ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟಿ, ಡಾ. ಶಿವರಾಮ ಕಾರಂತ ಟ್ರಸ್ಟ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಾವರ ತಾಲೂಕು, ಕುಂದಾಪುರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಅವರ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ದಿನಾಂಕ 05-05-2024ರಂದು ನಡೆಯುವ ನಾಲ್ಕನೆಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡ ಹರಿಕಾರ ಎ.ಎಸ್.ಎನ್. ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಸಾಧ್ಯತೆಗಳ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನಗಳನ್ನು ರಚಿಸಿ ಆ ಮೂಲಕ ಆರಂಭದಲ್ಲಿಯೇ ಕುಂದಾಪ್ರ ಕನ್ನಡಕ್ಕೆ ಮೂಲ ದಿಕ್ಕು ದೆಸೆಯನ್ನು ನೀಡಿದಂತಹವರು ಎ.ಎಸ್.ಎನ್. ಹೆಬ್ಬಾರರು. ಈ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಚಾಲಕ ಸತೀಶ್ ವಡ್ಡರ್ಸೆ ಅವರು ತಿಳಿಸಿದ್ದಾರೆ.
ಎ.ಎಸ್.ಎನ್. ಹೆಬ್ಬಾರ್ ಇವರ ಕಿರು ಪರಿಚಯ :
ಕಳೆದ 60 ವರ್ಷಗಳಿಂದ ಕುಂದಾಪುರದಲ್ಲಿ ವಕೀಲಿ ವೃತ್ತಿ, ಹಿರಿಯ ಪತ್ರಕರ್ತರು, ಲೇಖಕ, ಕಥೆಗಾರ, ಕವಿ, ಅಭಿನಯಕಾರ, ಭಾಷಣಕಾರ. 1967ರಲ್ಲಿ ಕುಂದಾಪುರ ರೋಟರಿ ಕ್ಲಬ್ ಸೇರಿ ರೋಟರಿಯಲ್ಲಿ ಈ ವರ್ಷಕ್ಕೆ 57 ವರ್ಷಗಳ ಅವಿರತ ಸೇವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷ. 2011ರಲ್ಲಿ ಜರಗಿದ ಉಡುಪಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ. ರೂಪರಂಗ ನಾಟಕ ಸಂಸ್ಥೆ, ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರಗಳ ಅಧ್ಯಕ್ಷರಾಗಿದ್ದವರು. ಒಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ. ಕುಂದಾಪುರ ಜೇಸಿಸ್ ಸ್ಥಾಪಕಾಧ್ಯಕ್ಷ, ಪರಿಣತ ತರಬೇತುದಾರ. ಪರಿಣಾಮಕಾರಿ ಭಾಷಣಕಲೆ ತರಬೇತಿಯಲ್ಲಿ ಎತ್ತಿದ ಕೈ. ಭಾಷಣ ಒಂದು ಕಲೆ, ಅಧ್ಯಕ್ಷರು ಹೇಗಿರಬೇಕು, ಕಾರ್ಯಕ್ರಮಗಳು ಹೇಗಿರಬೇಕು ಪುಸ್ತಕಗಳ ಕರ್ತೃ. 8 ಪ್ರಹಸನಗಳ ರಚನೆ. ‘ರೋಟರಿ-ಏನು ಈ ಸಂಸ್ಥೆ’ ಗ್ರಂಥದ ಕರ್ತೃ. ಈಗಲೂ ವಿವಿಧ ವಿಷಯಗಳ ಬಗ್ಗೆ ಲೇಖನ ಬರೆಯುತ್ತಿರುತ್ತಾರೆ. ತನ್ನ 80ರ ಹರೆಯದಲ್ಲಿ ಒಂದೇ ದಿನ 12 ಪುಸ್ತಕಗಳನ್ನು ಪ್ರಕಟಿಸಿದವರು. ದುಬೈಯ ನಮ್ಮ ಕುಂದಾಪುರ ಕನ್ನಡ ಗಲ್ಫ್ ಸಂಸ್ಥೆ 2019 ಜೂನ್ 14ರಂದು ಇವರನ್ನು ಅಲ್ಲಿಗೆ ಆಮಂತ್ರಿಸಿ ‘ಕುಂದಾಪ್ರ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕಳೆದ ಕೆಲವು ವರ್ಷಗಳಿಂದ ‘ಕುಂದಪ್ರಭ’ ಮತ್ತು ‘ಸುದ್ದಿಮನೆ’ ಪತ್ರಿಕೆಗಳಲ್ಲಿ ವಕೀಲಿ ವೃತ್ತಿ, ಕಾಯಿದೆ, ಕಾನೂನುಗಳ ಕುರಿತು ಸ್ವಾರಸ್ಯಕರ ಲೇಖನ ಮಾಲೆ ಬರೆಯುತ್ತಿದ್ದ ಅಂಕಣಕಾರರು. ರೋಟರಿ ಅಧ್ಯಯನ ವಿನಿಮಯ ತಂಡದ ನಾಯಕರಾಗಿ ಫ್ರಾನ್ಸ್ ಮತ್ತಿತರ ದೇಶಗಳ ಪರ್ಯಟನೆ-ಅನುಭವ ಶ್ರೀಮಂತಿಕೆ. ರೋಟರಿ ಜಿಲ್ಲೆ 3180ರ ಶತಾಬ್ಧಿ ಗವರ್ನರ್. ಪ್ರತಿಷ್ಟಿತ ಸರ್ವೀಸ್ ಎಬೌಟ್ ಸೆಲ್ಫ್ (Service about self’) ಪ್ರಶಸ್ತಿ ಪುರಸ್ಕೃತರು. ತನ್ನ 84ನೆಯ ವಯಸ್ಸಿನಲ್ಲಿ ಹೊಸತಾಗಿ ಯಕ್ಷಗಾನ ಕುಣಿತ ಕಲಿತು ಪ್ರಪ್ರಥಮವಾಗಿ 2024 ಫೆಬ್ರವರಿ 18ರಂದು ತೆಕ್ಕಟ್ಟೆಯಲ್ಲಿ ‘ಭೀಮಾರ್ಜುನ ಯುದ್ಧ’ ಪ್ರಸಂಗದಲ್ಲಿ ಅರ್ಜುನನಾಗಿ ಕುಣಿದು ಅಭಿನಯಿಸಿದ ಜೀವನೋತ್ಸಾಹ ಇವರದು. ವಯಸ್ಸು 84ರಲ್ಲಿದ್ದರೂ ಸದಾ ಕ್ರಿಯಾಶೀಲರು, ಹಾಸ್ಯಪ್ರಿಯರು, ಯುವಜನಕ್ಕೆ ಮಾರ್ಗದರ್ಶಕರು, ಸ್ಪೂರ್ತಿದಾಯಕರು. ಪತ್ನಿ ಸುಧಾ, ಮಕ್ಕಳು ರಘುನಂದನ, ಸ್ವಾತಿ, ಶ್ರೀವತ್ಸ. ಮೊಮ್ಮಕ್ಕಳು ದಿಶಾ, ಧ್ರುವ, ವಿಷ್ಣು, ವರ್ಷಾ, ಮನೀಷಾ ಮತ್ತು ಮಯಾಂಕ.
“ನಮ್ಮೂರೇ ಅಂದ, ನಮ್ಮೂರೇ ಚಂದ, ಕುಂದಾಪ್ರ ಭಾಷಿಯೇ ಕರ್ಣಾನಂದ” ಎಂದು ಸುಮಾರು 60 ವರ್ಷಗಳ ಹಿಂದೆ ಹಾಡು ರಚಿಸಿ ಹೇಳಿ ಕುಂದಗನ್ನಡವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಜನಪ್ರಿಯಗೊಳಿಸಿದವರು ಎ.ಎಸ್.ಎನ್. ಹೆಬ್ಬಾರ್ ರವರು. ಅವರಿಗೆ ನೀವು ಫೋನ್ ಮಾಡಿದರೆ ಅವರು ಇಂಗ್ಲೀಷಿನ ‘ಹಲೋ’ ಎನ್ನುವುದಿಲ್ಲ. ಅಪ್ಪಟ ಕುಂದಗನ್ನಡದಲ್ಲಿ ‘ಹೋಯ್’ ಎನ್ನುತ್ತಾರೆ. 2008ರಲ್ಲಿ ಚಿಕಾಗೋದ ‘ಅಕ್ಕ’ ಕನ್ನಡ ಸಮ್ಮೇಳನದಲ್ಲಿ ಸಹಾ “ನಾ ಸಣ್ಣದಿಪ್ಪತಿಗೆ ಕುಂದಾಪ್ರದೊಳ್ಗೆಲ್ಲ ಎಲ್ಕಂಡ್ರೂ ಮಲ್ಲೀಗಿ ಹೂ ಇದ್ದಿತ್, ಎಲ್ಕಂಡ್ರೂ ಮಲ್ಲೀಗಿ ಘಂ ಅಂತಿತ್, ಕುಂದೇಸ್ರ ದೇವ್ ಸ್ಥಾನ ರಸ್ತೀಯ ಬದಿಗೆಲ್ಲ ಮಲ್ಲೀಗಿ ತೋಟದ್ದೇ ಸಾಲ್ ಇದ್ದಿತ್” ಎಂತ ಕುಂದಗನ್ನಡದಿಂದ ಕವಿತೆ ಹಾಡಿ ಕವಿಗೋಷ್ಠಿ ಅಧ್ಯಕ್ಷ ಚಂದ್ರಶೇಖರ ಕಂಬಾರರಿಂದ ಹಿಡಿದು ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡು, ಅಮೇರಿಕದಲ್ಲೂ ಕುಂದಗನ್ನಡ ಮೆರೆಸಿದವರು.
ಕುಂದಾಪುರದಲ್ಲೊಮ್ಮೆ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ ಅಚ್ಚ ಕುಂದಗನ್ನಡದಲ್ಲಿ ಹೆಬ್ಬಾರರು ಸ್ವಾಗತ ಭಾಷಣ ಮಾಡಿದಾಗ ಕ್ರುದ್ಧರಾದ ತೆಂಕಿನ ಸಾಹಿತಿಯೊಬ್ಬರು ‘ಈ ರೀತಿ ಕನ್ನಡ ಮಾತಾಡಿ ಈ ಸಮ್ಮೇಳನದ ಘನತೆಗೆ ಚ್ಯುತಿ ತಂದಿರಲ್ಲಾ’ ಎಂದು ಪ್ರಲಾಪಿಸಿದ್ದಕ್ಕೆ ಉತ್ತರವಾಗಿ ಹೆಬ್ಬಾರರು “ತ್ಯೌಡ್ಕಂತ್ರಿಯಾ” ಎಂದು ಹೇಳಿದ ಕುಂದಗನ್ನಡ ಪದದ ಸ್ಪೆಲ್ಲಿಂಗ್ ಸಹಾ ಗೊತ್ತಾಗದೇ “ಹೆಬ್ಬಾರ್ರು ಎಂತ ಹೇಳಿದ್ದು?” ಎಂದು ಆಚೀಚೆಯವರ ಹತ್ರ ಕೇಳುತ್ತಿದ್ದಾಗ “ಹೆಬ್ಬಾರ್ರು ಎಂತ ಹೇಳಿದ್ದು ಎಂದು ತಿಳೀಬೇಕಾರೆ ಕುಂದಗನ್ನಡ ಕಲ್ತು ಬರ್ಕ್” ಎಂದು ಹೆಬ್ಬಾರ್ರು ಹೇಳಿದ್ದೂ ಅವರಿಗೆ ಅರ್ಥವಾಗಲಿಲ್ಲವಂತೆ. ಹೀಗೆ ಕುಂದಗನ್ನಡದ ಸುದ್ದಿಗೆ ಬಂದರೆ ಸುಮ್ಮನೇ ಬಿಡುವವರಲ್ಲ ಇವರು.