ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 28 ಫೆಬ್ರವರಿ 2025ರಂದು ಮಡಿಕೇರಿಯ ಗೌಡ ಕೊಡಗು ಗೌಡ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಬರಹಗಾರರಿಗೆ ಪ್ರೋತ್ಸಾಹ ಬಹುಮಾನ ಪ್ರಶಸ್ತಿಯನ್ನು ವಿತರಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ “ಇಂತಹ ಕಾರ್ಯಕ್ರಮಗಳು ಸಮುದಾಯದ ಬರಹಗಾರರನ್ನು ಪ್ರೋತ್ಸಾಹಿಸುವುದರೊಂದಿಗೆ ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಲಿದೆ. ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳು ಸಮುದಾಯದ ಏಳಿಗೆಗೆ ಹಾಗೂ ಅಭಿವೃದ್ಧಿಗೆ ಪೂರಕ ಆಗಿರುವುದರೊಂದಿಗೆ ಅರೆಭಾಷೆ ಜನಾಂಗದ ಇತಿಹಾಸ ಹಾಗೂ ಸಮಗ್ರ ಚಟುವಟಿಕೆಗಳನ್ನು ಜಗತ್ತಿಗೆ ತಿಳಿಸುವಂತೆ ಕಾರ್ಯಪ್ರವೃತ್ತರಾಗಲಿ. ಅರೆಭಾಷೆ ಸಮುದಾಯಕ್ಕೆ ತನ್ನಿಂದ ಆಗುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸಲು ನಾನು ಸದಾ ಸಿದ್ದ. ಐನ್ ಮನೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮನೆಯ ಇತಿಹಾಸವನ್ನು ಜಗತ್ತಿಗೆ ಹೇಳುವ ದಿಶೆಯಲ್ಲಿ ಅರೆಭಾಷೆ ಅಕಾಡೆಮಿಯು ಕೆಲಸ ಮಾಡಬೇಕು” ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ಮಾಜಿ ಸಭಾಧ್ಯಕ್ಷರಾದ ಕೆ. ಜಿ. ಬೋಪಯ್ಯ, ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಸದಸ್ಯರಾದ ಚಂದ್ರಶೇಖರ್ ಪೇರಾಲು, ಲತಾಪ್ರಸಾದ್ ಕುದ್ಪಾಜೆ, ಸೂದನ ಎಸ್. ಈರಪ್ಪ, ವಿನೋದ್ ಮೂಡಗದ್ದೆ, ತೇಜಕುಮಾರ್ ಕುಡೆಕಲ್ಲು, ಪಿ. ಎಸ್. ಕಾರ್ಯಪ್ಪ, ಲೋಕೇಶ್ ಊರುಬೈಲು, ಗೋಪಾಲ ಪೆರಾಜೆ, ಮೋಹನ ಪೊನ್ನಚನ, ಚಂದ್ರಾವತಿ ಬಡ್ಡಡ್ಕ, ಡಾ. ಎನ್. ಎ. ಜ್ಞಾನೇಶ್, ಸಂದೀಪ್ ಪೂಳಕಂಡ, ಕುದುಪಜೆ ಕೆ.ಪ್ರಕಾಶ್ ಇತರರು ಉಪಸ್ಥಿತರಿದ್ದರು.