ಮಡಿಕೇರಿ : ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿಸಿದ್ದ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯರವರ ಕುರಿತಾದ ‘ಅವ್ವ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 06-04-2024ರಂದು ನಡೆಯಿತು.
ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಪತ್ರಕರ್ತ ಕೆ.ಬಿ. ಗಣಪತಿಯವರು ಮಾತನಾಡಿ “ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ, ಆದರ್ಶಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾರ್ವತಿ ಪೂವಯ್ಯರವರಿಗೆ ಸಲ್ಲಬೇಕು. ಪಂದ್ಯಂಡ ಗಣಪತಿಯವರು ಅಂದಿನ ಕಾಲದಲ್ಲಿ ಕೊಡಗಿನ ಗಾಂಧಿ ಎಂದು ಹೆಸರಾಗಿದ್ದರೆ, ಕೂತಂಡ ಪೂರ್ವತಿ ಪೂವಯ್ಯರವರು ಕೊಡಗಿನ ಸರೋಜಿನಿ ನಾಯ್ಡು ಎಂದು ಹೆಸರುವಾಸಿಯಾಗಿದ್ದರು. ಕೂತಂಡ ಪಾರ್ವತಿಯವರನ್ನು ಪ್ರತ್ಯಕ್ಷ ಕಂಡವರು ಕೆಲವೇ ಜನರಾದರೂ ಪಾರ್ವತಿರವರ ಜೀವನಾದರ್ಶಗಳನ್ನು ಅರಿತವರು ಅನೇಕರಿದ್ದಾರೆ. ತನ್ನ ಬರವಣಿಗೆ ಮೂಲಕ ಕೊಡವರಂಥ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀರ್ತಿ ಪಾರ್ವತಿ ಪೂವಯ್ಯನವರಿಗೆ ಸಲ್ಲುತ್ತದೆ. ಕೊಡವ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಹಿಡಿತ ಹೊಂದುವ ಮೂಲಕ ಅಂದಿನ ಕಾಲಘಟ್ಟದಲ್ಲಿಯೇ ಕೊಡಗಿನ ಪ್ರಥಮ ಮಹಿಳಾ ಲೇಖಕಿಯಾಗಿ ಪಾರ್ವತಿ ಪೂವಯ್ಯ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಸಾಹಿತಿಯಾದಂತೆಯೇ ಜೀವನದಲ್ಲಿಯೂ ತನ್ನದೇ ಆದರ್ಶ ಹೊಂದಿದ್ದ ಪಾರ್ವತಿ ಓಬ್ಬ ಮಾದರಿ ತಾಯಿ ಕೂಡ” ಎಂದು ಗಣಪತಿ ಶ್ಲಾಘಿಸಿದರು.
ಮಡಿಕೇರಿಯ ಹಿರಿಯ ವೈದ್ಯ ಡಾ. ಎಂ.ಜಿ. ಪಾಟ್ಕರ್ ಮಾತನಾಡಿ, ‘ಅವ್ವ’ ಎಂಬುದು ಸರಳ ಶಬ್ದವಾಗಿದ್ದರೂ ‘ಅವ್ವ’ ಪದ ನೀಡುವ ಅರ್ಥ ವಿಶಾಲವಾದದ್ದು. ಕೂತಂಡ ಪೂವಯ ಪಾರ್ವತಿ ಪೂವಯ್ಯರವರು ಜೀವಿಸಿದ್ದ ಕಾಲದಲ್ಲಿ ಭಾರತ ಅತ್ಯಂತ ಸಂಕಷ್ಟದ ದಿನಗಳನ್ನು ಕಂಡಿತ್ತು. ಬಡತನ ತಾಂಡವವಾಡುತ್ತಿತ್ತು. ಇಂಥ ದಿನಗಳಲ್ಲಿಯೂ ಸಾಹಿತ್ಯ ಶ್ರೀಮಂತಿಕೆ ಮೆರೆದವರು ಪಾರ್ವತಿಯವರು. ಈಗಿನ ಕವಿತೆಗಳಲ್ಲಿ ಮೌಲ್ಯ ಕುಸಿಯುತ್ತಿದೆ. ತೋಚಿದ್ದನ್ನು ಗೀಚಿದಂತೆ ಕಂಡು ಬರುತ್ತಿದೆ. ಇದರಿಂದಾಗಿ ಅರ್ಥಹೀನ ಕವಿತೆಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಅಂದಿನ ಕಾಲಮಾನದಲ್ಲಿಯೇ ಮೌಲ್ಯ, ಸತ್ವಯುತ ಕವನ, ಲೇಖನಗಳನ್ನು ಬರೆದ ಕೂತಂಡ ಪಾರ್ವತಿ ಪೂವಯ್ಯ ಸದಾ ಆದರ್ಶ” ಎಂದು ಹೇಳಿದರು.
‘ಅವ್ವ’ ಕೃತಿಯ ಲೇಖಕಿ ಡಾ. ನಯನ ಕಶ್ಯಪ್ ಮಾತನಾಡಿ, “ಪಾರ್ವತಿ ಪೂವಯ್ಯರ ಜೀವನ ಮತ್ತು ಲೇಖನ ಎರಡೂ ಸರಳವಾಗಿತ್ತು. ಹೀಗಾಗಿಯೇ ಅವರು ಜನಮಾನಸದಲ್ಲಿ ಉಳಿದರು. ಆ ಕಾಲದ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಲೇಖನಗಳನ್ನು ಬರೆದದ್ದು ಕೂತಂಡ ಪಾರ್ವತಿ ಪೂವಯ್ಯ ಅವರ ಹೆಗ್ಗಳಿಕೆಯಾಗಿದೆ. ಸಾಹಿತ್ಯ ಎಂದಿಗೂ ಘನಗಾಂಭೀರ್ಯದಿಂದ ಕೂಡಿರಬೇಕಾಗಿಲ್ಲ. ಸರಳ ರೂಪದಲ್ಲಿಯೂ ಓದುಗನನ್ನು ಚಿಂತನೆಗೆ ಒಳಪಡಿಸುವುದೇ ನಿಜವಾದ ಸಾಹಿತ್ಯ” ಎಂದು ಹೇಳಿದರು. ಕೂತಂಡ ಉತ್ತಪ್ಪ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿದರು. ದೀಪಿಕಾ ಅಪ್ಪಯ್ಯ ನಿರೂಪಿಸಿ, ಬಾಲಾಜಿ ಕಶ್ಯಪ್ ವಂದಿಸಿದರು.