27 ಫೆಬ್ರವರಿ 2023, ಮಂಗಳೂರು: ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ಖ್ಯಾತ ಬರಹಗಾರ ಹಾಗೂ ಚಿಂತಕ ಗುರುರಾಜ ಮಾರ್ಪಳ್ಳಿಯವರ ‘ಅವ್ವ ನನ್ನವ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಫೆಬ್ರವರಿ 25ರಂದು ನಡೆಯಿತು. ಮಂಗಳೂರಿನ ಕೊಡಿಯಾಲಬೈಲಿನ ವಾತ್ಸಲ್ಯಧಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲೇಖಕ ಮಾರ್ಪಳ್ಳಿಯವರ ಕೃತಿಯನ್ನು ಅವರ ಜೋಳಿಗೆಯಿಂದ ಖರೀದಿಸುವ ಮೂಲಕ ಬೆಂಗಳೂರಿನ ಚಿಂತಕ ಹಾಗೂ ಕ್ರಿಯಾಶೀಲ ಹೋರಾಟಗಾರ ವಿವೇಕಾನಂದ ಎಚ್ಕೆ ಯವರು ಕೃತಿ ಬಿಡುಗಡೆಗೊಳಿಸಿದರು. ಖ್ಯಾತ ಬರಹಗಾರ್ತಿ ಹಾಗೂ ಪ್ರಾಧ್ಯಾಪಕಿ ಕಾತ್ಯಾಯಿನಿ ಕುಂಜಿಬೆಟ್ಟು ಕೃತಿಯ ಪರಿಚಯವನ್ನು ಮಾಡಿಕೊಡುತ್ತಾ ಈ ಕೃತಿ ತಾಯಿಯ ಮಹತ್ವವನ್ನು ಹೇಳುವುದರೊಂದಿಗೆ ಭೂತಾಯಿಯ ಮಹತ್ವವನ್ನು ಓದುಗರಿಗೆ ತಲಪಿಸುವ ಮಹತ್ವದ ಹಾಗೂ ಮೌಲ್ಯಯುತ ಕೃತಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪರಿಸರ ತಜ್ಞ ದಿನೇಶ್ ಹೊಳ್ಳ ಮಣ್ಣು ಮತ್ತು ಪರಿಸರ ನಮ್ಮ ತಾಯಿ. ಅವಳನ್ನು ಅವಗಣಿಸದೆ ಉಳಿಸುವ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು. ಲೇಖಕ ಗುರುರಾಜ ಮಾರ್ಪಳ್ಳಿಯವರು ‘ಅವ್ವ ನನ್ನವ್ವ’ ಕೃತಿ ರಚನೆಗೆ ತಮಗೆ ಪ್ರೇರಕರಾದ ತಮ್ಮ ತಾಯಿಯನ್ನೂ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿಯವರನ್ನೂ ಸ್ಮರಿಸಿಕೊಂಡರು. ಸ್ವರೂಪ ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆಯ ನಿರ್ದೇಶಕ ಗೋಪಾಡ್ಕರ್ ಸ್ವಾಗತಿಸಿ, ಸುಮಾಡ್ಕರ್ ವಂದಿಸಿದರು. ಅನಂತರ ನಮ ತುಳುವೆರ್ ಮುದ್ರಾಡಿಯವರಿಂದ ‘ಅವ್ವ ನನ್ನವ್ವ’ ನಾಟಕದ ನೂರನೇ ಪ್ರದರ್ಶನ ನಡೆಯಿತು.