿ ಲೋಕಮುಖಕ್ಕೆ ಕಟ್ಟಿಕೊಟ್ಟಿರುವುದು ಔಚಿತ್ಯಪೂರ್ಣ ಉಪಕ್ರಮ.
‘ಮೊಗವೀರ’ ವ್ಯವಸ್ಥಾಪಕ ಮಂಡಳಿಯು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಅವರ ವೈಚಾರಿಕ ಪಾತಳಿಯ ಮಟ್ಟವನ್ನು ಮೇಲೆತ್ತಲು ಪತ್ರಿಕೋದ್ಯಮವನ್ನು ಅಸ್ತ್ರವನ್ನಾಗಿಸಿಕೊಂಡದ್ದು ಅವರ ದೂರದೃಷ್ಟಿಗೆ ನಿದರ್ಶನವಾಗಿದೆ.
ಕಳೆದ ಎಂಬತ್ತೈದು ವರ್ಷಗಳಲ್ಲಿ ಅನ್ಯಭಾಷಾ ಪರಿಸರದಲ್ಲಿ ಮೊಗವೀರ ಪತ್ರಿಕೆ ರಾಷ್ಟ್ರ ಕಟ್ಟುವ, ಕನ್ನಡದ ಸಾಂಸ್ಕೃತಿಕ ಚಹರೆಯನ್ನು ವಿಸ್ತರಿಸುವ ಹಾಗೂ ಬೆಳೆಸುವ, ಜನಾಂಗದ ಕಾಳಜಿಯನ್ನು ಲಕ್ಷಿಸಿ ಸಮಸ್ಯೆ ನಿವಾರಣೆಯಂತಹ ಜವಾಬ್ದಾರಿ ಹೊತ್ತು ಅದನ್ನು ಸಮರ್ಥವಾಗಿ ನಿಭಾಯಿಸಿದ ಬಗೆ ಯಾರನ್ನೂ ಬೆರಗುಗೊಳಿಸದೇ ಬಿಡದು. 20ನೆಯ ಶತಮಾನದ ಆದಿ ಭಾಗದಲ್ಲಿ ಶಿಕ್ಷಣ ರಂಗದಲ್ಲಿ ಹಿಂದುಳಿದಿದ್ದ ಮೊಗವೀರ ಸಮುದಾಯದ ಜನರನ್ನು ಶಿಕ್ಷಿತರನ್ನಾಗಿಸಲು ಪ್ರೇರೇಪಿಸುವಂತಹ ಲೇಖನಗಳನ್ನು ಪ್ರಕಟಿಸುತ್ತ ಶ್ರೀಸಾಮಾನ್ಯರಲ್ಲಿ ವಾಚನಾಭಿರುಚಿ ಸಾಹಿತ್ಯಾಭಿರುಚಿ ಮೂಡುವಂತೆ ಮಾಡಿ ಸಮುದಾಯದ ಹಿತ ಕಾಯುವಲ್ಲಿ ‘ಮೊಗವೀರ’ ಪತ್ರಿಕೆ ವಹಿಸಿದ ಪಾತ್ರ ಗುರುತರವಾದುದು. ಮುಂಬೈಯಂತಹ ಮಹಾನಗರದಲ್ಲಿ ‘ಮೊಗವೀರ’ ಪತ್ರಿಕೆ ಕನ್ನಡ ಪತ್ರಿಕಾ ರಂಗದಲ್ಲಿ ಎತ್ತರದಲ್ಲಿ ನಿಂತಿದೆ. ಜಾತೀಯ ಕವಚವನ್ನು ಕಳೆದು ಜಾತ್ಯತೀತವಾಗಿ ಬೆಳೆದು ಕನ್ನಡಿಗರ ಗಟ್ಟಿ ದನಿಯಾಗಿ ಈ ಪತ್ರಿಕೆ ಮೂಡಿ ಬಂದ ರೋಚಕ ಇತಿಹಾಸ ನಮ್ಮ ಗಮನ ಸೆಳೆಯುತ್ತದೆ.
‘ಮೊಗವೀರ’ ಪತ್ರಿಕೆಯನ್ನು ಜನಮನಕ್ಕೆ ಮುಟ್ಟಿಸಲು ಹೊಸ ಹೊಸ ಉಪಕ್ರಮಗಳನ್ನು ಚಾಲ್ತಿಗೆ ತಂದ ಶ್ರೇಯಸ್ಸು ‘ಮೊಗವೀರ’ ಪತ್ರಿಕೆಯ ಸಂಪಾದಕರಾಗಿರುವ ಲೇಖಕ, ಸಂಘಟಕ ಅಶೋಕ ಸುವರ್ಣ ಅವರಿಗೆ ಸಲ್ಲುತ್ತದೆ. ಮರಾಠಿ ಮಣ್ಣಿನಲ್ಲಿ ಕನ್ನಡದ ಪತ್ರಿಕೆಯೊಂದನ್ನು ಅವಿರತವಾಗಿ ನಿಯತವಾಗಿ ಸಂಪಾದಿಸಿ ಪ್ರಕಟಿಸುವುದು ನಿಜವಾಗಿಯೂ ಸಾಹಸದ ಕಾಯಕ. ಮುಂಬೈ ನಗರ ಹಾಗೂ ಉಪನಗರಗಳಲ್ಲಿ ‘ಮೊಗವೀರ’ ಪತ್ರಿಕೆಯ ಓದುಗರ ಸಮಾವೇಶಗಳನ್ನು ಆಯೋಜಿಸುತ್ತ ಅದರ ಸಮೃದ್ಧಿಗೆ ಅವರು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ಹೆಮ್ಮೆಯ ಸಂಗತಿ. ಮೊಗವೀರ ಪತ್ರಿಕೆ ಮುಂಬೈನ ತುಳು ಕನ್ನಡಿಗರ ಕಣ್ಮಣಿಯೂ ಆಗಿದೆ.
ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ