ಮಂಗಳೂರು : ಎಲ್.ಸಿ.ಆರ್ು.ಐ. ಸಭಾಂಗಣದ ‘ಅಗರಿ ಶ್ರೀನಿವಾಸ ಭಾಗವತ ವೇದಿಕೆ’ಯಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ 17ನೇ ವಾರ್ಷಿಕೋತ್ಸವ ಮತ್ತು ವಿಶ್ವನಾಥ ಶೆಣೈ ಉಡುಪಿ ಪ್ರಾಯೋಜಿತ ರಂಗ ಭಾಸ್ಕರ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 07 ಜುಲೈ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಜನಪದ ವಿದ್ವಾಂಸ ಡಾ. ಬಿ.ಎ. ವಿವೇಕ ರೈ “ರಂಗಶಿಕ್ಷಣದ ಔನ್ನತ್ಯ ಹಾಗೂ ಪ್ರಸ್ತುತತೆ ಪ್ರಮುಖವಾದುದು. ನಮ್ಮ ಕಲ್ಪನೆಗಳಿಗೆ ರೆಕ್ಕೆ ಕೊಡುವ ಕೆಲಸವನ್ನು ರಂಗಭೂಮಿ ಮಾಡುತ್ತದೆ” ಎಂದು ಹೇಳಿದರು.
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಸ್ಮರಣಾರ್ಥ ನೀಡುವ ‘ರಂಗ ಭಾಸ್ಕರ ಪ್ರಶಸ್ತಿ’ಯನ್ನು ಹಿರಿಯ ರಂಗ ನಟ, ನಿರ್ದೇಶಕ ಹಾಗೂ ಚಲನಚಿತ್ರ ನಟ ಲಕ್ಷಣ ಕುಮಾರ್ ಮಲ್ಲೂರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಕಲಾ ಸಂಘಟಕ ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು, ಹಿರಿಯ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಚಲನಚಿತ್ರ ನಟ ಸಂತೋಷ್ ಶೆಟ್ಟಿ, ವಿಶ್ವನಾಥ ಶೆಣೈ ಉಡುಪಿ, ಪ್ರಸಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಲಾ ಪೋಷಕರಾದ ಡಾ. ಆಲ್ವಿನ್ ಡೇಸಾ ಮತ್ತು ಪುಂಡಲೀಕ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿನೇಶ್ ನಾಯಕ್ ಸ್ವಾಗತಿಸಿ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಎಂ. ವಂದಿಸಿ, ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜನಮನದಾಟ ಹೆಗ್ಗೋಡು ಪ್ರಸ್ತುತಪಡಿಸುವ ರಂಜಿತ್ ಶೆಟ್ಟಿ ಕುಕ್ಕುಡ ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧರಿತ ‘ಮಾಯಾ ಮೃಗ’ ಮತ್ತು ಗಣೇಶ್ ಎಂ. ಹೆಗ್ಗೋಡು ನಿರ್ದೇಶನದ ಬೂಕರ್ ವಿಜೇತೆ ಬಾನು ಮುಸ್ತಾಕ್ ಅವರ ಕಥೆಯಾಧರಿತ ‘ಎದೆಯ ಹಣತೆ’ ಕನ್ನಡ ನಾಟಕಗಳು ಪ್ರದರ್ಶನಗೊಂಡಿತು.