ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 17 ನೇ ವಾರ್ಷಿಕೋತ್ಸವ ಮಂಗಳೂರಿನ ಪುರಭವನದಲ್ಲಿ ದಿನಾಂಕ 26 ಸೆಪ್ಟೆಂಬರ್ 2024 ರಂದು ನಡೆಯಿತು. ಇದರ ಪ್ರಯುಕ್ತ ಆಯೋಜಿಸಿದ ‘ಸ್ವರ ಕುಡ್ಲ ಸೀಸನ್ 6’ ಸಂಗೀತ ಸ್ಪರ್ಧೆಯಲ್ಲಿ ಮಂಗಳೂರಿನ ಆಯೂಷ್ ಪ್ರೇಮ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸೈಂಟ್ ಅಲೋಶಿಯಸ್, ಕೊಡಿಯಾಲ್ ಬೈಲ್ ಇಲ್ಲಿನ 9ನೆಯ ತರಗತಿಯ ವಿದ್ಯಾರ್ಥಿಯಾದ ಆಯುಷ್ ಪ್ರೇಮ್, ಉಡುಪಿ ಮತ್ತು ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳಿಂದ ಯಾವುದೇ ವಯೋಮಿತಿ ಇಲ್ಲದ 90 ಮಂದಿ ಸ್ಪರ್ಧಿಗಳಿಂದ ಕೂಡಿದ ಅತೀ ಕಠಿಣ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಗಮನಾರ್ಹ ಮತ್ತು ಶ್ಲಾಘನೀಯ. ಇದೇ ಸ್ಪರ್ಧೆಯಲ್ಲಿ ಸ್ನೇಹಿತ್ ಸುರೇಂದ್ರನ್ ಇವರು ರನ್ನರ್ ಅಪ್ ಹಾಗೂ ಮೂರನೇ ಬಹುಮಾನವನ್ನು ಮಹೇಂದ್ರ ಶೆಟ್ಟಿ ಮತ್ತು ಪ್ರಣತಿ ಕೂಳೂರು ಹಂಚಿಕೊಂಡರು.
ಒಕ್ಕೂಟದ ಅಧ್ಯಕ್ಷರಾದ ದೀಪಕ್ ರಾಜ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಯಮಿ ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು. ದೈಜಿವರ್ಲ್ಡ್ ಮೀಡಿಯಾ ಸ್ಥಾಪಕ ವಾಲ್ಟರ್ ನಂದಳಿಕೆ, ಶ್ರೀಭಗವತಿ ಸಹಕಾರಿ ಬ್ಯಾಂಕ್ ಇದರ ಉಪಾಧ್ಯಕ್ಷ ದೇವದಾಸ ಕೊಲ್ಯ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ನಿರುಪಮಾ ಪ್ರಸಾದ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಉಡುಪಿಯ ಸಂಗೀತ ಕಲಾವಿದ ರಾಜಾರಾಮ ಭಕ್ತ, ಕೀಬೋರ್ಡ್ ವಾದಕ ಗುಡ್‌ವಿಲ್ ಫ್ರೆಡ್ರಿಕ್ಸ್ ಹಾಗೂ ಗಿಟಾರ್ ವಾದಕ ಕೆ. ಸಿ. ಬಶೀರ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ಲಾಂಟ್‌ಟೆಕ್ ನಿರ್ದೇಶಕ ಲಾರೆನ್ಸ್ ಡಿ’ಸೋಜ, ಸಿಂಫನಿ ಮ್ಯೂಸಿಕ್ ಇದರ ಲಾಯ್ ನೊರೊನ್ಹ, ಉದ್ಯಮಿಗಳಾದ ಲತೀಫ್ ಗುರುಪುರ, ಮಹಮ್ಮದ್ ಅಯಾಜ್ ಮತ್ತಿತರರು ಭಾಗವಹಿಸಿದ್ದರು.
ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಗೌರವ ಸಲಹೆಗಾರ ಜಗದೀಶ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು.