ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಮಂದಿರದಲ್ಲಿ ಕೆಂಗಲ್ ಹನುಮಂತಯ್ಯ ದತ್ತಿ ಮತ್ತು ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ವಿತರಣಾ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು.
ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಉದ್ಘಾಟನಾ ಭಾಷಣದಲ್ಲಿ “ಕೆಂಗಲ್ ಹನುಮಂತಯ್ಯನವರು ಸದಾ ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದರು. ಅವರ ಕಾಲದಲ್ಲಿಯೇ ಕನ್ನಡ ಸಂಸ್ಕೃತಿ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿತವಾಯಿತು. ಮಾಸ್ತಿ ಮತ್ತು ಕುವೆಂಪು ಅವರ ಸಂಪಾದಕತ್ವದಲ್ಲಿ ಕುಮಾರವ್ಯಾಸ ಸಂಪುಟವನ್ನು ಎರಡು ರೂಪಾಯಿ ನೀಡಿ ನಾಡಿನೆಲ್ಲೆಡೆ ತಲುಪುವಂತೆ ಮಾಡಿದ್ದರು. ಅಪರೂಪದ ರಾಜಕೀಯ ಮತ್ಸದ್ದಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ನೈಜ ಪುಸ್ತಕ ಪ್ರೇಮಿಯಾಗಿದ್ದರು, ತಮ್ಮ ವಿರುದ್ಧ ರಾಜಕೀಯ ಷಡ್ಯಂತರಗಳು ನಡೆಯುತ್ತಿದ್ದ ಕಾಲದಲ್ಲಿ ಪ್ಲೇಟೋ ರಚಿಸಿದ ‘ರಿಪಬ್ಲಿಕ್’ ಓದುತ್ತಿದ್ದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ ಕೆಂಗಲ್ಲರು ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ಮಹತ್ವದ ಯೋಜನೆಗಳನ್ನು ತಂದರು. ಕೆಂಗಲ್ಲರ ಕೊಡುಗೆಗಳನ್ನ ಸ್ಮರಿಸಿಕೊಂಡು ಅವರ ಹೆಸರಿನಲ್ಲಿರುವ ಪುರಸ್ಕಾರವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡದ ಅಸ್ಮಿತೆಯನ್ನು ರೂಪಿಸಿರುವ ಡಾ. ವಿ.ಜಿ. ಜೋಸೆಫ್ ಅವರಿಗೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ. ಸರಳತೆ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಯಿಂದ ಅವರು ಸಾರ್ವಜನಿಕ ಜೀವನದಲ್ಲಿ ಮರೆಯಲಾರದ ಗುರುತುಗಳನ್ನು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದಾ ಸಾಧಕರನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು ಸಮಯ ಸಾಧಕರನ್ನು ದೂರವಿಡಲಾಗುತ್ತಿದೆ” ಎಂದು ಅವರು ಅರ್ಥಪೂರ್ಣವಾಗಿ ನುಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕದ ಲೋಕಾಯುಕ್ತರಾದ ಬಿ.ಎಸ್. ಪಾಟೀಲರು “ನಾಡೋಜ ಡಾ. ಮಹೇಶ ಜೋಶಿಯವರ ಉತ್ಸಾಹಿ ಮತ್ತು ದಕ್ಷ ನಾಯಕತ್ವದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಕಳೆ ಬಂದಿದೆ ಎಂದು ಪ್ರಶಂಸೆ ಮಾಡಿ, ಬರಹಗಾರರು ತಮ್ಮ ಕೃತಿಗಳ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಾರೆ, ಕನ್ನಡವು ಎಲ್ಲಾ ಹಂತದಲ್ಲಿಯೂ ಜಾರಿಗೆ ಬರುವುದು ನಮ್ಮ ಆದ್ಯತೆಯಾಗಬೇಕು. ನಾವು ಸದಾ ಹಕ್ಕುಗಳ ಬಗ್ಗೆ ಮಾತನಾಡಿದರೆ ಸಾಲದು, ಕರ್ತವ್ಯಗಳ ಕುರಿತೂ ಯೋಚಿಸ ಬೇಕು. ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗ ಬೇಕು” ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಮಾಲ್ಡಿವ್ಸ್ ದೇಶದ ಕೌನ್ಸಿಲ್ ಜನರಲ್ ಡಾ. ವಿ.ಜಿ. ಜೋಸೆಫ್ ಮಾತನಾಡಿ, “ಕನ್ನಡ ಭಾಷೆಯ ಮೇಲಿನ ಪ್ರೀತಿ ನನ್ನಿಂದ ಈ ಎಲ್ಲಾ ಕೆಲಸಗಳನ್ನು ಮಾಡಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಸೇರಿ ಕನ್ನಡ ಪರ ಕಾರ್ಯಕ್ರಮವನ್ನು ರೂಪಿಸಲು ನಮ್ಮ ಸಂಸ್ಥೆ ಸದಾ ಸಿದ್ದವಾಗಿದೆ. ನಮ್ಮ ಸಂಸ್ಥೆಯ ಎಲ್ಲ ವಿದ್ಯಾರ್ಥಿ ಮತ್ತು ಅಧ್ಯಾಪಕರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಉಪಕುಲಪತಿಗಳಾದ ಡಾ. ಎನ್.ಎಸ್. ರಾಮೇಗೌಡ ಮಾತನಾಡಿ “ಕೆಂಗಲ್ ಹನುಮಂತಯ್ಯನವರ ಜೊತೆಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡು, ಅಂತಹ ಹಿರಿಯ ರಾಜಕೀಯ ಮುತ್ಸದ್ದಿಯ ಹೆಸರಿನಲ್ಲಿ ಸ್ಥಾಪಿತವಾಗಿರುವ ಪ್ರಶಸ್ತಿ ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಲಿದೆ.” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಡಾ. ಎಸ್.ಪಿ. ಯೋಗಣ್ಣನವರು “ಕನ್ನಡದಲ್ಲಿ ಈಗ ವೈದ್ಯಕೀಯ ಕ್ಷೇತ್ರದ ಕುರಿತು ಸಾಕಷ್ಟು ಪ್ರಮುಖ ಕೃತಿಗಳು ಬರುತ್ತಿವೆ. ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡದ ಬಳಕೆ ಸಾಧ್ಯವಾದರೆ ನಮ್ಮ ಸಾಂಸ್ಕೃತಿಕ ಹರಹು ಹಿಗ್ಗತ್ತದೆ” ಎಂದರು.
ಇನ್ನೊಬ್ಬ ಮುಖ್ಯ ಅತಿಥಿ ಕವಿರತ್ನ ಡಾ. ನಾಗೇಂದ್ರ ಪ್ರಸಾದ್ ಮಾತನಾಡಿ “ಕನ್ನಡ ಚಿತ್ರರಂಗದ ತೊಂಬತ್ತನೆಯ ಹುಟ್ಟುಹಬ್ಬದಂದೇ ಈ ಕಾರ್ಯಕ್ರಮ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಬರೆಯುವವರಿಗೆ ಬೆನ್ನು ತಟ್ಟುವವರು ಬೇಕಾಗುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮೇರು ಸಂಸ್ಥೆಯಿಂದ ಪಡೆಯುವ ಪ್ರಶಸ್ತಿಗೆ ಬೆಲೆ ಕಟ್ಟಲಾಗದು ಇದು ಬರಹಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ” ಎಂದರು.
2022ನೆಯ ಸಾಲಿನ ವಿವಿಧ 51 ದತ್ತಿ ವಿಭಾಗಗಳಲ್ಲಿ ಪುರಸ್ಕೃತರಾದ ಒಟ್ಟು 57 ಮಂದಿ ಬರಹಗಾರರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪುಸ್ತಕ ದತ್ತಿ ಪುರಸ್ಕೃತರ ಪರವಾಗಿ ಡಾ. ಜಯಪ್ರಕಾಶ ಮಾವಿನಕುಳಿ ಮತ್ತು ಡಾ. ವಿ. ಸಂಧ್ಯಾ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿ, ನೇ.ಭ. ರಾಮಲಿಂಗ ಶೆಟ್ಟರು ವಂದಿಸಿದರು. ಪ್ರಶಸ್ತಿ ಪುರಸ್ಕೃತರು, ಅವರ ಕುಟುಂಬ ವರ್ಗದವರು, ಹಿತೈಷಿಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಕಾರ್ಯಕ್ರಮದಲ್ಲಿ ಹಾಜರಿದ್ದರು.