ಸಂಪ್ರದಾಯದ ಹೆಜ್ಜೆ ಮೀರದ ಗಾಂಭೀರ್ಯದ ಪ್ರವೇಶ. ಏರುಧ್ವನಿಯಲ್ಲಿ ಪುಂಖಾನುಪುಂಖವಾಗಿ ಹೊರಹೊಮ್ಮವ ನುಡಿಲಹರಿ, ಸಾಂದರ್ಭಿಕವಾಗಿ ಬಳಸುವ ಸಂಸ್ಕೃತದ ನುಡಿಗಟ್ಟು, ಇದಿರು ಪಾತ್ರಧಾರಿಯ ನುಡಿಬಾಣವನ್ನು ಕತ್ತರಿಸಬಲ್ಲ ಜಾಣ್ಮಿ ಇದು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ರಂಗಭೂಮಿಯಲ್ಲಿ ಮೆರೆದ ಕೀರಿಕ್ಕಾಡು ಗಣೇಶ ಶರ್ಮರ ಪಾತ್ರ ಲಕ್ಷಣ. ಸುಮಾರು ನಾಲ್ಕು ದಶಕಗಳ ಕಾಲ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ವೃತ್ತಿಪರ ಕಲಾವಿದನಾಗಿ, ಯಕ್ಷಗಾನ ಕಲಾಕಾಸಕ್ತರಿಗೆ ಗುರುವಾಗಿ, ಪ್ರಸಂಗಕರ್ತರಾಗಿ, ತಾಳಮದ್ದಳೆಯ ಅರ್ಥಧಾರಿಯಾಗಿ ಯಕ್ಷಗಾನದ ಬಹು ಸಾಧ್ಯತೆಗಳಿಗೆ ತನ್ನನ್ನು ತೆರೆದುಕೊಂಡವರು.
ಜನಿಸಿದ್ದು 1952ರ ಮಾರ್ಚ್ 22ರಂದು ಕಾಸರಗೋಡಿನ ದೇಲಂಪಾಡಿ ಗ್ರಾಮದ ಕಂಬಳಿ ಕೇರಿಯ ಕೀರಿಕ್ಕಾಡಿನಲ್ಲಿ ತಂದೆ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರು ಶಾಲಾ ಅಧ್ಯಾಪಕರು ಹಾಗೂ ಯಕ್ಷಗಾನದ ಹವ್ಯಾಸಿ ಅರ್ಥಧಾರಿಯೂ ಆಗಿದ್ದರು. ತಾಯಿ ಸರಸ್ವತಿ ಸಂಸ್ಕೃತ ಜ್ಞಾನವುಳ್ಳವರಾಗಿದ್ದರು. ಗಣೇಶ ಶರ್ಮರ ದೊಡ್ಡಪ್ಪ ಕೀರಿಕ್ಕಾಡು ವಿಷ್ಣು ಶರ್ಮರು ತಾಳಮದ್ದಳೆಯ ಅಗ್ರಮಾನ್ಯ ಅರ್ಥಧಾರಿಗಳ ಸಾಲಿನಲ್ಲಿ ಗುರುತಿಸಿಕೊಂಡವರು. ದೇಲಂಪಾಡಿಯಲ್ಲಿ ಪ್ರಾಥಮಿಕ ಶಾಲೆ ಹಾಗೂ ಮುಳ್ಳೇರಿಯದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ಶರ್ಮರು ಯಕ್ಷಗಾನದ ವಾತಾವರಣದಲ್ಲೆ ಬಾಲ್ಯವನ್ನು ಅನುಭವಿಸಿದರು. ತನ್ನೊಳಗಿನ ಕಲಾವಿದ ತನಗರಿವಿಲ್ಲದಂತೆ ಜಾಗೃತಿವಾಗಿತ್ತು. ಧರ್ಮಸ್ಥಳದ ಲಲಿತ ಕಲಾ ಕೇಂದ್ರ ಸೆಳೆಯಿತು. ಗೋವಿಂದ ಭಟ್ಟರು ಅಲ್ಲಿ ಗುರುಗಳಾಗಿದ್ದರು.
ಕರ್ಗಲ್ಲು ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥರಿಂದಲೂ ನೃತ್ಯದ ವಿವಿಧ ಮಟ್ಟುಗಳನ್ನು ಕರಗತ ಮಾಡಿಕೊಂಡ ಇವರು ಮದ್ದಳೆಗಾರ ನೆಡ್ಲೆ ನರಸಿಂಹ ಭಟ್ಟರ ಮಾರ್ಗದರ್ಶನದಲ್ಲಿ ಬೆಳೆದವರು.
ತನ್ನ ಹದಿನಾರನೆಯ ವಯಸ್ಸಿನಲ್ಲಿ ದೇವೆಂದ್ರನಾಗಿ ರಂಗಪ್ರವೇಶ ಮಾಡಿದ ಶರ್ಮರು ತನ್ನ ವಯಸ್ಸಿನ ಪ್ರೌಢಿಮೆಯಿಂದ ಹಿರಿಯ ಕಲಾವಿದರ ಶ್ಲಾಘನೆಗೆ ಪಾತ್ರರಾದರು. ಶರ್ಮರ ಯಕ್ಷಯಾನದಲ್ಲಿ ಕಟೀಲು ಮೇಳದ ಒಂದುವರೆ ದಶಕಗಳ ಕಾಲ ಅತ್ಯಂತ ಮಹತ್ವ ಪೂರ್ಣವಾದುದು.
ತನ್ನ ವಿದ್ವತ್‌ಪೂರ್ಣ ವಾಕ್ ವೈಖರಿಯ ಮೂಲಕ ‘ಜಾಬಾಲಿ’ಯ ಪಾತ್ರವನ್ನು ನಿರ್ವಹಿಸಿ ಯಶಸ್ಸು ಕಂಡವರು. ಪೂರ್ಣರಾತ್ರಿಯ ಯಕ್ಷಗಾನದಲ್ಲಿ ಕಲಾವಿದನಿಗೆ ಪಾತ್ರಕ್ಕೆ ನ್ಯಾಯ ನೀಡುವುದಕ್ಕೆ ಬೇಕಾದಷ್ಟು ಕಾಲಾವಕಾಶವಿತ್ತು. ದೇವಿ ಮಹಾತ್ಮೆಯ ‘ಬ್ರಹ್ಮ’ನಾಗಿ ಲೋಕ ಸೃಷ್ಟಿಯಲ್ಲಿ ಬ್ರಹ್ಮನ ಸ್ಥಾನವೇನು ಎಂಬುವುದನ್ನು ತರ್ಕಬದ್ಧ ಮಾತುಗಳ ಮೂಲಕ ಅನಾವರಣ ಮಾಡುವ ಶರ್ಮರ ಶೈಲಿ ಅನನ್ಯವಾದುದು.
‘ದೇವಿ ಮಹಾತ್ಮೆ’ಯಲ್ಲಿ ಮಹಿಷಾಸುರ ಮತ್ತು ‘ದೇವಿ’ ಪಾತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಶರ್ಮರದ್ದು. ಶೇಣಿ ಗೋಪಾಲಕೃಷ್ಣ ಭಟ್ಟರಂತಹ ಅತಿರಥ ಮಹಾರಥರು. ಸುರತ್ಕಲ್ ಮೇಳದಲ್ಲಿ ಮೇರೆಯುತ್ತಿದ್ದ ಕಾಲದಲ್ಲಿ ಬಾಲಕಲಾವಿದರಾಗಿ ರಂಗ ಪ್ರವೇಶ ಮಾಡಿದ ಗಣೇಶ ಶರ್ಮರಿಗೆ ಹಿರಿಯ ಸಹ ಕಲಾವಿದರಿಂದ ದೊರೆತ ಅನುಭವ ಸಮೃದ್ಧವಾದುದು. ತಾನು ನಿರ್ವಹಿಸಿದ ದಕ್ಷ, ಅತಿಕಾಯ ಬಲಿ, ಅಕ್ರೂರ, ಕಾರ್ತವೀರ್ಯ, ಸುಧನ್ವ ಮೊದಲಾದ ಪಾತ್ರಗಳಲ್ಲಿ ವ್ಯಕ್ತವಾಗುತ್ತಿದ್ದ ಪುರಾಣದ ತಿಳುವಳಿಕೆ, ಪಾತ್ರವನ್ನು ರಂಗದಲ್ಲಿ ರೂಪಿಸುವ ಕ್ರಮ, ಪರಂಪರೆಯ ಪ್ರಜ್ಞೆ ಶರ್ಮರಿಗೆ ಸಲೀಸು.
ಕಲಾ ಮೌಲ್ಯದ ದೃಷ್ಟಿಯಿಂದ ನಿಷ್ಠುರವಾದಿಯಾಗಿದ್ದ ಶರ್ಮರು ತನ್ನನ್ನು ಒಂದು ಮೇಳಕ್ಕೆ ಸೀಮಿತಗೊಳಿಸಿದವರಲ್ಲ. ಸುಂಕದಕಟ್ಟೆ, ಬಪ್ಪನಾಡು, ಇರುವೈಲು, ಕೊಲ್ಲಂಗಾನ, ಮಲ್ಲ, ಸೋರ್ನಾಡು, ಗಣೇಶಪುರ ಮೇಳಗಳಲ್ಲಿ ಒಂದೆರಡು ವರ್ಷ ತಿರುಗಾಟ ನಡೆಸಿದ ಅನುಭವಿ.
ಬಹುಮುಖ ಅಭಿರುಚಿ :
ಯಕ್ಷಗಾನದ ಬಹುಮುಖ್ಯ ವಾಚಿಕ ರೂಪವಾದ ತಾಳಮದ್ದಳೆಯಲ್ಲಿ ಶೇಣಿ, ಸಾಮಗ, ತೆಕ್ಕಟ್ಟೆ ಮೊದಲಾದ ಕಲಾವಿದರೊಂದಿಗೆ ಅರ್ಥ ಹೇಳಿ ಸೈ ಎನಿಸಿಕೊಂಡವರು. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಕರ್ಣನಿಗೆ ಅರ್ಜುನನಾಗಿ, ಕೌರವನಿಗೆ ವಿದುರನಾಗಿ ಶರ್ಮರ ನುಡಿಜಾಣ್ಮಿ ಸಹೃದಯದ ಮನಗೆದ್ದಿತ್ತು. ತಾಳಮದ್ದಳೆ ರಂಗದಲ್ಲಿ ಶರ್ಮರನ್ನು ಹಿರಿ ಕಿರಿಯ ಕಲಾವಿದರ ಕೊಂಡಿಯಾಗಿ ಗುರುತಿಸಬಹುದು.
ತಾನು ಕಲಿತ ಕಲೆಯನ್ನು ಆಸಕ್ತರಿಗೆ ಕಲಿಸಿ ಹೊಸ ತಲೆಮಾರಿನ ಯುವಕರನ್ನು ರೂಪಿಸಿ ಸಾರ್ಥಕತೆ ಕಂಡವರು. ‘ಸುರಗಿರಿ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ಬರೆದು ರಂಗಕ್ಕೆ ತಂದವರು. ‘ಋಷ್ಯಾಂತರಂಗ’ ಎಂಬ ಇವರ ಕೃತಿಯೂ ಪ್ರಕಟಗೊಂಡಿದೆ.
ಆಹ್ವಾನಿತ ಕಲಾವಿದರಾಗಿ ರಂಗದಲ್ಲಿ ಸದಾ ಕ್ರಿಯಾಶೀಲರಾಗಿರುವ ಶರ್ಮರು ಪ್ರಚಾರದ ಹಿಂದೆ ಹೋದವರಲ್ಲ. ಜನಾಕರ್ಷಣೆಯ ನೆಪದಲ್ಲಿ ಯಕ್ಷಗಾನವನ್ನು ದುರ್ಬಳಕೆ ಮಾಡುವುದನ್ನು ಸಹಿಕೊಂಡವರಲ್ಲ.
ಯಕ್ಷಗಾನದ ಮಹತ್ವದ ಪ್ರಶಸ್ತಿಗಳು ಸಲ್ಲಬೇಕಾಗಿದ್ದರೂ ಶರ್ಮರು ಅಲ್ಲೊಂದು ಇಲ್ಲೊಂದು ನಡೆದ ಅಭಿಮಾನಿಗಳ ಸನ್ಮಾನದಲ್ಲೇ ತೃಪ್ತಿ ಕಂಡರು. ಕಳೆದ ಮೂರು ದಶಕಗಳಿಂದ ಯಕ್ಷಗಾನಕ್ಕೆ ಪ್ರಸಿದ್ಧವಾದ ಸಿದ್ಧಕಟ್ಟೆ ಸಮೀಪದ ಆರಂಬೋಡಿಯ ಪಿಲ್ಲಂಬುಗೋಳಿಯಲ್ಲಿ ಪತ್ನಿ ಹಾಗೂ ಇಬ್ಬರು ಅವಳಿ ಮಕ್ಕಳೊಂದಿಗೆ ವಾಸವಾಗಿರುವ ಶರ್ಮರು ಜ್ಯೋತಿಷ್ಯ, ಸಂಘಟನೆ, ಲೇಖನ ಮೊದಲಾದ ಬಹು ಅಭಿರುಚಿಗಳ ಮೂಲಕ ಕ್ರಿಯಾಶೀಲತೆಯನ್ನು ಕಾಪಾಡಿಕೊಂಡವರು.
ಲೇಖಕರು- ಡಾ. ಯೋಗೀಶ ಕೈರೋಡಿ