ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಹಿರಿಯ ಅರ್ಥಧಾರಿ, ಸಂಘಟಕ ಬಿ. ನಾಗೇಶ ಪ್ರಭು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 31 ಆಗಸ್ಟ್ 2025ರಂದು ಮಂಗಳೂರು ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಸಭಾಗೃಹದಲ್ಲಿ ಜರಗಿತು.
ಈ ಸಂಧರ್ಭ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಇವರು ಶ್ರೀಮತಿ ಯೋಗಾಕ್ಷಿ ಗಣೇಶ ತಲಕಳರವರಿಗೆ ‘ಶ್ರೀ ವಾಗೀಶ್ವರೀ ಅನುಗ್ರಹ ಪ್ರಶಸ್ತಿ’ಯನ್ನು ಪ್ರದಾನ ಮಾಡಿ “ಹಳ್ಳಿಯಲ್ಲಿದ್ದೂ ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸಿದ ಇಂತಹ ಕಲಾರಾಧಕರಿಂದ ಯಕ್ಷಗಾನ ಉಳಿದಿದೆ. ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಮಕ್ಕಳನ್ನೂ ಯಕ್ಷಗಾನಕ್ಕೆ ಅಣಿಗೊಳಿಸಿ, ಉಳಿದ ಆಸಕ್ತರಿಗೂ ಈ ಕಲೆಯನ್ನು ಪರಿಚಯಿಸುತ್ತಿರುವ ಯೋಗಾಕ್ಷಿಯವರ ಸಾಧನೆ ಮೆಚ್ಚುವಂತಹದು. ದಿ. ನಾಗೇಶ ಪ್ರಭುಗಳು ತಮ್ಮ ದುಡಿಮೆಯ ಬಹುಪಾಲನ್ನು ಈ ಕಲೆಗಾಗಿ ವಿನಿಯೋಗಿಸಿದವರು. ಯೋಗಾಕ್ಷಿ ಗಣೇಶ ಇವರಿಗೆ ಸನ್ಮಾನ ಮಾಡುವ ಮೂಲಕ ಅವರ ಆತ್ಮಕ್ಕೆ ಅತ್ಯಂತ ಸಂತೋಷ ಉಂಟಾಗುವುದರಲ್ಲಿ ಸಂದೇಹವಿಲ್ಲ” ಎಂದರು.
ದಿ. ನಾಗೇಶ ಪ್ರಭುಗಳ ಯಕ್ಷಗಾನದ ಸೇವೆಯನ್ನು ಸಂಘದ ಸಂಚಾಲಕ ನವನೀತ ಶೆಟ್ಟಿ ನೆನಪಿಸಿಕೊಂಡರು. “ಭಾಗವತಿಕೆ, ಮದ್ದಳೆ ವಾದನ ಹಾಗೂ ಅರ್ಥಧಾರಿಯಾಗಿ ಸಂಘದ ತಾಳಮದ್ದಳೆ ಸತತವಾಗಿ ನಡೆಯುವಂತೆ ಮಾಡಿದ ಓರ್ವ ಅಪರೂಪದ ವ್ಯಕ್ತಿ. ಅರ್ಥಧಾರಿಗಳು ಬಂದಲ್ಲಿ ಅವರಿಗೆ ತಮ್ಮ ಪಾತ್ರವನ್ನು ಬಿಟ್ಟುಕೊಡುತ್ತಿದ್ದ ಹೃದಯವಂತಿಕೆಯ ವ್ಯಕ್ತಿಯಾಗಿದ್ದವರು” ಎಂದು ನಾಗೇಶ ಪ್ರಭುಗಳಿಗೆ ನುಡಿ ನಮನ ಸಲ್ಲಿಸಿದರು.
ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಲಕಳ ಇದರ ಸಂಚಾಲಕಿ, ಶ್ರೀ ಕಾಶಿ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿ ತಲಕಳ ಇದರ ಯಜಮಾನಿ ಯೋಗಾಕ್ಷಿ ಗಣೇಶರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಸಭೆಗೆ ಪರಿಚಯಿಸಿದರು. “ಭಾಗವತಿಕೆ, ಹಿಮ್ಮೇಳ ವಾದನ, ಅರ್ಥಗಾರಿಕೆ, ವೇಷಗಾರಿಕೆ ಇವೆಲ್ಲವನ್ನೂ ಆಸಕ್ತ ಮಕ್ಕಳಿಗೆ ಕಲಿಸಿ ಕೊಡುವ ಕಲಾ ಸೇವೆಯನ್ನು ಯೋಗಾಕ್ಷಿಯವರು ಮಾಡುತ್ತಿದ್ದಾರೆ. ಇತ್ತೀಚಗೆ ಮುಂಬೈ ಮಹಾನಗರದಲ್ಲಿ ಮಹಿಳಾ ತಂಡದಿಂದಲೇ ಯಶಸ್ವೀ ಪ್ರದರ್ಶನಗಳನ್ನು ನೀಡಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ” ಎಂದರು.
ಸಂಘದ ಗೌರವಾಧ್ಯಕ್ಷ ಶ್ರೀ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸಿ.ಎಸ್. ಭಂಡಾರಿ, ಕೀರ್ತಿ ಶೇಷ ನಾಗೇಶ ಪ್ರಭುಗಳ ಹಿರಿಯ ಸಹೋದರ ರಮಾನಾಥ ಪ್ರಭು ಮುಂಡ್ಕೂರು, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಶ್ರೀ ಸುರೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಪ್ರದೀಪ ಆಳ್ವ ಕದ್ರಿ, ದಿವಾಕರ ಶೆಟ್ಟಿ ಪರಾರಿಗುತ್ತು, ಸಂಜೀವ ಶೆಟ್ಟಿ ಬಿ.ಸಿ. ರೋಡು, ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ವಿಠಲ ಭಟ್, ಶ್ರೀಮತಿ ಪ್ರಫುಲ್ಲಾ ನಾಯಕ್ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಶಿವಪ್ರಸಾದ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ಸಂಮಾನ ಪತ್ರ ವಾಚಿಸಿ, ಕೋಶಾಧಿಕಾರಿ ಶ್ರೀಮತಿ ಶೋಭಾ ಐತಾಳ ಧನ್ಯವಾದ ಸಮರ್ಪಣೆ ಮಾಡಿದರು. ಬಳಿಕ ಸಂಘದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಶನೀಶ್ವರ ಮಹಾತ್ಮೆ’ ತಾಳಮದ್ದಳೆ ಜರಗಿತು.