ಮಂಗಳೂರು : ಹಿರಿಯ ಸಾಹಿತಿ ಡಾ.ವಾಮನ ನಂದಾವರ ಅವರ ಬಹುಮಾನಿತ ‘ಸಿಂಗದನ’ ಕೃತಿಯ ಮೂರನೇ ಮುದ್ರಣವನ್ನು ನಗರದ ಬಲ್ಲಾಳ್ ಬಾಗ್‌ನ ಪತ್ತುಮುಡಿ ಸೌಧದಲ್ಲಿ ದಿನಾಂಕ 05-08-2023ರಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ “ನಮಗೆ ಸಂಶೋಧನೆಯ ಬದಲು, ಸಂಶೋಧನ ವಿಷಯದ ಆಯ್ಕೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾಹಿತಿ ಡಾ. ವಾಮನ ನಂದಾವರ ಅವರ ‘ಸಿಂಗದನ’ ಪುಸ್ತಕ ಜಾನಪದ ಸಂಶೋಧನೆಗೆ ದಿಕ್ಕೂಚಿ ಕೃತಿ. ಸಂಶೋಧನಾರ್ಥಿಗಳಿಗೆ ಬೇಕಾಗುವ ಅನೇಕ ಸಂಗತಿಗಳನ್ನು ಈ ಕೃತಿ ಹೊಂದಿದೆ. ನಮ್ಮತನವನ್ನು ತೋರಿಸುವ ಪ್ರಯತ್ನ, ದೇಸೀಯತೆ, ಸಾಂಸ್ಕೃತಿಕ ನೆಲೆಯಲ್ಲಿ ತುಳುವಿನ ವಿವೇಚನ ಮಾಡುವ ಚಿಂತನೆ ಈ ಪುಸ್ತಕದಲ್ಲಿ ಕಾಣಬಹುದು. ‘ಸಿಂಗದನ’’ ಕೃತಿಗೆ ಮೂರನೇ ಮರುಹುಟ್ಟು ಪ್ರಾಪ್ತವಾಗಿದೆ. 104 ಪುಟಗಳನ್ನು ಹೊಂದಿದ ಅಷ್ಟದಳದ ನಾಲ್ಕು ಲೇಖನವನ್ನು ಈ ಪುಸ್ತಕ ಹೊಂದಿದೆ. ಈ ನೆಲದ ತೌಳವ ಸಂಸ್ಕೃತಿ, ಭೂತಾರಾಧನೆಯ ಹುಟ್ಟು, ಪ್ರಸರಣ, ಮಡಿವಾಳ ಜಾತಿಗೆ ಸಂಬಂಧಿತ ಲೇಖನಗಳನ್ನು ಹೊಂದಿದೆ. ಭಯ-ಭಕ್ತಿಗೆ ಒಳಗಾದ ಆಚರಣೆಯ ಕ್ರಮ, ಅಧ್ಯಯನದ ಕುರಿತ ಕುತೂಹಲ ಈ ಕೃತಿ ಉಂಟುಮಾಡುತ್ತದೆ. ಬದುಕನ್ನು ಕುತೂಹಲದಿಂದ ಕಾಣುವ ನಂದಾವರ ಅವರು ಬದುಕಿನ ಸಂಸ್ಕೃತಿಯ ಅನಾವರಣವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ನಂದಾವರ ಅವರಿಗೆ ಜಾಗತಿಕ ಮನ್ನಣೆ ಪ್ರಾಪ್ತವಾಗಬೇಕಿತ್ತು. ಅವರ ಕೃತಿಗಳೆಲ್ಲ ಒಂದೇ ಸಂಪುಟವಾಗಿ ಹೊರಬರಬೇಕಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಚನ ಗಾಯಕ ಮೌನೇಶ್ ಕುಮಾರ್ ಛಾವಣಿ, ಉದ್ಯಮಿ ಸೂರ್ಯನಾರಾಯಣ ರಾವ್, ಸಾಹಿತಿ ಡಾ. ವಾಮನ ನಂದಾವರ, ಹೇಮಾಶ್ರೀ, ಸುಧಾಂಶು ಅವರು ಉಪಸ್ಥಿತರಿದ್ದರು. ಬಳಿಕ ಮೌನೇಶ್ ಕುಮಾರ್ ಛಾವಣಿ ಮತ್ತು ಬಳಗದವರಿಂದ ವಚನ, ದಾಸ ಸಾಹಿತ್ಯ ಗಾಯನ ನಡೆಯಿತು. ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಪ್ರಸ್ತಾವಿಸಿ, ವಂದಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರಿನ ಕಲ್ಲೂರು ನಾಗೇಶ್ ಸ್ವಾಗತಿಸಿ, ನಿರೂಪಿಸಿದರು.