ಐದು ಬತ್ತಿಯಿರಿಸಿ ಸಾಲಾಗಿ ಉರಿಸಿಟ್ಟ ತುಪ್ಪದ ದೀಪಗಳು. ಮೂಲೆಯೊಂದರಲ್ಲಿ ನಡುಗುತ್ತಾ ಕುಳಿತ ಇಟ್ಟಿಚ್ಚಿರಿ. ವಿವಾಹಾನಂತರದ ಪ್ರಸ್ತಕ್ಕೆ ಸಿದ್ಧವಾಗಿರುವ ನವವಧುವಿನ ಮಧುರವಾದ, ವರ್ಣನಾತೀತವಾದ ನಡುಕವಿರಬಹುದು. ತಳಮಳವಿರಬಹುದು. ನಡುಕ ಹೆಚ್ಚಾಯಿತು. ನೊರೆಯೂ ಜೊಲ್ಲೂ ಉಕ್ಕತೊಡಗಿತು. ನೆಲದ ಮೇಲೆ ಬಿದ್ದು ಬಿಲ್ಲಿನಂತೆ ಡೊಂಕಾದಳು. ಸೊಂಟ ಮುರಿದ ಹುಳದಂತೆ ಹೊರಳಿದಳು.ಚಡಪಡಿಸಿದಳು.ಕ್ರಮೇಣ ಬೆವರಿನಲ್ಲಿ ಮಿಂದು ಕ್ಷೀಣಿಸಿ ನಿದ್ದೆ ಹೋದಳು.
ಪ್ರಸ್ತ ಅದ್ಭುತವಾಗಿತ್ತು!
ಇದು ಇಟ್ಟಿಚ್ಚಿರಿಯ ಪ್ರಸ್ತ. ಮೇಲ್ನೋಟಕ್ಕೆ ಅದ್ಭುತವಾದ ಪ್ರಸ್ತದ ಒಳಾರ್ಥ ಅರಿವಾಗುವುದೇ ಅಶ್ವತ್ಥಾಮನನ್ನು ಓದುತ್ತಾ ಸಾಗಿದಾಗ. ಅಪಸ್ಮಾರ ರೋಗಿಯೊಬ್ಬಳ ಮೊದಲ ರಾತ್ರಿಯ ನೋವನ್ನು ಹೇಳಿಯೂ ಹೇಳದಂತೆ ಓದುಗನ ಮನಕ್ಕಿಳಿಸುವ ನಾ.ದಾಮೋದರ ಶೆಟ್ಟಿಯವರು ಅನುವಾದಿಸಿದ ಮಾಡಾಂಬ್ ಕುಂಞಕುಟ್ಟನ್ ಅವರ ಅಶ್ವತ್ಥಾಮನ್ ಕಾದಂಬರಿಯ ಸಾಲುಗಳು.
ತಪ್ಪುಗಳೇ ಮಾಡಲಿಲ್ಲವೆಂದು ಸರಾಗವಾಗಿದ್ದುಬಿಡುವ ಕಾದಂಬರಿಯ ನಾಯಕ ಕುಂಜಿಣ್ಣಿ ಕೊನೆಗೆ ಪ್ರಾಯಶ್ಚಿತದೊಳಗೆ ಬೇಯುವನೋ ಎಂದೆನಿಸಿದಾಗಲೇ ಇಲ್ಲ ಆತ ಬದಲಾಗಿಲ್ಲ ಎಂಬಂತೆ ಅಲ್ಲಲ್ಲಿ ಹೇಳಿದರೂ ಕೊನೆಗೆ ಮಹಾಭಾರತದ ಅಶ್ವತ್ಥಾಮನಂತೆ ತಪ್ಪಿನ ವ್ರಣಗಳು ಕೀವಾಗಿ, ನೋವಾಗಿ ಕಾಡತೊಡಗಿದಾಗ ಊರನ್ನೇ ಬಿಟ್ಟು ತೊರೆಯುವ ಆತನ ತೊಳಲಾಟಗಳ ಎಳೆಯೇ ಅಶ್ವತ್ಥಾಮ.
ಪ್ರತೀಕಾರಕ್ಕೋ, ಆ ಕ್ಷಣದ ಮೋಹಕ್ಕೋ ಅಥವಾ ಅನಿವಾರ್ಯಗಳಿಗಾಗಿಯೋ ಕುಂಜಿಣ್ಣಿಯೆಂಬ ಅಶ್ವತ್ಥಾಮನಿಗೆ ಎದುರಾದ ಉಣ್ಣಿಯಮ್ಮ, ಸಿಸಿಲಿ, ಸುಮಾ, ಮೇನಕೆ, ರಾಧೆ ಮುಂತಾದ ಹೆಣ್ಮಕ್ಕಳು ಮನುಷ್ಯ ವಿಕಾರದ! ಬಯಕೆಗಳ! ಸಾಕ್ಷೀರೂಪವಾಗಿ ಕೊನೆಯವರೆಗೂ ಕಾಡಿ ಇಟ್ಟಿಚ್ಚಿರಿಯೆಂದ ಕುಂಜಿಣ್ಣಿಯ ಮಡದಿಯೊಳಗೆ ಶಾಂತರೂಪವನ್ನು ಕಾಣುವುದು ಕಾದಂಬರಿಯ ವಿಶೇಷ.
ಕಾದಂಬರಿಯಲ್ಲಿ ಬರುವ ಅಶ್ವತ್ಥಾಮನೆಂಬ ಕುಂಜಿಣ್ಣಿ ಹಾಗೂ ಇತರೆ ಪಾತ್ರಗಳಿಗಿಂತಲೂ ಬಹಳವಾಗಿ ಕಾಡುವಾಕೆ ಇಟ್ಟಿಚ್ಚಿರಿ ಎಂದರೆ ಕುಂಜಿಣ್ಣಿಯ ಧರ್ಮಪತ್ನಿ. ತಾನು ಅಪಸ್ಮಾರ ರೋಗಿಯಾಗಿದ್ದು ಗಂಡನಿಂದ ತಿರಸ್ಕೃತೆಯಾದರೂ ‘ಇಲ್ಲಿಯವಳಾಗಲು ಕಲಿಯಬೇಕು’ ಎಂಬ ಅವಳ ಮಾತು ಗಂಡನ ಪ್ರೀತಿಯ ಹಂಬಲಿಕೆಯನ್ನು ಹೇಳುತ್ತದೆ. ಕೈ ಹಿಡಿದವನ ಎಲ್ಲಾ ಚಟಗಳನ್ನು ಬಲ್ಲವಳಾದರೂ ನಿರ್ಲಿಪ್ತಳಾಗಿ ಆತ ಬಂದೊಡನೆ ಬಲುಮುಗ್ಧಳಾಗಿ ಬೇಕುಬೇಡಗಳನ್ನು ವಿಚಾರಿಸುವ ಪರಿಯೇ ಒಂದು ಹಂತದಲ್ಲಿ ಶಾಪಗ್ರಸ್ಥ ಅಶ್ವತ್ಥಾಮನ ದುಶ್ಚಟಗಳ ತೊರೆಯುವಿಕೆಗೂ ಕಾರಣವಾಗುವುದರ ಮೂಲಕ ಕಾದಂಬರಿಯಲ್ಲಿ ಇಟ್ಟಿಚ್ಚಿರಿ ನಾಯಕಿಯಾಗುತ್ತಾಳೆ.
ಮೂರು ದಶಕಗಳ ಹಿಂದೆ ಕನ್ನಡಕ್ಕೆ ಅನುವಾದವಾಗಿದ್ದ ಕಾದಂಬರಿಯೊಂದು ಈಗ ಮತ್ತೆ ಎರಡನೇ ಮುದ್ರಣ ಕಾಣುತ್ತಿರುವುದು ಸಂತಸ ಹಾಗೂ ಎಲ್ಲಾ ಕಾಲಕ್ಕೂ ಕಾಡುವ ಅಶ್ವತ್ಥಾಮನ ಅಂತರಂಗದ ತೊಳಲಾಟ ಪ್ರಸ್ತುತ ಕಾಲದಲ್ಲಿ ಎಲ್ಲರದ್ದೂ ಹೌದು. ಇಂತಹ ಕಾದಂಬರಿಯನ್ನು ಮರುಮುದ್ರಿಸಿದ ಸಿರಿವರ ಪ್ರಕಾಶನಕ್ಕೂ ಅನುವಾದದ ಮೂಲಕ ಕುಂಜಿಣ್ಣಿಯನ್ನು ಕನ್ನಡದವರಿಗೂ ಅರಿಯಲು ಅನುವು ಮಾಡಿಕೊಟ್ಟ ನಾ.ದಾಮೋದರ ಶೆಟ್ಟಿಯವರಿಗೂ ಅಭಿನಂದನೆಗಳು.
- ಅಕ್ಷರ