ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಾರ್ಷಿಕೋತ್ಸವ ‘ಆಂಜನೇಯ-56’ ಕಾರ್ಯಕ್ರಮವು ದಿನಾಂಕ 25 ಡಿಸೆಂಬರ್ 2024ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಇವರಿಗೆ ‘ಯಕ್ಷಾಂಜನೇಯ ಪ್ರಶಸ್ತಿ’ ಹಾಗೂ ಖ್ಯಾತ ಭಾಗವತೆ ಭವ್ಯಶ್ರೀ ಕುಲ್ಕುಂದ ಇವರಿಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ‘ವಿಂಶತಿ ಗೌರವ’ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಆಶೀವರ್ಚನ ನೀಡಿದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ “ಕಳೆದ 56 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಂಜನೇಯ ಯಕ್ಷಗಾನ ಕಲಾ ಸಂಘದ ಸೇವೆ ಇನ್ನಷ್ಟು ಪಸರಿಸಲಿ. ಮಹಿಳಾ ತಂಡವನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಮುನ್ನಡೆಯುತ್ತಿರುವುದು ಯಕ್ಷಗಾನ ಕ್ಷೇತ್ರದ ಬಹುದೊಡ್ಡ ಸಾಧನೆಯಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ “ಯಕ್ಷಗಾನಕ್ಕೆ ಪ್ರೋತ್ಸಾಹ ಇಲ್ಲದ ದಿನಗಳಲ್ಲಿಯೂ ಸಂಘವನ್ನು ಇಷ್ಟು ವರ್ಷ ಮುನ್ನಡೆಸಿರುವುದು ದೊಡ್ಡ ತಪಸ್ಸು ಮಾಡಿದಂತೆ ಆಗಿದೆ” ಎಂದರು.
ಹಿರಿಯ ಅರ್ಥದಾರಿ ಪ್ರಭಾಕರ ಜೋಶಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ, ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಮಧುರಾ ಜಿ.ಭಟ್ ಅಭಿನಂದನಾ ಭಾಷಣ ಮಾಡಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಕುಮಾರ್ ಉಪಸ್ಥಿತರಿದ್ದರು. ಉದ್ಯಮಿ ಕರುಣಾಕರ ರೈ ಇವರನ್ನು ಗೌರವಿಸಲಾಯಿತು.
ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ವರದಿ ವಾಚಿಸಿದರು. ಸಂಘದ ಗೌರವಾಧ್ಯಕ್ಷ ರಮಾನಂದ ನಾಯಕ್, ಗೌರವ ಕಾರ್ಯದರ್ಶಿ ರಂಗನಾಥ ರಾವ್, ಕಾರ್ಯದರ್ಶಿ ಆನಂದ ಸವಣೂರು, ಜತೆ ಕಾರ್ಯದರ್ಶಿ ಪರೀಕ್ಷಿತ್ ಅಂದ್ರಡ್ಕ, ರಾಜ್ ಗೋಪಾಲ್, ಭಾಸ್ಕರ ಶೆಟ್ಟಿ, ಮನೋರಮಾ ಜಿ. ಭಟ್, ಗಣರಾಜ ಭಟ್ ಕೆದಿಲ, ಮಹಿಳಾ ಸಂಘದ ಕಾರ್ಯದರ್ಶಿ ಹರಿಣಾಕ್ಷೆ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿ, ಸಂಘದ ಕೋಶಾಧಿಕಾರಿ ದುಗ್ಗಪ್ಪ ಎನ್. ವಂದಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.