ಬೆಂಗಳೂರು : ರಂಗನಿರಂತರ ಅರ್ಪಿಸುವ ರಂಗಾಸಕ್ತರ ಗಮನ ಸೆಳೆದ ಈ ವರ್ಷದ ಒಂದು ಪ್ರಮುಖ ನಾಟಕ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ಮೋಹನಚಂದ್ರ ಪಠ್ಯ ಮತ್ತು ನಿರ್ದೇಶನದಲ್ಲಿ ‘ಅಶ್ವತ್ಥಾಮ’ ದಿನಾಂಕ 12 ಜೂನ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮೊದಲನೇ ಬಾರಿ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ತ್ಯಾಗರಾಜ್ 9449074898, ಕಿರಣ್ ಸಿಜಿಕೆ 9663574999 ಮತ್ತು ವಿನೋದ್ 9448063542 ಸಂಖ್ಯೆಯನ್ನು ಸಂಪರ್ಕಿಸಿರಿ.
ನಾಟಕದ ಬಗ್ಗೆ :
ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ..
ಈ ಮೇಲಿನ ಮೂರೂ ಪಾತ್ರಗಳು ನಾವೇ ಅಲ್ಲವೇ..? ಅದು ನಮ್ಮೊಳಗೇ ಇಲ್ಲವೇ..? ಸಹಸ್ರಾರು ಕಾಲ ಸಾವಿನ ಸರಮಾಲೆಯನ್ನೇ ಕಂಡ ಈ ಜಗತ್ತಿನಲ್ಲಿ ನಾವು ರಕ್ತ ಪಿಪಾಸು ರಾಜಕಾರಣದ ಪ್ರಲೋಭನೆಗೆ ಸಿಲುಕಿ ಯುದ್ಧೋನ್ಮಾದಿ ಮನಸ್ಥಿತಿಗೆ ತುತ್ತಾಗಿದ್ದೇವೆ ಅಲ್ಲವೇ..? ಸರಣಿ ಸಾವಿನ ಕಥಾನಕವೇ ಆಗಿರುವ ಮಹಾಕಾವ್ಯ ಮಹಾಭಾರತದಿಂದ ನಮಗಿನ್ನೂ ಪಾಠ ಕಲಿಯಲು ಸಾಧ್ಯವಾಗಿದೆಯೆ..? ಸ್ವಸ್ಥ ಮನಸ್ಸುಗಳಿಗೆ ಕಾಲ ಪಕ್ವಗೊಂಡಿಲ್ಲವೇ..?