ಬೆಂಗಳೂರು : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ (ರಿ.) ಇದರ ವತಿಯಿಂದ ಕೊಡಮಾಡುವ 49ನೇ ವರ್ಷದ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಆರ್ಯಭಟ ನೃತ್ಯೋತ್ಸವ ಕಾರ್ಯಕ್ರಮವು ದಿನಾಂಕ 23-06-2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಸಮಾರಂಭವನ್ನು ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಬಿ. ಪ್ರಭಾಕರ ಶಾಸ್ತ್ರಿ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಭಾರತೀಯ ಚಲನಚಿತ್ರ ನಿರ್ದೇಶಕರಾದ ಶ್ರೀ ಹೆಚ್.ಆರ್. ಭಾರ್ಗವ ಮತ್ತು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹೆಚ್.ಎಲ್.ಎನ್. ರಾವ್ ಇವರುಗಳು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
‘ಆರ್ಯಭಟ ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ದಿವಾಕರ್ ದಾಸ್ ಇವರ ನಿರ್ದೇಶನದಲ್ಲಿ ಕಾವಳಕಟ್ಟೆ ಬಂಟ್ವಾಳದ ಶೃತಿ ಆರ್ಟ್ಸ್ ಇವರಿಂದ ಜಾನಪದ ಗೊಂಬೆಗಳ ಪ್ರದರ್ಶನ ಮತ್ತು ನೃತ್ಯ, ಕೆ. ಲಕ್ಷ್ಮಣ ಸುವರ್ಣರವರಿಂದ ಮೇಲೋಡಿಕ ವಾದನ ಹಾಗೂ ರವಿರಾಜ, ಕು. ಸಿರಿ ಚಂದ್ರಶೇಖರ್ ಮತ್ತು ಹರ್ಷಿಶ ರಾವ್ ಇವರಿಂದ ಗೀತಗಾಯನ, ಬೆಂಗಳೂರಿನ ಕೆ.ಆರ್. ಪುರದ ಮಹಾನಟ ನೃತ್ಯ ಮಂದಿರ, ನಾಗರಭಾವಿಯ ಮಾರ್ಗಂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ವಿಜಯನಗರದ ಸುಧೀಂದ್ರ ನೃತ್ಯ ಕಲಾನಿಕೇತನ ತಂಡದವರಿಂದ ಭರತನಾಟ್ಯ, ಚಂದ್ರಿಕ ಪೆರ್ಡೂರ್ ಇವರಿಂದ ಯಕ್ಷಗಾನ, ‘ಕಲಾಯೋಗಿ’ ಕೆ.ಪಿ. ಸತೀಶ್ ಬಾಬು ತಂಡದವರಿಂದ ಬೊಂಬೆ ವೈಭವ, ಮಾಸ್ಟರ್ ತ್ರಿದಾತ್ ಸಾಗರ ಇವರಿಂದ ಸ್ಯಾಕ್ಯೋಫೋನ್ ವಾದನ ಮತ್ತು ಬೆಂಗಳೂರಿನ ನಾದತರಂಗ ತಂಡದವರಿಂದ ಚೆಂಡೆ ವಾದನ ಪ್ರಸ್ತುತಗೊಳ್ಳಲಿದೆ.