ಉಡುಪಿ : ಸಂತೆಕಟ್ಟೆ ಕಲ್ಯಾಣಪುರದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ…3 ‘ಬಾಲ ಯುಗ್ಮ ನೃತ್ಯ’ ಭರತನಾಟ್ಯ ಪ್ರಸ್ತುತಿ ದಿನಾಂಕ 26 ಜನವರಿ 2026ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಿತು.
ಈ ಕಾರ್ಯಕ್ರಮವು ಪ್ರಾಜ್ಞರಾದ ಕೆಮ್ಮಣ್ಣು ಪಡುಕುದ್ರು ಗಣಪತಿ ಮಠದ ಶ್ರೀ ನೆಂಪು ಶ್ರೀಧರ್ ಭಟ್ ಇ ವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ ತಾವೇ ನೃತ್ಯ ಸಂಬಂಧಿ ಸಂಸ್ಕೃತ ಶ್ಲೋಕಗಳನ್ನು ರಾಗಬದ್ಧವಾಗಿ ಹಾಡಿ ವಿವರಿಸಿದರು. ಪುರಾಣ ನೃತ್ಯ ಪ್ರಕಾರ ಲಲಿತಕಲೆಗಳಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ ಎಂಬ ಸಂದೇಶ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿದ್ಧಕಟ್ಟೆ ನಾಟ್ಯಾಯನ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ.ವಿ. ರಮಣಾಚಾರ್ಯರು ಸಭೆಯನ್ನು ಕುರಿತು “ಭರತನಾಟ್ಯಂತಹ ಕಲೆಗಳು ಗುರು ಪರಂಪರೆ ಇಂದು ಬಂದಿದ್ದು ಈ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಎಲ್ಲಾ ನೃತ್ಯ ಕಲಾವಿದರ ಮೇಲೆ ಇದೆ ಎನ್ನುತ್ತಾ ನೃತ್ಯ ಕಲಿಯುವ ವಿದ್ಯಾರ್ಥಿಗಳಿಗೆ ಹೆತ್ತವರು ಹೆಚ್ಚಿನ ಪ್ರೋತ್ಸಾಹ ನೀಡಬೇಕು” ಎಂದರು. ಹಾಗೆ ಇನ್ನೋರ್ವ ಅತಿಥಿಗಳಾದ ಶತಮಾನೋತ್ಸವವನ್ನು ಕಂಡಿರುವ ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘ ಕೆಮ್ಮಣ್ಣು ಇದರ ಅಧ್ಯಕ್ಷರು ರಂಗ ಕಲಾವಿದರು ಆಗಿರುವ ಶ್ರೀ ಟಿ. ಸತೀಶ್ ಶೆಟ್ಟಿಯವರು “ನೃತ್ಯವು ಮಕ್ಕಳನ್ನು ಮಾನಸಿಕವಾಗಿ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ” ಎಂದರು.



ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮುಕ್ತೇಸರಾದ ಶ್ರೀ ಜ್ಯೋತಿ ಪ್ರಕಾಶ್ ಶೆಟ್ಟಿಗಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಾಟ್ಯಾಲಯದ ಸಂಸ್ಥಾಪಕರಾದ ನೃತ್ಯಗುರು ವಿದ್ವಾನ್ ಕೆ ಭವಾನಿಶಂಕರ್ ರವರು ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದರೊಂದಿಗೆ ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ ಎಂಬ ಶೀರ್ಷಿಕೆಯೊಂದಿಗೆ 25 ನೃತ್ಯ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಯೋಚನೆಗಳೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.




ನಾಟ್ಯಾಲಯದ ಬಾಲ ಕಲಾವಿದರಾದ ಕ್ಷಿತಿ ಬಿ. ಪೂಜಾರಿ ಹಾಗೂ ಸೃಷ್ಟಿ ಅರುಣ್ ಜೆ., ಹನಿಷ್ಕ ಎನ್. ರಾವ್ ಹಾಗೂ ನಿವೇದಿತಾ ಕೆ. ಪೂಜಾರಿ, ಕಾಯಿರಾ ಸಚಿನ್ ಸುವರ್ಣ ಹಾಗೂ ವೈಷ್ಣವಿ ಇವರಿಂದ ಭರತನಾಟ್ಯ ಪ್ರಸ್ತುತಿ ನೆರವೇರಿತು. ಗಂಭೀರ ನಾಟ ರಾಗದ ಪುಷ್ಪಾಂಜಲಿಯಿಂದ ಆರಂಭಗೊಂಡು ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು, ಹಿಮ್ಮೇಳ ಕಲಾವಿದರಾಗಿ ನೆರೆ ರಾಜ್ಯ ಕೇರಳದ ಪ್ರಸಿದ್ಧ ಕಲಾವಿದರಾದ : ಶ್ರೀ ವಿನೀತ್ ಪುರವನ್ಕರ್ ಹಾಡುಗಾರಿಕೆಯಲ್ಲಿ, ಶ್ರೀ ಗಿತೇಶ್ ಗೋಪಾಲಕೃಷ್ಣ ನಿಲೇಶ್ವರ ಮೃದಂಗ ವಾದನದಲ್ಲಿ, ಶ್ರೀ ರಾಹುಲ್ ಸಿ. ರಾಮ್ ಕೊಳಲು ವಾದನದಲ್ಲಿ ಸಹಕರಿಸಿದರು. ಶ್ರೀ ಶಶಾಂಕ್ ರಾಜ್ ರವರು ಧನ್ಯವಾದ ನೀಡಿದರು. ಯೋಗೀಶ್ ಕೊಳಲಗಿರಿ ನಿರೂಪಿಸಿದರು.



