ಮಂಗಳೂರು : ರಥಬೀದಿಯಲ್ಲಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಇದರ ವತಿಯಿಂದ ಸಂಘದ ಹಿರಿಯ ಸದಸ್ಯ, ಭಾಗವತ, ಹಿಮ್ಮೇಳ ಕಲಾವಿದ ದಿ. ಬಿ. ನಾಗೇಶ ಪ್ರಭು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 31 ಆಗಸ್ಟ್ 2025ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರು ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ಜರುಗಲಿದೆ.
ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಇದೇ ವೇಳೆ ತಲಕಳ ‘ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ’ದ ಸಂಚಾಲಕಿ ಶ್ರೀಮತಿ ಯೋಗಾಕ್ಷಿ ಗಣೇಶ ಇವರಿಗೆ ‘ಶ್ರೀ ವಾಗೀಶ್ವರೀ ಅನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದ ಗೌರವಾಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ಸಮಾರಂಭ ಜರುಗಲಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಸಂಘಟನಾ ಕಾರ್ಯದರ್ಶಿ ಪ್ರದೀಪ ಆಳ್ವ ಮತ್ತು ಬಂಟ್ವಾಳ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಪಾಲ್ಗೊಳ್ಳಲಿರುವರು. ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಇವರು ದಿ. ನಾಗೇಶ ಪ್ರಭುಗಳ ಸಂಸ್ಮರಣೆಗೈಯುವರು.