ಮಂಗಳೂರು : ಯಕ್ಷ ಪ್ರತಿಭೆ (ರಿ.) ಮತ್ತು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ವತಿಯಿಂದ ಸಾಧಕರ ಅಭಿನಂದನಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ನವೆಂಬರ್ 2025ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪಾವಂಜೆ ಮೇಳದ ಬಯಲಾಟದ ವೇದಿಕೆಯಲ್ಲಿ ನಡೆಯಿತು.
ಪ್ರಶಸ್ತಿ ಪ್ರಧಾನ ನೆರವೇರಿಸಿ ಆಶೀರ್ವಚನ ನೀಡಿದ ಕಟೀಲಿನ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ “ಕಳೆದ ಅನೇಕ ವರ್ಷಗಳಿಂದ ಕೀರ್ತಿಶೇಷ ಗೋಪಾಲಕೃಷ್ಣ ಅಸ್ರಣ್ಣರವರ ಸಂಸ್ಮರಣೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಯಕ್ಷ ಪ್ರತಿಭೆ. ಇದರ ಹಿಂದಿರುವ ಅಪ್ರತಿಮ ಪ್ರತಿಭೆ ಗೋಣಿಬೀಡು ಸಂಜಯ್ ಕುಮಾರ್ ಶೆಟ್ಟಿಯವರು. ನಮ್ಮ ತಂದೆಯವರ ಸಂಸ್ಮರಣೆ ಬೇರೆ ಬೇರೆ ಕಡೆಯಲ್ಲಿ ನಡೆದರೂ ಸಂಜಯರು ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅರ್ಥವಿದೆ. ಅವರೊಬ್ಬ ಯಕ್ಷಗಾನ ರಂಗದ ಉತ್ತಮ ಕಲಾವಿದನಾಗಿಯೂ, ಸಂಘಟಕನಾಗಿಯೂ ಕಾರ್ಯ ನಿರ್ವಹಿಸುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಪ್ರಮುಖರನ್ನು, ಸಾಧಕರನ್ನು ಹಾಗೂ ಯಕ್ಷಗಾನ ಕಲಾವಿದರನ್ನು ಸನ್ಮಾನಿಸುತ್ತಾ ಗೌರವಿಸುತ್ತಾ ಬಂದಿದ್ದಾರೆ. ತನ್ನ ಜೊತೆಯಲ್ಲಿ ಹಲವರನ್ನು ಸೇರಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಜಯರಿಗೆ ನಾವು ಆರಾಧಿಸುವ ಕಟೀಲಿನ ಭ್ರಮರಾಂಭೆಯ ಪೂರ್ಣಾನುಗ್ರಹವಿದೆ” ಎಂದು ಹೇಳಿದರು.
ಈ ವರುಷದ ಯಕ್ಷ ಪ್ರತಿಭೆಯ ಮೂಲಕ ಅಸ್ರಣ್ಣ ಸಂಸ್ಮರಣಾ ಕಾರ್ಯಕ್ರಮದ ಗೌರವ ಪ್ರಶಸ್ತಿಯನ್ನು ನಮ್ಮ ಜಿಲ್ಲೆಯ ಹೆಮ್ಮೆಯ ಕುವರ ಅದಾನಿ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಇವರಿಗೆ ‘ಸಾಧಕ ರತ್ನ’ ಬಿರುದಿನೊಂದಿಗೆ ಗೌರವ ಪ್ರಶಸ್ತಿಯನ್ನು ನೀಡಿ ಹಾಗೆಯೇ ಶ್ರೀಮತಿ ಶೀತಲ್ ಕಿಶೋರ್ ಆಳ್ವರವರನ್ನು ಶ್ರೀಮತಿ ಪ್ರಫುಲ್ಲ ಸಂಜಯ್ ರವರು ಸನ್ಮಾನಿಸಿದರು. ಹಿರಿಯರಾದ ಕಾಯಕಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರುರವರಿಗೆ ‘ಕಾಯಕರತ್ನ’ ಬಿರುದು ನೀಡಿ ಗೌರವಿಸಲಾಯಿತು. ಯಕ್ಷಗಾನ ರಂಗದ ಹವ್ಯಾಸಿ ಹಾಗೂ ತಾಳಮದ್ದಳೆ ಕ್ಷೇತ್ರದ ಅದ್ಭುತ ಸಾಧಕ ಸದಾಶಿವ ಆಳ್ವ ತಲಪಾಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಸ್ವಾಗತ ಹಾಗೂ ಪ್ರಸ್ತಾವನೆಯನ್ನು ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಅಗ್ರಮಾನ್ಯ ಶ್ರೇಷ್ಠ ಭಾಗವತರಾದ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ಧಾಂಜಲಿಯನ್ನು ಸಂಜಯ ಕುಮಾರ್ ಶೆಟ್ಟಿಯವರು ಅರ್ಪಿಸಿದರು. ಸಂಯೋಜಕ ಸುಧಾಕರ ರಾವ್ ಪೇಜಾವರ ಕೀರ್ತಿಶೇಷ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆ ಮಾಡಿದರು. ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು. ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಖ್ಯಾತ ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರಿ, ಕಲಾಪೋಷಕ ಸಿ.ಎಸ್. ಭಂಡಾರಿ ಹೊಟೇಲ್ ಉದ್ಯಮಿ ಮುರಳೀಧರ ಉಡುಪ, ನ್ಯಾಯವಾದಿ ಮೋಹನ್‌ದಾಸ್ ರೈ ಅತಿಥಿಗಳಾಗಿದ್ದರು. ಲ| ಪ್ರಶಾಂತ್ ಶೆಟ್ಟಿ ಅಧ್ಯಕ್ಷರು ಅಶೋಕ್ ನಗರ ಕಾರ್ಯಕ್ರಮ ನಿರ್ವಹಿಸಿದರು. ರವಿ ಅಲೆವೂರಾಯ ಹಾಗೂ ಪರಮೇಶ್ ಸಹಕಾರವಿತ್ತರು. ನಂತರ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.
