ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಸುಮಾರು 5400ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರೊ. ಬಿ.ಎ. ವಿವೇಕ ರೈ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ಗ್ರಂಥಾಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 25-04-2023ರಂದು ಮ.ವಿ.ವಿ ಗ್ರಂಥಾಲಯದಲ್ಲಿ ನಡೆಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ.ಎ. ವಿವೇಕ ರೈ “ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಮಂಗಳೂರು ವಿವಿಯ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಒಂದು ಪ್ರೀತಿ ಅಭಿಮಾನಕ್ಕೆ ಪ್ರತಿಯಾಗಿ ನಾನು ನನ್ನಲ್ಲಿರುವ ಅಪಾರ ಸಂಖ್ಯೆಯ ಪುಸ್ತಕಗಳನ್ನು ಮ.ವಿ.ವಿ. ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದೇನೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸಂಶೋಧಕರು ಹಾಗೂ ಯುವಜನತೆ ಪಡೆದುಕೊಳ್ಳಬೇಕು. ಜೊತೆಗೆ ಮಂಗಳೂರು ವಿ.ವಿ. ಅಭಿವೃದ್ದಿ ಪಥದಲ್ಲಿ ಮುಂದುವರೆಯಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಮಂ.ವಿ.ವಿ. ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯರು ಮಾತನಾಡುತ್ತ “ಬಿ.ಎ. ವಿವೇಕ ರೈ ಇವರ ಸೇವಾ ಮನೋಭಾವನೆ ಪಾಂಡಿತ್ಯ ನಮಗೆಲ್ಲ ಸ್ಪೂರ್ತಿಯಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪುಸ್ತಕಗಳ ಮಹತ್ವದ ಬಗ್ಗೆ ಯುವಜನತೆ ತಿಳಿದುಕೊಳ್ಳಬೇಕು. ತಮ್ಮ ಸಂಗ್ರಹದ ಅಮೂಲ್ಯ ಕೃತಿಗಳನ್ನು ವಿವಿ ಗ್ರಂಥಾಲಯಕ್ಕೆ ನೀಡಿ ಮುಂದಿನ ತಲೆಮಾರಿನ ಆಸಕ್ತರಿಗೆ ಒದಗಿಸಿರುವುದು ಶ್ಲಾಘನೀಯ” ಎಂದರು. ಯೂತ್ ರೆಡ್ ಕ್ರಾಸ್ ಸಂಸ್ಥೆಯ ‘ಸೇವಾ ಕಲಿಕೆ’ ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕುಲಪತಿಗಳು ಸಮಾಜಕ್ಕೆ ನಮ್ಮಿಂದ ಆಗುವಂತಹ ಸಹಾಯ ಸಹಕಾರ ಮಾಡೋಣ ಎಂದು ನುಡಿದರು.
ಕಾರ್ಯಕ್ರಮದ ಸಂಯೋಜಕ ಮಂಗಳೂರು ವಿ.ವಿ.ಗ್ರಂಥಪಾಲಕ ಡಾ.ಎಂ.ಪುರುಷೋತ್ತಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ಸರ್ವರನ್ನು ಸ್ವಾಗತಿಸಿದರು. ಮಂಗಳೂರು ವಿ.ವಿ. ಗ್ರಂಥಾಲಯದ ಸಿಬ್ಬಂದಿಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಲಯ ಸಿಬ್ಬಂದಿಗಳಾದ ಶ್ರೀಮತಿ ವೀಣಾರವರು ಪ್ರಾರ್ಥನೆಗೈದು, ಶ್ರೀಮತಿ ಉಷಾರವರು ವಂದನಾರ್ಪಣೆ ಮಾಡಿದರು ಹಾಗೂ ಶ್ರೀಮತಿ ಸವಿತಾಕುಮಾರಿ ನಿರೂಪಿಸಿದರು.