ಮಂಗಳೂರು : ಸುರತ್ಕಲ್ ಯಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರಿನ ತುಳು ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದ ಕನ್ನಡ ಸಂಘ, ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 26-10-2023ರಂದು ಮಂಗಳೂರಿನ ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ಇಂದಿರಾ ಹೆಗ್ಗಡೆ ಅವರ ಸಾಹಿತ್ಯಾವಲೋಕನ ‘ನೆಲ ಮೂಲದ ನಡೆ : ಶೋಧ-ಸ್ವಾದ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿರಾ ಹೆಗ್ಗಡೆ ಅವರ ‘ಅತಿಕಾರೆ’ ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾ ರೆಡ್ಡಿರವರು ಮಾತನಾಡುತ್ತಾ “ಹಲವು ಕಡೆಗಳ ಸಾಂಸ್ಕೃತಿಕ ಪ್ರಭಾವ ಆಗಿದ್ದರೂ ತುಳುವರು ಮತ್ತು ತುಳು ಸಂಸ್ಕೃತಿ ನಲುಗಲಿಲ್ಲ. ಇದು ಈ ನೆಲದ ವಿಶಿಷ್ಟ ಗುಣವಾಗಿದ್ದು ಸಾಂಸ್ಕೃತಿಕ ಅಧ್ಯಯನದಲ್ಲಿ ಮಹತ್ವ ಗಳಿಸಿದೆ. ತುಳುನಾಡಿನ ಬಗ್ಗೆ ಬಯಲು ಸೀಮೆಯವರ ಕಲ್ಪನೆಯೇ ವಿಭಿನ್ನ. ಇಲ್ಲಿನವರು ಹೋಟೆಲ್ ಉದ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಂದಷ್ಟೇ ಅನೇಕರು ತಿಳಿದುಕೊಂಡಿದ್ದಾರೆ. ಆದರೆ ಒಳಹೊಕ್ಕು ನೋಡಿದರೆ ಇಲ್ಲಿ ಅನೇಕ ಸಂಸ್ಕೃತಿಗಳ ಮಿಶ್ರಣ ಇರುವುದು ಗಮನಕ್ಕೆ ಬರುತ್ತದೆ. ಬಹುಸಂಸ್ಕೃತಿಗಳು ಇದ್ದರೂ ತುಳುವಿನ ಪ್ರಭಾವ ಕುಗ್ಗಿಸಲು ಯಾವುದಕ್ಕೂ ಸಾಧ್ಯವಾಗಲಿಲ್ಲ. ಮಾದ್ವ, ಶಂಕರ ಪಂಥಗಳು, ಜೈನ, ಕ್ರೈಸ್ತ ಮತಗಳು ಇಲ್ಲಿದ್ದವು, ಈಗಲೂ ಇವೆ. ಗೋವಾದಿಂದ ವಲಸೆಯೂ ಆಗಿದೆ. ಇಂಥ ಪ್ರಭಾವಗಳು ಬಹುತೇಕ ಸಂದರ್ಭದಲ್ಲಿ ಕೆಲವು ಪ್ರದೇಶದ ಸಂಸ್ಕೃತಿಯ ಮೂಲಸ್ವರೂಪಕ್ಕೆ ಧಕ್ಕೆ ತರುತ್ತವೆ. ಆದರೆ ತುಳು ಭಾಷಿಕರ ಮೇಲೆ ತ್ರಿಮತಗಳ ಪ್ರಭಾವ ಆಗಲಿಲ್ಲ, ಗೋವಾ ವಲಸೆಯ ಪ್ರಭಾವವೂ ಆಗಲಿಲ್ಲ. ತುಳುವರ ಗಟ್ಟಿತನಕ್ಕೆ ಇದು ಸಾಕ್ಷಿ. ವಿಜಯನಗರದಲ್ಲಿ ಸಂಗಮ ರಾಜವಂಶದ ಆಡಳಿತದ ಸಂದರ್ಭದಲ್ಲಿ ಈ ಭೂ ಪ್ರದೇಶ ಸಂಪದ್ಭರಿತವಾಗಿತ್ತು. ಆದರೆ ಮುಸ್ಲಿಮರ ದಾಳಿಯಿಂದ ಎಲ್ಲ ರಾಜಮನೆತನಗಳು ನಾಶವಾದವು. ನಂತರ ಅಧಿಕಾರಿಗಳ ಆಡಳಿತ ಆರಂಭವಾಯಿತು. ಈ ಅವಧಿಯಲ್ಲಿ 33 ಮಂದಿ ಅಧಿಕಾರಿಗಳು ಇಲ್ಲಿ ಆಳಿದ್ದಾರೆ. ನಂತರ ಅರಸರ ಆಡಳಿತ ಆರಂಭವಾದದ್ದೇ ತುಳುವರ ವಂಶದವರಿಂದ. ತುಳುನಾಡಿನ ಬಗ್ಗೆ ಅಧ್ಯಯನ ನಡೆಸಿದವರಲ್ಲಿ ಮಂಜೇಶ್ವರ ಗೋವಿಂದ ಪೈ, ಗುರುರಾಜ ಭಟ್, ಕೆ.ವಿ.ರಮೇಶ್, ವಿವೇಕ್ ರೈ, ಕು.ಶಿ.ಹರಿದಾಸ ಭಟ್ಟ ಮುಂತಾದವರು ಪ್ರಮುಖರು. ಅವರ ಸಾಲಿಗೆ ಸೇರುವವರು ಇಂದಿರಾ ಹೆಗ್ಗಡೆ” ಎಂದು ಅವರು ಬಣ್ಣಿಸಿದರು.
ಲೇಖಕಿ ಇಂದಿರಾ ಹೆಗ್ಗಡೆಯವರು ಮಾತನಾಡಿ “ನನ್ನ ಎಲ್ಲಾ ಕೃತಿಗಳನ್ನು- ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರೆ, ಕಾವ್ಯ, ಹಾಗೂ ಸಂಶೋಧನಾ ಕೃತಿಗಳನ್ನು ಯುವ ಬರಹಗಾರರಿಗೆ ನೀಡಿ ಆ ಕೃತಿಯ ಬಗ್ಗೆ ಬರೆಸಿ, ಆ ಬರಹಗಳನ್ನು ಸಂಕಲಿಸಿದ್ದು ಒಂದು ಸಾಹಸವಾದರೆ, ನನ್ನ ಎಲ್ಲಾ ಪ್ರತಿಕಾ ಕಥೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಆರಿಸಿ, ನನ್ನ ಕೃತಿಗಲ್ಲಿ ಇದ್ದ ಮುನ್ನುಡಿ ಬೆನ್ನುಡಿಗಳನ್ನು ಒಟ್ಟುಮಾಡಿ ಅದನ್ನು ‘ಅತಿಕಾರೆ’ ಎಂಬ ‘ಮುಡಿ’ಯಲ್ಲಿ ಕಲಾಪೂರ್ಣವಾಗಿಸಿದ ಅತಿಕಾರೆಯ ಸಂಪಾದಕ ಮಂಡಳಿಯ ಶ್ರಮ ಸಾರ್ಥಕತೆಯನ್ನು ಪಡೆದುದು ತುಂಬಿದ ಸಭಾಂಗಣ ನೋಡಿದಾಗ. ‘ಅತಿಕಾರೆ’ ಎಂಬುದು ಭತ್ತದ ಒಂದು ತಳಿ. ತುಳುನಾಡಿಗೆ ಬಂದ ಮೊದಲ ತಳಿ. ಸತ್ಯದ ತಳಿ. ಸುಗ್ಗಿಗೆ ಮಾತ್ರ ಬೆಳೆವ ಬೆಳೆ. ಕಂಬುಲ ಗದ್ದೆಗೆ ಬೆಳೆವ ಬೆಳೆ. ಜೋಡಿಸಿರಿಗಳು ಕಾಡುಕೋ(ಮಯಿಸಂದಾಯ) ಸಾವಿರಾರು ಭೂತಗಳು ನೂರಾರು ಗಂಡಗಣಗಳು ಈ ತಳಿಯ ಜೊತೆ ಬಂದಿವೆ ಎನ್ನುತ್ತದೆ ಪಾಡ್ದನ.
ಆರಂಭದಿಂದ ಕೊನೆಯವರೆಗೂ ಸಭಾಂಗಣ ತುಂಬಿ ತುಳುಕುತ್ತಿತ್ತು, ಸಂಜೆ ಲೇಖಕಿಯೊಂದಿಗೆ ಸಂವಾದ ನಡೆಯಿತು. ಈ ಸಂವಾದದಲ್ಲಿ ಯುವ ಪೀಳಿಗೆಯವರು ಪಾಲ್ಗೊಳ್ಳುವ ಮೂಲಕ ಪ್ರೊ. ವಿವೇಕ ರೈ ಅವರ ಆಶಯ ಕಾರ್ಯರೂಪಕ್ಕೆ ಬಂದಿದೆ. ಇದು ಕಾರ್ಯ ಕ್ರಮದ ಯಶಸ್ಸಿಗೆ ಸಾಕ್ಷಿ.”
ರೋಷನಿ ನಿಲಯದ ಕುಲಸಚಿವೆ ಪ್ರೊ.ವಿನಿತಾ ಕೆ. ಅವರು ಇಂದಿರಾ ಹೆಗ್ಗಡೆ ಅವರ ‘ತುಳುನಾಡು ಸಂಸ್ಕೃತಿ ಸಮೀಕ್ಷೆ’ ಕೃತಿ ಬಿಡುಗಡೆ ಮಾಡಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾಯ್ರು ಮತ್ತು ತುಳು ಪರಿಷತ್ತಿನ ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ ಮಾತನಾಡಿದರು. ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ, ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಪಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಪುಸ್ತಕದ ಕುರಿತಂತೆ ಮಾಹಿತಿ ನೀಡಿದರು. ಯಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಪಿ. ಕೃಷ್ಣಮೂರ್ತಿ ಸ್ವಾಗತಿಸಿ, ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ ವಂದಿಸಿ, ಲೇಖಕಿ ಡಾ. ಸುಲತಾ ನಿರೂಪಿಸಿದರು.
ಪುಸ್ತಕದ ಬೆಲೆ ರೂ 900/-, ಪುಸ್ತಕದ ಪ್ರತಿಗಳು ನವಕರ್ನಾಟಕ ಪಬ್ಲಿಕೇಷನ್ಸ್ ನಲ್ಲಿ ಲಭ್ಯವಿದೆ. ಅಂಚೆಮೂಲಕ ಪಡೆದುಕೊಳ್ಳುವವರು SRHegde Charitable Trust, AC no-3512000100053501 IFSE Coad-KARB0000351, Karnataka Bank, Surathkal branch.ಈ ಖಾತೆಗೆ ವರ್ಗಾಯಿಸಿ ಅದರ ದಾಖಲೆಯ ಪ್ರತಿಯನ್ನು ಕೆಳಕಂಡ ಸಂಖ್ಯೆಗೆ ಕಳುಹಿಸಿದಲ್ಲಿ, ಅಂಚೆ ಮೂಲಕ ಕೃತಿ ನಿಮ್ಮ ಕೈಸೇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ
ಇಂದಿರಾ ಹೆಗ್ಗಡೆ – 9845577553
ಸುಜಾತ ಸುವರ್ಣ – 9845760278