ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷತ್ತಿನ ಮಂದಿರದಲ್ಲಿ ದಿನಾಂಕ 19 ಜುಲೈ 2025ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು.
ಈ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕ್ರೈಸ್ತ ಸಮುದಾಯ ತನ್ನ ನಿಸ್ವಾರ್ಥ ಸೇವೆಯಿಂದ ಮಾನವೀಯತೆಯ ತಳಹದಿಯನ್ನು ಜಗತ್ತಿನೆಲ್ಲೆಡೆ ಗಟ್ಟಿಗೊಳಿಸಿದೆ, ಆಧುನಿಕ ಕನ್ನಡ ರೂಪುಗೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ ಕ್ರೈಸ್ತರು ಕನ್ನಡವನ್ನು ಚೆನ್ನಾಗಿ ಕಲಿತು, ಹಳೆಯ ಗ್ರಂಥಗಳನ್ನು ಬೆಳಕಿಗೆ ತಂದಿದ್ದಲ್ಲದೆ ವ್ಯಾಕರಣ ನಿಘಂಟುಗಳನ್ನು ರಚಿಸಿ, ಭಾಷಾಶಾಸ್ತ್ರ ವ್ಯಾಸಂಗಕ್ಕೆ ಸಾಮಾಗ್ರಿ ಕೂಡಿ ಹಾಕಿದರು. ಇವರಲ್ಲಿ ಸೃಜನಶೀಲ ಗುಣವು ಬೇರೂರಿದ್ದರಿಂದ ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಸಫಲರಾದರು. ಮೊದಲ ಕನ್ನಡ ನಿಘಂಟುವನ್ನು ರಚಿಸಿದ ಕಿಟಲ್, ಮೊದಲ ಕನ್ನಡ ಪತ್ರಿಕೆಗೆ ಕಾರಣರಾದ ಮೊಗ್ಲಿಂಗ್, ಆಡಳಿತಗಾರರಾದ ಥಾಮಸ್ ಮನ್ರೋ, ಕಬ್ಬನ್ ಮೊದಲಾದ ಕ್ರೈಸ್ತ ಸಮುದಾಯದವರು ಆಧುನಿಕ ಕನ್ನಡದ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡ ಅವರು ಈ ಮಹತ್ವದ ಪರಂಪರೆಯಲ್ಲಿ ಫಾದರ್ ಚೌರಪ್ಪ ಸೆಲ್ವರಾಜ್ ಕೂಡ ಸೇರುತ್ತಾರೆ. ಕನ್ನಡ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸವಲತ್ತುಗಳ ಕುರಿತಾಗಿ ಅವರು ಸುದೀರ್ಘ ಹೋರಾಟ ಮಾಡಿದರು. ಪ್ರಗತಿಪರ ಚಳುವಳಿಗೆ ಜೊತೆಗೆ ಸದಾ ಇರುತ್ತಿದ್ದ ಚಸರಾ ಸ್ವತ: ಉತ್ತಮ ಬರಹಗಾರರು, ಕ್ರೈಸ್ತ ಸಾಹಿತ್ಯ ಮತ್ತು ಸಂಗೀತಕ್ಕೆ ಘನತೆಯನ್ನು ತಂದು ಕೊಟ್ಟರು. ಅವರ ಸ್ಮರಣೆಯಲ್ಲಿ ನೀಡಲಾಗುತ್ತಿರುವ ಪುರಸ್ಕಾರಕ್ಕೆ ಸಾಂಸ್ಕೃತಿಕವಾಗಿ ಬಹಳ ಮಹತ್ವವಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ದಿವ್ಯಸಾನಿಧ್ಯ ಮತ್ತು ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥನ ಮಠ ಬೆಂಗಳೂರಿನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಮಹಾ ಸ್ವಾಮೀಜಿಯವರು ಮಾತನಾಡಿ “ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಭೌತಿಕ ಕೊಡುಗೆಗಳನ್ನು ನೀಡಿದವರಷ್ಟೇ ಬೌದ್ದಿಕ ಕೊಡುಗೆಗಳನ್ನು ನೀಡಿದವರೂ ಕೂಡ ಮುಖ್ಯ, ಮಾನವತಾವಾದದ ವಿಶಾಲ ತಳಹದಿಯಲ್ಲಿ ಈ ನಾಡನ್ನು ಕಟ್ಟಿ ಎಲೆಮರೆಯ ಕಾಯಿಯಂತೆ ಉಳಿದಿರುವವರಲ್ಲಿ ಫಾದರ್ ಚಸರಾ ಅವರೂ ಕೂಡ ಪ್ರಮುಖರು. ಅವರ ಹೆಸರಿನಲ್ಲಿನ ಈ ಪುರಸ್ಕಾರ ಮಾನವೀಯ ಪರಂಪರೆಯ ಸಮರ್ಥ ಮುಂದುವರಿಕೆ ಕೂಡ ಹೌದು” ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪ್ರದಾನವನ್ನು ಮಾಡಿರುವ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಡಿ. ಡೊಮಿನಿಕ್ “ಕನ್ನಡ ಹಿರಿಮೆ ಎಂದರೆ ಅದಕ್ಕಿರುವ ಬಹುತ್ವದ ಶಕ್ತಿ. ಅದನ್ನು ಭವಿಷ್ಯದ ನೆಲೆಗಳಲ್ಲಿ ಕೂಡ ಉಳಿಸಿಕೊಳ್ಳುವಲ್ಲಿ ಇಂತಹ ಪುರಸ್ಕಾರಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಕಿರಿಯರಲ್ಲಿಯೂ ಬಹುತ್ವದ ಪ್ರಜ್ಞೆಯನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ಹೇಳಿದರು.
ದತ್ತಿದಾನಿಗಳ ಪರವಾಗಿ ರೀಟಾರೀನಿ ಪುರಸ್ಕಾರದ ಹಿನ್ನೆಲೆಯನ್ನು ವಿವರಿಸಿದರು. ಹಿರಿಯ ಸಾಹಿತಿಗಳಾದ ಕುಂಪನೀಸೀಮೆ ಪಿ.ಸಿ. ಅಂಥೋನಿಸ್ವಾಮಿ ಮತ್ತು ಡಾ. ಬಿ.ಎಸ್. ತಲ್ವಾಡಿಯವರು ಪುರಸ್ಕಾರವನ್ನು ಸ್ವೀಕರಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡುರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಅಪಾರ ಸಂಖ್ಯೆ ಫಾದರ್ ಚಸರಾ ಅವರ ಅಭಿಮಾನಿಗಳು, ಕನ್ನಡ ಪ್ರೇಮಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.