ಈ ನಾಟಕದ ಮೊದಲ ಪ್ರದರ್ಶನದಿಂದಲೇ ನಾಟಕದ ಕುರಿತು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಆವಾಗಿನಿಂದ್ಲೂ ನಾಟ್ಕ ನೋಡಲೇಬೇಕೆಂಬ ತೀವೃ ತುಡಿತವಿತ್ತು. ಆಗ ಮೈಸೂರಿನಲ್ಲಿ ಮಾತ್ರ ಪ್ರದರ್ಶನಗಳಾಗ್ತಿದ್ವು. ನಮ್ಮೂರಿಗೆ ಮೈಸೂರು ತುಂಬ ದೂರ. ಆದರೂ ಹೊಗೋ ಉಮೇದು ತುಂಬ ಇತ್ತು. ಯಾಕೋ ಸಧ್ಯವಾಗಲೇ ಇಲ್ಲ. ಈ ಮಧ್ಯೆ ನಾಟಕದ ಪ್ರದರ್ಶನಗಳೂ ನಡೆದಂತೆ ಕಾಣಲಿಲ್ಲ. ಇನ್ನೇನು ಇಂಥದೊಂದು ನಾಟ್ಕ ಕೈತಪ್ಪಿ ಹೋಯ್ತಲ್ಲ ಅಂದ್ಕೊಳ್ತಾ ಇರುವಾಗ್ಲೇ ಗೆಳೆಯ ಐಕೆ ಉಡುಪಿಯ ಪ್ರದರ್ಶನದ ಬಗ್ಗೆ ಹೇಳಿದ್ರು. ಮಗ್ಗುಲಲ್ಲೇ ಇರೋವಾಗ ಬಿಡೋದುಂಟೇ?. ಮೊನ್ನೆ ಉಡುಪಿಗೆ ಹೊರಟೇಬಿಟ್ಟೆ. ರಂಗಭೂಮಿ ಯ ನಾಟಕೋತ್ಸವದಲ್ಲಿ ನಾಟ್ಕ ನೋಡ್ದೆ.
ಖರೇ ಹೇಳ್ತೇನೆ. ಅಷ್ಟು ದೂರ ಹೋಗಿ ನಾಟ್ಕ ನೋಡಿದ್ದಕ್ಕೆ ಸಾರ್ಥಕ ಅನ್ನಿಸ್ತು. ಮೊದಲಿಗೆ ಈ ನಾಟ್ಕ ಉಡುಪಿಗೆ ತಂದಿದ್ದಕ್ಕೆ ಪ್ರದೀಪ್ ಗೆ ಧನ್ಯವಾದ.
ರಾಮಾಯಣ, ಮಹಾಭಾರತಗಳು ಭಾರತೀಯ ಸೃಜನಶೀಲ ಕಲೆಗಳನ್ನು ಕಾಡಿದಷ್ಟು ಇನ್ಯಾವುದೂ ಕಾಡಿಲ್ಲವೇನೋ. ಮೊಗೆದಷ್ಟೂ ಸಿಗುತ್ತ ಹೋಗುವ ಜೀವನಾನುಭವಗಳು, ಎಣೆಯಿಲ್ಲದಷ್ಟು ಸಂಘರ್ಷಗಳು. ನೂರಾರು ವ್ಯಾಖ್ಯಾನಗಳು. ಹಾಗೆಂತಲೇ ಶಾಸ್ತ್ರೀಯ ಮತ್ತು ಜಾನಪದೀಯ ಕಲಾಪ್ರಕಾರಗಳ ಫೇವರಿಟ್ ಅವು.
‘ಅಯೋಧ್ಯಾಕಾಂಡ’ ಕೂಡ ಇಂಥದೊಂದು ಗಣಿಯಿಂದ ತೆಗೆದ ಅದಿರು. ಪುಟವಿಟ್ಟುಕೊಂಡು ಹೊರಬಂದ ರಸಪಾಕ. ಬಣ್ಣ ಬೇಗಡೆಗಳ ಹಂಗಿಲ್ಲದೇ ಕಥೆಯೊಂದನ್ನ ಎಷ್ಟು ಸರಳವಾಗಿ ಹೇಳಬಹುದೆನ್ನುವದಕ್ಕೆ ನಿದರ್ಶನ. ಮತ್ತೆ ಇದಕ್ಕೊದಗಿ ಬಂದದ್ದೂ ಜಾನಪದ ನೆಲೆಯೇ. ಇಂಥ ನೆಲೆಯ ಮೇಲೆ, ಬರೇ ನಟರು, ಗಾಯಕರ ಮೇಲೆ ಅಪಾರ ನಂಬಿಕೆಯಿಟ್ಟು ಕಟ್ಟಿದ ಆಟ.
ಅಯೋಧ್ಯಾಕಾಂಡ ಎಂದರೇನೇ ಕೈಕೇಯಿ ಕಟ್ಟುವ ಆಟ. ಇದೆಲ್ಲ ಶುರುವಾಗೋದು ಒಂದು ಲಡ್ಡುವಿನೊಂದಿಗೆ. ಕೌಸಲ್ಯೆಯ ಮನೆಯಿಂದ ಹೊರಟ ಸಿಹಿ ಲಡ್ಡುವೊಂದು ದಶರಥನ ಬದುಕನ್ನೇ ಕಹಿ ಮಾಡಿದ, ಜೊತೆಗೇನೇ ಮುಂದಿನ ದೀರ್ಘ ರಾಮಾಯಣಕ್ಕೆ ಕಾರಣವಾಗುವ ಕಥೆ.
ಕಥೆ ಎಲ್ಲರಿಗೋ ತಿಳಿದದ್ದೇ. ಆದರೆ ಇಲ್ಲಿ ಹಿರಿಯ ರಂಗ ನಿರ್ದೇಶಕ, ನಾಟಕಕಾರ ಪ್ರಸನ್ನ ಅದನ್ನು ರೂಪಿಸಿದ ರೀತಿಯೇ ಬೇರೆ. ಇಲ್ಲಿ ರಾಮ ರಂಗಕ್ಕೆ ಬರುವದೇ ಇಲ್ಲ!
ರಾಮನನ್ನೂ ಪಾತ್ರವಾಗಿಸದೇ ಆಚೆಯಿಟ್ಟು ಕಟ್ಟಿದ ಆತನ ಬದುಕಿನ ನಾಟಕವಿದು.
ಕಥೆಯ ತಿರುವಿನ ಪ್ರಮುಖ ಘಟ್ಟದಲ್ಲಿ ಅವರು ರಾಣಿಯರ ಬದುಕಿಗೆ ‘ಗೆದ್ದಲ’ ನ್ನ ರೂಪಕವಾಗಿಸುತ್ತಾರೆ .ಮಣ್ಣು ತಿನ್ನುತ್ತ ಮಣ್ಣನ್ನೇ ಹೊರಬಿಡುವ ಗೆದ್ದಲು.
‘ಮಲಗಿದ್ದೀಯೇನೇ?’ ಎನ್ನುವ ಪ್ರಶ್ನೆಗೆ, ‘ರಾಣಿಯರು ಮಲಗುವದನ್ನಲ್ಲದೆ ಇನ್ನೇನನ್ನು ಮಾಡಲು ಸಾಧ್ಯ?’ ಎನ್ನುತ್ತಾಳೆ ಕೈಕೇಯಿ. ಇಂಥ ಮಾತುಗಳ ಮೂಲಕ ಅಂತ:ಪುರದೊಳಗಿನ ನೋವನ್ನು ಮನದೊಳಗಿಳಿಸುತ್ತ ಕಣ್ಣುಗಳನ್ನು ತೇವವಾಗಿಸಿಬಿಡುತ್ತಾರೆ. ಒಂದು ಹಂತದಲ್ಲಿ ಮಂಥರೆ, ‘ಕಣ್ಣೀರು ಆವಿಯಾಗುವ ಮೊದಲು ಕಣ್ಣನ್ನೇ ಕರಗಿಸಿಬಿಡು’ ಎನ್ನುತ್ತಾಳೆ. ಕೈಕೇಯಿಯ ಆ ಕ್ಷಣದ ನಿರ್ಧಾರಗಳಿಗೆ ಕಾರಣ ಹುಡುಕುತ್ತ ಹೋದ ಹಾಗೆ ನಾಟಕ ಎಲ್ಲೋ ಫೆಮಿನಿಸ್ಟ್ ಆಗ್ತಿದೆಯೇನೋ ಅನಿಸಿಬಿಡುತ್ತದೆ. ಅಷ್ಟು ಅದ್ಭುತವಾಗಿ, ನಾವು ಕಂಡ ರಾಮಾಯಣಗಳಲ್ಲಿ ‘ವಿಲನ್’ ಆದ ಕೈಕೇಯಿಯೊಳಗಿನ ಸಂಘರ್ಷಗಳನ್ನು ತೆರೆದಿಡುತ್ತ ಅಲ್ಲಲ್ಲಿ ಪ್ರಸ್ತುತ ಸನ್ನಿವೇಶಗಳಿಗೂ ಸಣ್ಣ ಸಣ್ಣ ಟಚ್ ಕೊಡುತ್ತ ಪ್ರಸಂಗವನ್ನು ಸಮಕಾಲೀನಗೊಳಿಸುವ ಪ್ರಯತ್ನವನ್ನೂ ಮಾಡುತ್ತಾರೆ ಪ್ರಸನ್ನ.
ಮೊದಲೇ ಹೇಳಿದಂತೆ ನಾಟಕವನ್ನ ಶರೀರ, ಶಾರೀರ, ಅಭಿನಯದ ಕಸುವಿನ ಮೇಲೇ ನಂಬಿಕೆಯಿಟ್ಟು ವಿನ್ಯಾಸಗೊಳಿಸಿದ್ದಾರೆ. ಇರುವ ಐದಾರು ನಟರು ಕಥಾಭಾಗದ ಎಲ್ಲ ಪಾತ್ರಗಳನ್ನೂ ಆಭಿನಯಿಸುತ್ತಾರೆ. ಎಲ್ಲ ಪಾತ್ರಧಾರಿಗಳೂ ಹಾಡುತ್ತ, ಹಾಡುತ್ತಲೇ ಅಭಿನಯಿಸುತ್ತ ಹೋಗುತ್ತಾರೆ. ನಾಟಕದ ಮುಖ್ಯ ಪಾತ್ರಗಳು ಮೂರೇ. ದಶರಥ, ಕೈಕೇಯಿ, ಮಂಥರೆ. ಇನ್ನುಳಿದಂತೆ ಭರತ, ಸುಮಂತ ರು.
ಇಡಿಯ ರಂಗಪ್ರಯೋಗವನ್ನು ಹಾಡುಗಳೇ ಕೈಹಿಡಿದು ನಡೆಸುವದರಿಂದ ಸಂಗೀತದ ಬಗ್ಗೆ ಹೇಳದೇ ನಾಟಕದ ಕುರಿತು ಹೇಳಿದಂತಾಗುವದಿಲ್ಲ. ಸಂಗೀತ, ಮುಖ್ಯವಾಗಿ ಗಾಯನ ನಾನು ಇತ್ತೀಚಿನ ವರ್ಷಗಳಲ್ಲಿ ಕೇಳಿದ ಉತ್ತಮ ರಗಗಾಯನಗಳಲ್ಲೊಂದು. ( ಸಂಗೀತ: ಅನುಷ್ ಶೆಟ್ಟಿ). ಅನುಷ್, ಮುನ್ನಾ ರ ಜೋಡಿಯ ಸಂಗೀತದ ನಾಟ್ಕಗಳನ್ನು ನಾನಾಗಲೇ ನೋಡಿದ್ದೆನಾದರೂ ನೇರ ಇವರ ಹಾಡುಗಳನ್ನು ಕೇಳಿದ್ದು ಇದೇ ಮೊದಲು. ನಾಟಕದ ಮೂಡ್ ಗೆ ತಕ್ಕಂತೆ ವಿವಿಧ ಶೈಲಿಗಳನ್ನು ಬಳಸುವ ಅನುಷ್ ಆಲಾಪಗಳಿಂದ ಮೊದಲುಗೊಂಡು, ಮಂಟೆಸ್ವಾಮಿಯ ಹಾಡುಗಳ ಮಟ್ಟುಗಳಲ್ಲೆಲ್ಲ ಸುತ್ತಿ ಬರುತ್ತಾರೆ. ಅದರಲ್ಲೂ ಭರತನ ಕನಸಿನ ಸಾವಿನ ಛಾಯೆಯ ಹಾಡಿನ ಸಾಲುಗಳ ಕೊನೆಯಲ್ಲಿ ಇವರು ತರುವ ಕಂಪನಗಳು ಶ್ರೇಷ್ಠ ರಂಗಸಂಗೀತದ ಮಾದರಿಗಳು. ಹಾಗೆಯೇ ಕುಣಿತದಲ್ಲಿ ಕೂಡ ಪ್ರಸನ್ನ ಹಲವಾರು ಶೈಲಿಗಳನ್ನೆತ್ತಿಕೊಂಡಿದ್ದಾರೆ. ಮಂಥರೆಯ ಹಾಡುಗಳಲ್ಲಿ ಕಾಡುಬರುವ ಕಳರಿ ಯ ಚಲನೆಗಳಾಗಲೀ, ಕೈಕೇಯಿಯ ಹಾಡಿನಲ್ಲಿ ಛಕ್ಕಂತ ಬಂದುಹೋಗುವ ಕಥಕ್ ನ ಹೆಜ್ಜೆಗಳಾಗಲೀ ಇಂಥ ಕೆಲವು.
ಎಲ್ಲರ ಅಭಿನಯವೂ ಶ್ರೇಷ್ಠಮಟ್ಟದ್ದೇ. ಕ್ಷಣಕ್ಷಣಕ್ಕೂ ಪಾತ್ರ ಬದಲಿಸುತ್ತ ಆಯಾ ಪಾತ್ರಗಳ ಮೂಡ್ ಗೆ ಸ್ವಿಚ್ ಆಗುತ್ತ ನಟಿಸುವದೇನೂ ಸುಲಭದ ಮತಲ್ಲ. ಅದರಲ್ಲೂ ಮಂಥರೆಯಂಥ ಪಾತ್ರ್ರವನ್ನು ಆವಾಹಿಸಿಕೊಂಡ ಮೇಲೆ. ಇಂಥದ್ದನ್ನು ಪದ್ಮಶ್ರೀ ಯವರು ತುಂಬ ಸುಲಭವಾಗಿ ನಿಭಾಯಿಸುತ್ತಾರೆ. ಅಭಿನಯದಲ್ಲೂ ಹಾಡಿನಲ್ಲೂ ಅವರ ತೊಡಗಿಕೊಳ್ಳುವಿಕೆ ಶ್ರೇಷ್ಠ ಮಟ್ಟದ್ದು. ‘ದಶರಥ’ ಪ್ರದೀಪಚಂದ್ರ ಕುತ್ಪಾಡಿ ಯವರದ್ದು ಕೂಡ ಸಮರ್ಥ ಅಭಿನಯ. ಅದರಲ್ಲೂ ಮೊದಲ ಭಾಗ ಶ್ರೇಷ್ಠ. ನಾಟಕದ ಪೂರ್ವಾರ್ಧದಲ್ಲಿ ತುಂಬ ಬ್ಯಾಲೆನ್ಸ್ಡ್ ಆಗಿ ಅಭಿನಯಿಸುವ ಪ್ರದೀಪ್ ರ ಅಭಿನಯ ಉತ್ತರಾರ್ಧದಲ್ಲಿ ಚೂರು ಅತಿಯಾಯಿತೇನೋ ಎನಿಸುತ್ತದೆ. ನಾಟಕದುದ್ದಕ್ಕೂ ಬರುವ ಕೈಕೇಯಿ ಪಾತ್ರದ ರಾಜಲಕ್ಷ್ಮಿ ಯವರ ಅಭಿನಯ ಕೂಡ ಚೆನ್ನಾಗಿದೆ. ಕೈಕೇಯಿಯ ತುಮುಲಗಳನ್ನ ಸತ್ವಯುತವಾಗಿಯೇ ಮುಟ್ಟಿಸುತ್ತಾರೆ.ತುಸು ತುಸು ನಾಚುತ್ತ, ಸಂಗಿತಗಾರ ಅನುಷ್ ಭಾಗವತರ ಪಾತ್ರವನ್ನೂ ಚೆನ್ನಾಗಿಯೇ ಮಾಡುತ್ತಾರೆ. ಭರತ ನಾಗಿ ವಿಶ್ವಾಸ್ ಕೂಡ. ಏಲ್ಲ ಪಾತ್ರಧಾರಿಗಳೂ ಹಾಡುತ್ತಲೇ ಅಭಿನಯಿಸುವದರಿಂದ ಎಲ್ಲರಿಗೂ ಅಂಕ ಜಾಸ್ತಿ.
ನಾಟಕ ಮುಗಿಯುವ ಕೆಲವು ನಿಮಿಷಗಳ ಮುಂಚೆ ಒಂದು ಹಾಡು ಬರುತ್ತದೆ. ‘….ಇದೇ ಅಯೋಧ್ಯಾಕಾಂಡ.’
ಆದರೆ ನಾಟಕ ಮುಗಿದಿಲ್ಲ. ದಶರಥನಿನ್ನೂ ಮಡಿದಿಲ್ಲ. ಆತ ಸುಮಂತನ ಕೈಯಲ್ಲಿ ಪ್ರಾಣ ಬಿಡಬೇಕಿದೆ. ಅವನಿಂದ ಸೀತಾರಾಮರ ವನವಾಸದ ವಿಷಯ ಕೇಳಬೇಕಿದೆ. ಹಳೆಯದನ್ನ ನೆನಪಿಸಿಕೊಳ್ಳಬೇಕಿದೆ. ‘ಅರಿಯದೇ ಎದೆಯ ಚುಚ್ಚಿದೆನೋ…’ ಎಂದು ಅಲವತ್ತುಕೊಳ್ಳಬೇಕಿದೆ. ನಂತರವೇ ಮರಣ. ನಾಟಕದ ಈ ಭಾಗವೇ ತುಸು ಎಳೆದಂತೆನಿಸುತ್ತದೆ. ಮೆಲೋಡ್ರಾಮಾ ಇನ್ನಷ್ಟು ಎಳೆಸುತ್ತದೆ. ರಂಗಪ್ರಯೋಗದ ಅವಧಿ ಹೆಚ್ಚಾಗುತ್ತದೆ. ಇವೆಲ್ಲ ಮೇಲೆ ಹೇಳಿದ ‘ಇದೇ ಅಯೋಧ್ಯಾಕಾಂಡ’ ಹಾಡಿನ ಮೊದಲೇ ಬೇಗ ಮುಗಿದು ಹೋಗಿದ್ದರೆ ನಾಟಕ ಇನ್ನಷ್ಟು ಕಳೆಗಟ್ಟುತ್ತಿತ್ತೇನೋ ಎನಿಸುತ್ತದೆ.
ಏನೇ ಆದರೂ.. ಇದೊಂದು ಶ್ರೇಷ್ಠ ರಂಗಪ್ರಯೋಗ.
ನಾಟಕದ ಆಶಯದ ಹಾಡಿನಲ್ಲಿ ಮೇಳದ ನಿವೇದನೆಯಿದೆ.
‘ಎಲ್ಲರನ್ನೂ ಮನುಷ್ಯರನ್ನಾಗಿಸು ರಾಮಾ..’ ಎನ್ನುತ್ತದೆ ಅ ಸಾಲು.
ದ್ವೇಷವೇ ತುಂಬಿದ ಇಂದಿನ ಜಗತ್ತಿನಲ್ಲಿ ರಾಮ ಎಲ್ಲರನ್ನೂ ಮನುಷ್ಯರನ್ನಾಗಿಸಲಿ ಎಂಬ ಆಶಯದೊಂದಿಗೆ
ಮುಕ್ತಾಯ.
– ಕಿರಣ ಭಟ್, ಹೊನ್ನಾವರ.
ನಾಟಕ: ಅಯೋಧ್ಯಾ ಕಾಂಡ
ರಚನೆ, ನಿರ್ದೇಶನ: ಪ್ರಸನ್ನ
ಅಭಿನಯ : ನವೋದಯ, ಮೈಸೂರು