ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ‘ಪುಸ್ತಕ ಪ್ರೀತಿ’ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ಪ್ರಥಮ ಬಿ. ಕಾಂ. ವಿದ್ಯಾರ್ಥಿನಿ ಧನ್ಯಾ ಎ.ಎಸ್. ಇವರು 1997ರಲ್ಲಿ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಪ್ರಕಟಿಸಿದ, ಖ್ಯಾತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ವಿರಚಿತ ‘ಬದುಕಲು ಬೇಕು ಬದುಕುವ ಈ ಮಾತು’ ಎಂಬ ಪುಸ್ತಕವನ್ನು ಪರಿಚಯಿಸಿದರು. 75 ಲೇಖನಗಳ ಈ ಪುಸ್ತಕದಲ್ಲಿ ಲೇಖಕರ ಉದಾತ್ತ ಚಿಂತನೆ, ಅನುಭವ, ಆಳವಾದ ಆಲೋಚನೆಗಳು ಅವರ ನೆನಪಿನ ಅಂಕುರಗಳಾಗಿ ಮೂಡಿ ನಿಂತಿವೆ ಎಂದರು.
ಬದುಕು ಪೂರ್ಣ ಸಿಹಿಯೂ ಅಲ್ಲ; ಪೂರ್ಣ ಕಹಿಯೂ ಅಲ್ಲ. ಅವುಗಳ ವಿವಿಧ ಪ್ರಮಾಣದ ಪಾಕ. ಕಹಿಯನ್ನು ಸಹಿಸುವ ಶಕ್ತಿ ಗಳಿಸಿದಂತೆ, ಜೀವನ ಮತ್ತಷ್ಟು ಬಲಗೊಳ್ಳುತ್ತದೆ. ಕಹಿಯ ಅನುಭವದಿಂದ ಸಿಹಿಗೆ ಮತ್ತಷ್ಟು ಕಳೆಯಿದೆ. ಕಹಿಯನ್ನು ಸಿಹಿಯನ್ನಾಗಿಸಿ ಸಮನಾಗಿ ಸ್ವೀಕರಿಸುವ ಜಾಣ್ಮೆಯೇ ಈ ಬದುಕು. ಮಿತ್ರರೇ, ಬದುಕು ಎಂದರೇನು? ವಿವರಿಸುವುದು ಕಷ್ಟ. ಪ್ರಶ್ನೆ ಒಂದು, ಉತ್ತರಗಳು ಹಲವು! ಸುತ್ತಲಿನ ಪರಿಸ್ಥಿತಿಗಳು ನಿನ್ನನ್ನು ತುಳಿಯಬೇಕೆಂದು ಕಾತುರದಿಂದ ಕಾಯ್ದುಕೊಂಡು ನಿಂತಾಗ ಅದನ್ನು ಮೀರಿ ಎದುರಿಸಿ ನಿಲ್ಲೋ ತಾಕತ್ತನ್ನು ತೋರಿಸುತ್ತೀಯಾ ಅಲ್ಲ ಅದು ಬದುಕು..!
ಹೌದು ಮಿತ್ರರೇ, ಬದುಕು ಒಂದು ಪಾರಿವಾಳದಂತೆ, ಅದು ನಮ್ಮ ಕೈಯಲ್ಲಿರುವ ಹಕ್ಕಿ, ಅದನ್ನೇ ನಾವು ಬಲವಾಗಿ ಅಮುಕಿದರೆ, ಜೋರಾಗಿ ಒತ್ತಿದರೆ, ಅದು ಸತ್ತೇ ಹೋಗುತ್ತದೆ ಮತ್ತೇ ಅದು ಕೈಗೆ ಬರುವುದೇ ಇಲ್ಲ. ಜೀವನವು ಒಂದು ಅಸಿಧಾರಾವೃತ ಎನ್ನುವುದುಂಟು. ಹರಿತವಾದ ಖಡ್ಗದ ಅಲಗು ಅಸಿಧಾರಾ. ಅದರ ಮೇಲೆ ಹೆಜ್ಜೆ ಹಾಕಿಯೂ ಕಾಲು ಕತ್ತರಿಸಿಕೊಳ್ಳದೇ, ಗಾಯಮಾಡಿಕೊಳ್ಳದೇ ನಡೆದು ಹೋಗುವ ರೀತಿ ಜೀವನದ ಕಲೆ. ಇದು ಒಂದು ಚಮತ್ಕಾರಿಕವಾದ ಪಾತ್ರವೂ ಹೌದು! ಬಲತ್ಕಾರ ಮಾಡಿದರೆ, ಬಲಪ್ರಯೋಗ ನಡೆಸಿದರೆ, ಹಕ್ಕಿ ಸಾಯುತ್ತದೆ. ಹಾಗೆಂದು ಸ್ವೇಚ್ಛಾಚಾರದ ಪ್ರಯೋಗವೂ ಸಲ್ಲದು, ಕತ್ತಿಯ ಅಲುಗಿನ ಮೇಲೆ ನಡೆಯಬೇಕಾದಾಗ ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ. ಬಲಹಾಕಿ ಹೆಜ್ಜೆ ಇಟ್ಟರೆ ಪಾದಕ್ಕೆ ಕತ್ತಿಯ ಬಾಯಿ ತಾಗಿ ರಕ್ತ ಸೋರಿತು ಕಾಲೇ ಹಾಕದಿದ್ದರೆ ಜೀವನದ ಆಹ್ವಾನವನ್ನು ನಾವು ತಿರಸ್ಕರಿಸಿದಂತಾಗುತ್ತದೆ. ನಾವು ಬಂದ ಸವಾಲುಗಳನ್ನು ಸ್ವೀಕರಿಸದ ಹೇಡಿಗಳೆನಿಸುತ್ತೇವೆ. ಕೆಲವೊಮ್ಮೆ ಬದುಕು ಕಷ್ಟವೆನಿಸುವುದು ಸಹಜ. ಆದರೆ ಅದನ್ನು ಮೀರಿ ಎದುರಿಸಿ ನಿಂತರೆ ಯಶಸ್ಸು ಪ್ರಾಪ್ತವಾಗುತ್ತದೆ. ನಾವು ಸುಧಾರಿಸುವುದು ನಮ್ಮ ಕೈಯಲ್ಲಿ ಇದೆ. ಒಳ್ಳೆಯ ಕೆಲಸದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಾ ಸಮಯವನ್ನು ಫಲಪ್ರದಗೊಳಿಸಿಕೊಳ್ಳಬೇಕು. ನಾವು ಚಾರಿತ್ರ್ಯವನ್ನು ಕಳೆದುಕೊಳ್ಳಬಾರದು. ಅಂದರೆ ಮನುಷ್ಯನಲ್ಲಿರುವ ವಾಸ್ತವವೇ ಅವನ ಚಾರಿತ್ರ್ಯ. ಒಂದು ವ್ಯಕ್ತಿಯ ಗುಣ ಧರ್ಮಗಳು ಅವನ ಚಾರಿತ್ರ್ಯವನ್ನು ನಿರ್ಮಿಸಿರುತ್ತವೆ. ಮನುಷ್ಯ ಗಳಿಸಿದ ಆಸ್ತಿ ಕಳೆದು ಹೋಗಬಹುದು. ಆದರೆ ತನ್ನ ಚಾರಿತ್ರ್ಯಯದಿಂದ ಪಡೆದ ಒಳ್ಳೆಯ ಹೆಸರು ಮಾತ್ರ ಎಂದೂ ಕಳೆದು ಹೋಗಲಾರದು. ಧರ್ಮವೆಂದರೆ ಅದೊಂದು ಅಖಂಡವಾದ ಪ್ರೀತಿ. ‘ಧರ್ಮೋ ರಕ್ಷತಿ ರಕ್ಷಿತ:’ ಅಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ನಿಜವಾದ ಧರ್ಮ ಮನಸ್ಸಿಗೆ ಪ್ರಸನ್ನತೆಯನ್ನು ತಂದುಕೊಡುತ್ತದೆ. ಒಂದು ಸಣ್ಣ ಇರುವೆಯೂ ಕೂಡ ನಮಗೆ ಜೀವನದ ಪಾಠ ಕಲಿಸಬಲ್ಲುದು. ಪ್ರಯತ್ನದಿಂದ ಇರುವೆ ಕೂಡ ತನಗಿಂತ ಗಾತ್ರದಲ್ಲಿ ದೊಡ್ಡದಾದ ಧಾನ್ಯದ ಕಾಳನ್ನು ಎತ್ತೋಯ್ಯುತ್ತದೆ. ಮನುಷ್ಯನಿಗೆ ತನ್ನ ಜೀವನದಲ್ಲಿ ಒಂದು ಉದ್ದೇಶ ಇರಬೇಕು. ಆ ಉದ್ದೇಶವನ್ನು ಸಾಧಿಸುವ ಛಲ ಇರಬೇಕು. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಾಧಿಸಬೇಕಾದ ಗುರಿಗಳು ಎರಡೇ, ಒಂದು ತನ್ನನ್ನು ಸುಧಾರಿಸಿಕೊಳ್ಳುತ್ತಾ, ದಿನದಿನವೂ ತನ್ನಲ್ಲಿ ಹೊಸತನವನ್ನು ತಂದುಕೊಳ್ಳಬೇಕು. ಇನ್ನೊಬ್ಬರ ಜೀವನದಲ್ಲಿ ಸುಖವನ್ನು ತರುವ ಪ್ರಯತ್ನವನ್ನು ಮಾಡಬೇಕು. ಸಹನೆ ಇದ್ದವನಿಗೆ ಎಲ್ಲವೂ ಸಾಧ್ಯವಿದೆ. ಸಮಯ ಮತ್ತು ಸಹನೆ ಬಹಳಷ್ಟನ್ನು ಗೆಲ್ಲುತ್ತವೆಯೆನ್ನುವುದು ಸತ್ಯ. ಜೀವನದಲ್ಲಿ ಮನುಷ್ಯನು ಸಂಪಾದಿಸಿದ ಎಲ್ಲಾ ಯಶಸ್ಸು ಸಹನೆಯಲ್ಲಿಯೇ ಇದೆ. ಸಹನೆಯಲ್ಲಿ ಧೈರ್ಯ, ಸಾಮರ್ಥ್ಯ, ನಿರಂತರತೆ ಇದೆ.
ಪುಸ್ತಕಗಳು ಬದುಕುವುದನ್ನು ನಮಗೆ ಹೇಳಿಕೊಡುತ್ತದೆ. ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ನಮಗೆ ಯಾವ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ. ಮನುಷ್ಯನ ಚಾರಿತ್ರ್ಯವು ಅವನು ಯಾರೊಂದಿಗೆ ಇರುವನೋ ಅವರೊಂದಿಗೆ ನಿರ್ಮಾಣವಾಗುವಂತೆ, ಅವನು ಓದುವ ಪುಸ್ತಕದಿಂದಲೂ ನಿರ್ಮಾಣವಾಗುತ್ತದೆ.
ಇಂದಿನ ಮನುಷ್ಯ ನಗುವುದನ್ನೇ ಮರೆತುಬಿಟ್ಟಿದ್ದಾನೆ. ನಗು ನಗುತ್ತಾ ಬಾಳಿದರೆ ಎಲ್ಲವೂ ಸುಸೂತ್ರ. ಕೆಲವೊಮ್ಮೆ ಸಮಯವು ನಮಗೆ ನಗುವುದನ್ನು ಮರೆಸಿಬಿಡುತ್ತದೆ. ಇಲ್ಲವೇ ನಗುವೇ ಸಮಯವನ್ನು ಮರೆಸಿಬಿಡುತ್ತದೆ. ನಮ್ಮ ಒಂದು ಮುಗುಳುನಗೆ ನಮ್ಮ ಗೆಲುವಿಗೆ ಕಾರಣವಾಗಬಹುದು. ಅದೆಷ್ಟು ಬಾರಿ ನಗು ನೋವನ್ನೆಲ್ಲ ಮರೆಮಾಚುತ್ತದೆ. ಜೀವನದ ನಿಜವಾದ ಶ್ರೀಮಂತಿಕೆಯೆಂದರೆ, ಆಸೆ, ಆನಂದಗಳೇ. ನಿರಾಸೆ, ಖನ್ನತೆಗಳೇ ಬಡತನ. ಮನಸ್ಸಿನ ಆಹ್ಲಾದಕತೆಯು ಸುತ್ತಲೂ ಆಹ್ಲಾದಕತೆಯನ್ನು ತರುತ್ತದೆ. ಜೀವನವೆಂದರೆ ಏನೆನ್ನುವುದು ತಿಳಿಯುವ ಹೊತ್ತಿಗೆ ಅದು ಮುಗಿದು ಹೋಗಿರುತ್ತದೆ. ಜೀವನವನ್ನು ಬದುಕಬೇಕೆನ್ನುವ ಆಸೆಯಲ್ಲಿಯೇ ಅವರು ತಮ್ಮ ಜೀವನವನ್ನು ಕಳೆದಿರುತ್ತಾರೆ. ಮನುಷ್ಯ ತನ್ನ ಅನಿಸಿಕೆಗಳಿಗೆ ತಕ್ಕಂತೆ ಯಾರಿಗೂ ಅನ್ಯಾಯ ಬಗೆಯದೆ, ಸಂತೋಷದಿಂದ ಇರುವ ವಾತಾವರಣವನ್ನು ನಿರ್ಮಿಸುವುದೇ ಜೀವನದ ನಿಜವಾದ ಅರ್ಥ. ಮನುಷ್ಯನ ಚೈತನ್ಯವೇ ನಿಜವಾದ ಜೀವನ. ಹುಟ್ಟುಸಾವಿನ ನಡುವಿನ ಈ ಮೂರು ದಿನದ ಬಾಳ ಪ್ರಯಾಣದಲ್ಲಿ ನಮ್ಮ ಬದುಕು ತಪ್ಪಾಗದಂತೆ ನೋಡಿಕೊಳ್ಳಬೇಕು. ಬರೆದ ಅಕ್ಷರ ತಪ್ಪಾದರೆ ತಿದ್ದಬಹುದೇ ವಿನ: ಬದುಕು ತಪ್ಪಾದರೆ ತಿದ್ದುವುದು ಬಲುಕಷ್ಟ. ಪ್ರತಿಯೊಬ್ಬರೂ ಸಾರ್ಥಕತೆಯ ಜೀವನವನ್ನು ನಡೆಸಬೇಕು ಎಂದು ಡಾ. ಪಾಟೀಲ ಪುಟ್ಟಪ್ಪನವರು ‘ಬದುಕಲು ಬೇಕು ಬದುಕುವ ಈ ಮಾತು’ ಎಂಬ ಪುಸ್ತಕದಲ್ಲಿ ತುಂಬಾ ಸರಳವಾಗಿ ಮನುಷ್ಯನು ಹೇಗೆ ಬದುಕಬೇಕೆಂದು ವಿವರಿಸಿದ್ದಾರೆ.
ಬದುಕಿನ ವಿವಿಧ ಹಂತಗಳಲ್ಲಿ ನಾವು ವ್ಯವಹರಿಸಬೇಕಾದ ರೀತಿಯನ್ನು ಲೇಖಕರು ಸೊಗಸಾಗಿ ನಿರೂಪಿಸಿದ್ದಾರೆ. ಪುಸ್ತಕದ ಓದು ಕಡಿಮೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪುಸ್ತಕ ಓದಿನ ಮಹತ್ವವನ್ನು ಸೊಗಸಾಗಿ ನಿರೂಪಿಸಿರುವುದು ನಮಗೆಲ್ಲಾ ಮಾರ್ಗದರ್ಶಿಯಾಗಿದೆ. ಈ ಎಲ್ಲಾ ಕಾರಣಗಳಿಂದ ‘ಬದುಕಲು ಬೇಕು ಬದುಕುವ ಈ ಮಾತು’ ಎಲ್ಲರೂ ಓದಬೇಕಾದ ಕೃತಿಯಾಗಿದೆ.
ಧನ್ಯಾ ಎ.ಎಸ್.
ಪ್ರಥಮ ಬಿ.ಕಾಂ.
ಗೋವಿಂದ ದಾಸ ಕಾಲೇಜು ಸುರತ್ಕಲ್