ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಹಯೋಗದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 29 ನವೆಂಬರ್ 2025ರಂದು ಹಮ್ಮಿಕೊಂಡಿದ್ದ ಡಾ. ಯು.ಪಿ. ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಮಕ ವ್ಯಾಖ್ಯಾನಕಾರ ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್ “ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸರಿಯಾದ ದಾರಿಯಲ್ಲಿ ಭಾಷಾ ಸಂವಹನ ಕಲಿಸಬೇಕು, ಇಲ್ಲದಿದ್ದರೆ ಮುಂದೆ ಕಷ್ಟವಿದೆ. ಸಂಶೋಧಕರಿಗೆ ಎಲ್ಲಾ ಕಡೆ ವಿಪುಲ ಸಾಮಗ್ರಿಗಳು ದೊರಕುತ್ತವೆ. ಆದರೆ, ಯುವ ಮನಸ್ಸುಗಳು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆದರೆ, ಇಂದು ಭಾಷಾತಜ್ಞರ ನಾಡಿನಲ್ಲಿ ಭಾಷಾಗತಿ, ಸರಸ್ವತಿಯ ಚರಣ ಚಿಹ್ನೆ ಹೆಜ್ಜೆ ತಪ್ಪುತ್ತಿದೆ. ಸಾಹಿತ್ಯದಲ್ಲಿ ಹೊಳವು ಮುಖ್ಯ. ಕಲೆ ಮತ್ತು ಸಂಸ್ಕೃತಿಯ ಸಂಶೋಧನೆ ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ನಿಘಂಟು ತಜ್ಞ ಪದ್ಮನಾಭ ಕೇಕುಣ್ಣಾಯ ಅಭಿನಂದನಾ ಭಾಷಣ ಮಾಡಿದರು. ಎನ್.ಟಿ. ಭಟ್ ಉಪಸ್ಥಿತರಿದ್ದರು. ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಡಾ. ಅರುಣ್ ಕುಮಾರ್ ಎಸ್.ಆರ್. ನಿರೂಪಿಸಿ, ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
