ವಿಜಯಪುರ : ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ವತಿಯಿಂದ ಗಮಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು 21 ಜುಲೈ 2024ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕೆ. ಪಿ. ಪುತ್ತುರಾಯ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ವಾನ್ ಕಬ್ಬಿನಾಲೆ ವಸಂತ ಭಾರಧ್ವಾಜ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಮಾರವ್ಯಾಸ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಹೃದಯ ಪ್ರತಿಷ್ಠಾನದ ಶ್ರೀಮತಿ ಕಮಲಮ್ಮ ವಿಠ್ಠಲರಾವ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷ ಶ್ರೀ ವೆಂಕಟೇಶ್ವರಲು ನಾಯಡು, ಈ ಸಾಲಿನ ‘ಯುವ ಪ್ರಶಸ್ತಿ’ಗೆ ಆಯ್ಕೆಯಾದ ಗಮಕಿ ಕುಮಾರಿ ಆಶ್ರಿತಾ ಎಸ್. ಬೆಂಗಳೂರು, ‘ಉತ್ತಮ ಗಮಕ ಶಿಕ್ಷಕಿ ಪ್ರಶಸ್ತಿ’ಗೆ ಆಯ್ಕೆಯಾದ ಬೇಲೂರಿನ ನವರತ್ನಾ ಎಸ್. ವಟಿ ಹಾಗೂ ‘ಶ್ರೀ ವಾಗ್ದೇವಿ ಪ್ರಶಸ್ತಿ’ಗೆ ಆಯ್ಕೆಯಾದ ವಿಜಯಪುರದ ಶ್ರೀ ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ವಿದ್ವಾನ್ ಕಬ್ಬಿನಾಲೆ ವಸಂತ್ ಭಾರಧ್ವಾಜ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಯ ಭಾಷಣ ಮಾಡಿದರು. ಬಳಿಕ ನಡೆದ ಕಿಶೋರ ಗಮಕ ಗೋಷ್ಠಿಯಲ್ಲಿ ಮಕ್ಕಳಾದ ಕುಮಾರಿ ಅಹಿರೀ, ಕುಮಾರಿ ಸಂವೇದಾ ಡಿ. ಭಟ್, ಕುಮಾರಿ ಶಾರಿಣಿ ಹಾಗೂ ಶಶಾಂಕ್ ಇವರುಗಳು ನಡೆಸಿಕೊಟ್ಟ ಭೀಮಕವಿಯ ಬಸವ ಪುರಾಣದ `ಕೋಳೂರು ಕೊಡಗೂಸು’ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಎಲ್ಲರ ಗಮನ ಸೆಳೆಯಿತು. ಬೇಲೂರಿನ ಸೌಮ್ಯಶ್ರೀ ಗಮಕ ಪಾಠಶಾಲೆಯ ಮಕ್ಕಳು ಸಮೂಹ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಆಶ್ರಿತಾ ಎಸ್. ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳಿಂದ ಕುಮಾರ ವಾಲ್ಮೀಕಿ ಕವಿ ವಿರಚಿತ `ತೊರವೆ ರಾಮಾಯಣ’ದ ಕಿಷ್ಕಿಂದಾ ಕಾಂಡದಿಂದ ಆಯ್ದ `ರಾಮನಿಂದ ಸೀತೆಯ ಆಭರಣಗಳ ದರ್ಶನ’ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಹಾಗೂ ವಿ. ರೇಖಾ ಪ್ರಸಾದ ತಂಡದಿಂದ ಸಮೂಹ ಗಾಯನ ಜರುಗಿತು. ಇದಲ್ಲದೇ ಗಮಕ ಕಲಾವಿದರಿಂದ `ಕಾವ್ಯಾಮೋದ’ ಎಂಬ ಕಾವ್ಯ ರಸಪ್ರಶ್ನೆ ಕಾರ್ಯಕ್ರಮ ರಸವತ್ತಾಗಿ ನಡೆಯಿತು.
ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂರು ಜನ ಪ್ರಶಸ್ತಿ ವಿಜೇತರಿಗೆ ಶಾಲು, ಮಾಲೆ, ಪ್ರಶಸ್ತಿ ಪತ್ರ, ಅಭಿನಂದನಾ ಪತ್ರ ಹಾಗೂ ಗಮಕಿ ಕಲ್ಯಾಣರಾವ್ ದೇಶಪಾಂಡೆಯವರಿಗೆ ಇವೆಲ್ಲದರ ಜೊತೆಗೆ ವಾಗ್ದೇವಿ (ಸರಸ್ವತಿ)ಯ ವಿಗ್ರಹ ನೀಡಿ ಗೌರವಿಸಲಾಯಿತು. ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಮಕಿ ಸಿ. ವಿ. ಶ್ರೀಮತಿ ಇವರು ಅಭಿನಂದನಾ ಪತ್ರವನ್ನು ವಾಚಿಸಿದರು. ಸಮಾರಂಭದಲ್ಲಿ ಹಿರಿಯ ಗಮಕಿ ಶ್ರೀಮತಿ ಪದ್ಮಿನಿ ರಾಮಮೂರ್ತಿ ಹಾಗೂ ಅವರ ತಮ್ಮ ಚಿತ್ರನಟ ಎಂ. ಡಿ. ಕೌಶಿಕ್ ಪ್ರಶಸ್ತಿ ಪ್ರದಾನ ನೆರವೇರಿಸಿದರು.
ಸಮಾರಂಭದಲ್ಲಿ ಹಿರಿಯ ಗಮಕಿಗಳಾದ ರತ್ನಾ ಮೂರ್ತಿ, ತೆಕ್ಕೆಕೆರೆ ಸುಬ್ರಹಣ್ಯ ಭಟ್ಟ, ಕೇಶವಮೂರ್ತಿ, ದಕ್ಷಿಣಾಮೂರ್ತಿ, ಸುಮಾ ಪ್ರಸಾದ್, ಗಮಕ ಪರಿಷತ್ತಿನ ಹಿಂದಿನ ಅಧ್ಯಕ್ಷರಾದ ಶ್ರೀ ಎಮ್. ಆರ್. ಸತ್ಯನಾರಾಯಣ, ಶ್ರೀಮತಿ ಜಯರಾಮ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷರಾದ ಶ್ರೀ ಬದರಿನಾರಾಯಣ, ಯುವ ಗಮಕಿ ಭಾರಧ್ವಾಜ ಮುಂತಾದ ಗಮಕಿಗಳು ಉಪಸ್ಥಿತರಿದ್ದರು.