ಇಂದು ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದೆಯಾಗಿ ಮತ್ತು ಸಮಾಜ ಸೇವಾ ಧುರೀಣೆ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯ ಪೂರ್ಣಿಮಾ ರಜಿನಿ ಅವರದು ಅನನ್ಯ ಸೇವೆ. ಏಳರ ಎಳವೆಯಲ್ಲೇ ಹಿರಿಯ ನಾಟ್ಯಗುರು ರಾಧಾ ಶ್ರೀಧರ್ ಅವರಲ್ಲಿ ಭರತನಾಟ್ಯ ಕಲಿತು, ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪರಿಶ್ರಮಿಸಿ, ಸಾಧನೆಯ ಪಥದಲ್ಲಿ ಸಾಗಿರುವ ಪೂರ್ಣಿಮಾ ಅವರದು, ಎರಡೂವರೆ ದಶಕಗಳ ಕಾಲದ ಅವಿರತ ಪರಿಶ್ರಮ.
ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರ ವೈಶಿಷ್ಟ್ಯವೆಂದರೆ ಚಿಕ್ಕವಯಸ್ಸಿನಲ್ಲೇ ಭಾರತ ಸರ್ಕಾರದ ಫೆಲೋಶಿಪ್ ದೊರೆತದ್ದು ಆಕೆಯ ಪ್ರತಿಭೆಗೆ ಸಾಕ್ಷಿ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮತ್ತು ನಟುವಾಂಗದಲ್ಲೂ ಸಮರ್ಥ ತರಬೇತಿ ಪಡೆದರು. ದೇಶಾದ್ಯಂತ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ಖ್ಯಾತಿ. ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಯಲ್ಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ.ಪದವಿಯನ್ನೂ ಪಡೆದುಕೊಂಡರು. ಪಿ.ಇ.ಎಸ್. ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಯಾಗಿರುವ ಇವರು ಬೆಂ. ವಿ.ವಿ.ದಿಂದ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಇವರಿಗೆ ಕಲ್ಕತ್ತೆಯ ಐ.ಐ.ಎಂ.ನಿಂದ ‘ವುಮನ್ ಎಂಟರ್ಪ್ರಿನರ್ಷಿಪ್ ಮತ್ತು ಲೀಡರ್ ರ್ಶಿಪ್ ಪ್ರೋಗ್ರಾಮ್’ ಪದವಿ ಲಭ್ಯ.
ದೂರದರ್ಶನದಲ್ಲಿ ಗ್ರೇಡೆಡ್ ಕಲಾವಿದೆಯಾಗಿ, ಒಂದೇ ವರ್ಷದಲ್ಲಿ ಬೆಂಗಳೂರು ದೂರದರ್ಶನದಿಂದ ಐದು ಪ್ರಮುಖ ನೃತ್ಯೋತ್ಸವಗಳಲ್ಲಿ ನೃತ್ಯ ಪ್ರಸ್ತುತಿ ಪಡಿಸಲು ಆಹ್ವಾನ ಪಡೆದದ್ದು, ಕೇವಲ 23 ವರ್ಷದ ಯುವತಿ ಕರ್ನಾಟಕ ಸರ್ಕಾರ ನಡೆಸುವ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರೂ ಆಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಮುಂದೆ ಹೈದರಾಬಾದಿನಲ್ಲಿ ಪದ್ಮಶ್ರೀ ಡಾ. ಆನಂದಶಂಕರ್ ಜಯಂತ್ ಗರಡಿಯಲ್ಲಿ ಕಲಾಕ್ಷೇತ್ರ ಬಾನಿಯ ನೃತ್ಯ ತರಬೇತಿಯನ್ನು ಪಡೆದರು. ಜೊತೆಗೆ ಅನೇಕ ಹೊಸ ನೃತ್ಯರೂಪಕಗಳನ್ನು ತಯಾರಿಸಿ ದೇಶದಾದ್ಯಂತ ಪ್ರದರ್ಶನ ನೀಡಿದ ಅನುಭವ.
ಅಮೇರಿಕಾ ಮತ್ತು ಯು.ಎ.ಇ.ಗಳಲ್ಲಿ ಅನೇಕ ಪ್ರಮುಖ ನೃತ್ಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದ ಇವರು, ಮುಂದೆ ಬೆಂಗಳೂರಿನಲ್ಲಿ ಸಮಾಜ ಸೇವಾ ನಿಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ, ಕೊಳಗೇರಿ, ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಯೋಗ-ಸಂಗೀತ ಮತ್ತು ನೃತ್ಯ ವಿಶೇಷ ತರಬೇತಿಗಳನ್ನು ನೀಡುತ್ತಿದ್ದಾರೆ.
ತಮ್ಮದೇ ಆದ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಅಂಡ್ ಮ್ಯೂಸಿಕ್’ ಸಂಸ್ಥಾಪಕ ನಿರ್ದೇಶಕಿಯಾಗಿ ಒಂಭತ್ತು ಶಾಖೆಗಳಲ್ಲಿ ಶಿಕ್ಷಣ ನೀಡುತ್ತಿರುವ ಪೂರ್ಣಿಮಾಗೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನ-ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ‘ನೃತ್ಯ ಕ್ಷೇತ್ರದಲ್ಲಿ ಯುವ ಕಲಾವಿದರ ವಿಶಿಷ್ಟ ಕೊಡುಗೆಯ ಫೆಲ್ಲೋಶಿಪ್’ ಪಡೆದಿದ್ದಾರೆ. ಮಹಿಳಾ ಸಬಲೀಕರಣದ ವೈಚಾರಿಕ ಪ್ರಜ್ಞೆಯುಳ್ಳ ಉತ್ತಮ ವಾಗ್ಮಿ, ಹೋರಾಟಗಾರ್ತಿ, ಕ್ರಿಯಾಶೀಲೆ ಕೂಡ ಆಗಿರುವ ಇವರ ಕಾರ್ಯತತ್ಪರತೆ ಗುರುತಿಸಿ ‘ಎಕ್ಸಲೆನ್ಸಿ’ ಪ್ರಶಸ್ತಿ, ರೇಡಿಯೋ ಸಿಟಿ 91.1 ಎಫ್.ಎಂ. ವಾಹಿನಿ ‘ಬೆಂಗಳೂರು ಸಿಟಿ ಐಕಾನ್ ಪ್ರಶಸ್ತಿ, ನಾಟ್ಯ ಕುಸುಮಾಂಜಲಿ, ‘ಶತಾಕ್ಷಿ’ ಪ್ರಶಸ್ತಿ, ಅತ್ಯುನ್ನತ ಶಿಕ್ಷಣ ತಜ್ಞೆ, ಪ್ರೈಡ್ ಆಫ್ ನೇಷನ್, ಭೂಮಿಕ-ಮಹಿಳಾ ಸಾಧಕಿ, ಇಂಡಿಯಾ ಸ್ಟಾರ್ ಪರ್ಸನಾಲಿಟಿ ಪ್ರಶಸ್ತಿ, ಇಂಡಿಯನ್ ಬೆಸ್ಟ್ ವುಮನ್ ಎಂಟರ್ಪ್ರಿನರ್ ಪ್ರಶಸ್ತಿ, ಹ್ಯುಮ್ಯಾನಿಟೇರಿಯನ್ ಎಕ್ಸಲೆನ್ಸಿ ಪ್ರಶಸ್ತಿ ಮುಂತಾದ ಅನೇಕಾನೇಕ ಉನ್ನತ ಪ್ರಶಸ್ತಿಗಳ ಜೊತೆಗೆ ಇದೀಗ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’ಯ ಗರಿ ಇವರ ಮುಡಿಗೇರಿದೆ.
- ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.