ಮೂಡುಬಿದಿರೆ : 2023ನೇ ಸಾಲಿನ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ದಿನಾಂಕ 29-05-2024ರಂದು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ “ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು” ಎಂದು ಹೇಳಿದರು.
ನಾಡು ಕಂಡ ಚಿಂತನಾಶೀಲ ಲೇಖಕರಾಗಿದ್ದ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ‘ಶಿವರಾಮ ಕಾರಂತ ಪ್ರತಿಷ್ಠಾನ’ವು ಪ್ರತಿವರ್ಷವೂ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪ್ರಶಸ್ತಿ’ಗಳನ್ನು ಖ್ಯಾತ ಕವಿ, ಬರಹಗಾರ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು ಇವರಿಗೆ, ಖ್ಯಾತ ಜಾನಪದ ವಿದ್ವಾಂಸ, ಸೃಜನಶೀಲ ಲೇಖಕ ಮೈಸೂರಿನ ಪ್ರೊಫೆಸರ್ ಕೃಷ್ಣಮೂರ್ತಿ ಹನೂರ ಇವರಿಗೆ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಕೆ.ಪಿ. ರಾವ್ ಇವರಿಗೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳಿಂದ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಹೆಗ್ಗೋಡಿನ ‘ನೀನಾಸಂ’ ಸಂಸ್ಥೆಗೆ ಈ ವರ್ಷದ ‘ಶಿವರಾಮ ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಳೆದ ಮೂರು ದಶಕಗಳಿಂದ ಕೃತಿಗಳನ್ನು ಆಧರಿಸಿ 10,000 ರೂಪಾಯಿ ಗೌರವ ಸಂಭಾವನೆಯೊಂದಿಗೆ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪುರಸ್ಕಾರ’ವನ್ನು ಆತ್ಮಕಥನ ‘ಹಾಡಾಗಿ ಹರಿದಾಳೆ’ ಕೃತಿಗಾಗಿ ಎಚ್.ಆರ್. ಲೀಲಾವತಿ, ‘ಅಂಬೇಡ್ಕರ್ ಮತ್ತು..’ ಕೃತಿಗಾಗಿ ಪ್ರೊಫೆಸರ್ ಎಚ್.ಟಿ. ಪೋತೆ, ‘ವಿನೂತನ ಕಥನ ಕಾರಣ’ ಕೃತಿಗಾಗಿ ಡಾ.ಬಿ. ಜನಾರ್ದನ ಭಟ್, ‘ಮಾರ್ಗಾನ್ವೇಷಣೆ’ ಕೃತಿಗಾಗಿ ಡಾ. ನಿತ್ಯಾನಂದ ಬಿ. ಶೆಟ್ಟಿ ಇವರುಗಳಿಗೆ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾವಿನ ಕುಳಿ ಕಾರ್ಯಕ್ರಮ ನಿರ್ವಹಿಸಿ, ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ ಅವರು ಸ್ವಾಗತಿಸಿ. ವಂದಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಕೆ. ಶ್ರೀಪತಿ ಭಟ್, ಡಾ. ಎಂ. ಮೋಹನ್ ಆಳ್ವ, ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಉಪಸ್ಥಿತಿದ್ದರು. ಈ ಸಂದರ್ಭದಲ್ಲಿ ಆಳ್ವಾಸ್ ಪ್ರತಿಷ್ಠಾನದ ಸಾಂಸ್ಕೃತಿಕ ತಂಡದಿಂದ ಪ್ರಾರ್ಥನೆ ನಡೆಯಿತು.