ಡಾ. ಭೈರಪ್ಪ ಇವರ ‘ಪರ್ವ’ ಹಾಗೂ ‘ಉತ್ತರಕಾಂಡ’ ಕಾದಂಬರಿಗಳ ನೂತನ ಆಯಾಮಗಳ ಶೋಧ
ಪ್ರೊ. ಎಸ್. ಎಲ್. ಭೈರಪ್ಪ ಅವರದು ಕನ್ನಡ ಸಾಹಿತ್ಯ ಪ್ರಪಂಚದಲ್ಲಿಯೇ ಒಂದು ಅಪೂರ್ವ ವ್ಯಕ್ತಿತ್ವ. ಪ್ರಥಮ ದರ್ಜೆಯ ಸೃಜನಶೀಲ ಲೇಖಕರಾಗಿ ಸೈ ಎನಿಸಿಕೊಂಡಿರುವ ಅವರು ಭಾರತೀಯ ಸಾಹಿತ್ಯ ನಿರ್ಮಾಪಕರಲ್ಲಿ ಒಬ್ಬರು.
ಭೈರಪ್ಪ ಅವರು ಭಾಷೆಗಳ ಗಡಿ ಗೆದ್ದ ವಿರಳ ಭಾರತೀಯ ಲೇಖಕ.ತಮ್ಮ ಮಾತು ಕೃತಿಗಳ ಮೂಲಕ ಅವರು ಜಗದಗಲ ಜನಪ್ರಿಯರಾಗಿರುವುದು ಕನ್ನಡದ ಭಾಗ್ಯ.ಡಾ.ಭೈರಪ್ಪ ಅವರು ಕನ್ನಡದ, ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ ಅಪರೂಪದ ಸೋಜಿಗದ ಸಾಧಕ.ಅವರು ನಮ್ಮ ರಾಷ್ಟ್ರದ ಒಬ್ಬ ಘಟಾನುಘಟಿ ಚಿಂತಕರೂ ಹೌದು.
ರಾಮಾಯಣ ಹಾಗೂ ಮಹಾಭಾರತ ಇವೆರಡು ಭಾರತೀಯರ ಭಾವಕೋಶದಲ್ಲಿ ಸೇರಿ ಹೋಗಿರುವ ಉತ್ಕ್ರಷ್ಟ ಮಹಾ ಕಾವ್ಯಗಳು. ವ್ಯಾಸ ಮುನಿ ವಿರಚಿತ ಮಹಾಭಾರತವನ್ನು ಇಪ್ಪತ್ತನೆಯ ಶತಮಾನದಲ್ಲಿ ನವನವೀನ ರೀತಿಯಲ್ಲಿ ಎರಕ ಹೊಯ್ದು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದವರು ಎಸ್. ಎಲ್. ಭೈರಪ್ಪ. ಅವರ ‘ಪರ್ವ’ ಒಂದು ಅಭಿಜಾತ ಕಾದಂಬರಿ. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬೆಳಕು ಕಂಡ ಶ್ರೇಷ್ಠ ಕಾದಂಬರಿಗಳನ್ನು ಪಟ್ಟಿ ಮಾಡುವಾಗ ‘ಪರ್ವ’ ಮೊದಲ ಸ್ಥಾನದಲ್ಲಿ ನಿಲ್ಲುವ ಕೃತಿ. ಈ ಕೃತಿ ಇತ್ತೀಚಿಗೆ ಚೀನಿ ಹಾಗೂ ರಷ್ಯನ್ ಭಾಷೆಗಳಿಗೂ ಅನುವಾದಗೊಂಡಿರುವುದು ಅವಲೋಕನೀಯವಾಗಿದೆ.
ವಾಲ್ಮೀಕಿ ರಾಮಾಯಣ ನಮ್ಮ ದೇಶದ ಆದಿ ಕಾವ್ಯ ಎಂದೇ ಜನಮಾನ್ಯವಾದ ಮಹಾಕೃತಿ. ರಾಮಾಯಣ ರಚನೆಯಾಗಿ ಎಷ್ಟೋ ಶತಮಾನಗಳ ಬಳಿಕ ಇಪ್ಪತ್ತೊಂದನೆಯ ಶತಮಾನದಲ್ಲಿ ಭೈರಪ್ಪ ಅವರು ಅದನ್ನು ಪುನರ್ ಸೃಷ್ಟಿಸಿ ‘ಉತ್ತರಕಾಂಡ’ ಎಂದು ನಾಮಕರಣ ಮಾಡಿದ್ದಾರೆ.
ಭೈರಪ್ಪ ಅವರ ‘ಪರ್ವ’ ಹಾಗೂ ‘ಉತ್ತರಕಾಂಡ’ ಕಾದಂಬರಿಗಳ ನಾನಾ ಆಯಾಮಗಳನ್ನು ಅಧ್ಯಯನ ಮಾಡಿ ಬಹು ಮಹತ್ವದ ಉದ್ಗ್ರಂಥವನ್ನು ರಚಿಸಿದ ಹೆಗ್ಗಳಿಕೆ ಡಾ. ಉಮಾ ರಾಮರಾವ್ ಅವರದು. ಡಾ. ಭೈರಪ್ಪ ಅವರ ಈ ಉಭಯ ಕಾದಂಬರಿಗಳ ತುಲನಾತ್ಮಕ ವಿಶ್ಲೇಷಣೆಯ ಜತೆ ಜತೆಗೆ ಅವುಗಳ ಅಳ, ಅಗಲ, ವೈಭವ, ಆಶಯ, ಆಕೃತಿ, ರಸಸ್ಥಾನಗಳನ್ನು ಸಾಕ್ಷಾತ್ಕರಿಸಿ ಕೊಳ್ಳುವ ಘನ ಪ್ರಯತ್ನವಿಲ್ಲಿ ಚೆನ್ನಾಗಿ ನೆರವೇರಿದೆ.
ಭಾರತೀಯ ಸಾಹಿತ್ಯದ ಜೀವಾಳವಾಗಿರುವ ರಾಮಾಯಣ ಮತ್ತು ಮಹಾಭಾರತಗಳನ್ನು ಆಧರಿಸಿ ರಚಿತವಾಗಿರುವ ಆದರೆ ಮೂಲಕ್ಕಿಂತಲೂ ಬಹಳ ಭಿನ್ನವಾಗಿರುವ ಹೊಸ ರೂಪವನ್ನು ಧರಿಸಿ ನಿಂತಿರುವ ಉತ್ತರಕಾಂಡ ಮತ್ತು ಪರ್ವ ಇವುಗಳ ಅಧ್ಯಯನ ನಿಜವಾಗಲೂ ಒಂದು ಮಹಾನ್ ಸಾಹಸವೇ ಸರಿ.ಇದೊಂದು ರೀತಿಯಲ್ಲಿ ಬೆಟ್ಟಗಳನ್ನು ತೂಗುವ ಕೆಲಸ.ಇದನ್ನು ಅತ್ಯಂತ ಯಶಸ್ವಿಯಾಗಿ ಇಲ್ಲಿ ನಿಭಾಯಿಸಿರುವುದು ಮೆಚ್ಚುವಂತಹದು. ಸಾಂದ್ರ ಆಲೋಚನೆಯ, ವಿಮರ್ಶೆಯ ಒಂದು ಅತ್ಯುತ್ತಮ ಮಹಾಪ್ರಬಂಧ ಇದಾಗಿದೆ.
‘ಪರ್ವ’ವನ್ನು ಬರೆದ ನಾಲ್ಕು ದಶಕಗಳ ಸಾಹಿತ್ಯಿಕ ಪ್ರಯಾಣದಲ್ಲಿ ಭೈರಪ್ಪ ಅವರು ಅರಗಿಸಿಕೊಂಡಿದ್ದ ವಿಚಾರಗಳು, ತತ್ವಗಳು ಕಲ್ಪನೆಗಳು ಸುಪ್ತವಾಗಿ ಅವರ ಮನಸಿನಲ್ಲಿ ಹುದುಗಿದ್ದು ಅದು ಉತ್ತರ ಕಾಂಡ ರಚನೆಯಲ್ಲಿ ಹೇಗೆಲ್ಲ ವಿಕಸಿತಗೊಂಡಿದೆ ಎಂಬುದನ್ನು ಸಾಧಾರವಾಗಿ ವಿಶ್ಲೇಷಿಸಿರುವುದು ಈ ಕೃತಿಯ ಬಲ್ಮೆ.ಈ ಎರಡೂ ಕಾದಂಬರಿಗಳು ಉತ್ತಮ ಕಲಾಕೃತಿಗಳಾಗಿ ಕಾಲದ ಪರೀಕ್ಷೆಯಲ್ಲಿ ಗೆದ್ದಿರುವ ಬಗೆಯನ್ನು ಇಲ್ಲಿ ಲೋಕಮುಖಕ್ಕೆ ತೋರಿಸಿಕೊಡಲಾಗಿದೆ.
‘ಉತ್ತರಕಾಂಡ’ ಹಾಗೂ ‘ಪರ್ವ’ ಕಾದಂಬರಿಗಳನ್ನು ಮೂಲ ಆಕರಗಳಾದ ‘ರಾಮಾಯಣ’ ಮತ್ತು ‘ಮಹಾಭಾರತ’ಗಳೊಡನೆ ತುಲನೆ ಮಾಡುತ್ತಲೇ ಅಲ್ಲಿನ ಕಥನತಂತ್ರ, ಶೈಲಿ, ಪಾತ್ರಚಿತ್ರಣ, ಸನ್ನಿವೇಶ ನಿರ್ಮಾಣ, ಅಲ್ಲಿನ ಸಾಮ್ಯ ವೈಷಮ್ಯಗಳನ್ನು ಬಹುಶಿಸ್ತುಗಳ ಹಿನ್ನೆಲೆಯಲ್ಲಿ ಬೆಳಕಿಗೆ ಹಿಡಿದಿರುವುದು ಈ ಕೃತಿಯ ಹೆಚ್ಚುಗಾರಿಕೆ. ಅನೇಕ ಹೊಸ ಹೊಸ ಚಿಂತನೆ ಒಳನೋಟಗಳಿಂದ ಕೂಡಿರುವ ಈ ಕೃತಿಯ ಓದು ಸಹ ಆಪ್ಯಾಯಮಾನವೆನಿಸುತ್ತದೆ.
‘”ಪರ್ವ’ವನ್ನು ಬರೆದ ನಲ್ವತ್ತು ವರ್ಷಗಳ ನಂತರದಲ್ಲಿ ಭೈರಪ್ಪನವರು ‘ಉತ್ತರಕಾಂಡ’ವನ್ನು ಬರೆದಿದ್ದಾರೆ. ಇದೊಂದು ಸುದೀರ್ಘವಾದ ಅವಧಿ. ಮೇಧಾವಿಯೂ, ಸೂಕ್ಷ್ಮಸಂವೇದಿಯೂ, ತೆರೆದ ಮನಸ್ಸುಳ್ಳವನೂ ಆದ ವ್ಯಕ್ತಿಯು ಅಧ್ಯಯನಶೀಲನೂ ಆದರೆ ಆತನ ಬುದ್ದಿ ಮನಸ್ಸುಗಳು ಸಂಪೂರ್ಣವಾಗಿ ಮಾಗುವುದಕ್ಕೆ ಸಹಕಾರಿಯಾಗುವಂತಹ ಅವಧಿಯಿದು. ಸಾಹಿತಿಯಾಗಿ ಸೃಜನಶೀಲತೆಯೇ ಭೈರಪ್ಪನವರ ಮೂಲ ಅಸ್ಮಿತೆಯೆನ್ನುವುದು ಸತ್ಯ, ಜೊತೆಗೇ ಅವರ ಅಧ್ಯಯನ ಜೀವನಾನುಭವಗಳು ಅವರಿಗೆ ದೊರಕಿಸಿಕೊಟ್ಟಿರುವ ತತ್ತ್ವಶಾಸ್ತ್ರಜ್ಞನ ಅಸ್ಮಿತೆಯನ್ನು ಹೊರತುಪಡಿಸಿ ಅದರ ವ್ಯಕ್ತಿತ್ವವಿಲ್ಲ ಎನ್ನುವುದೂ ಅಷ್ಟೇ ಸತ್ಯ. ಸೀತೆಯ ಕಥೆಯಾಗಿರುವ ‘ಉತ್ತರಕಾಂಡ’ದಲ್ಲಿ ಸೀತೆಯ ವ್ಯಕ್ತಿತ್ವವು ಮಾಗುವುದನ್ನು ಭಾರತೀಯದರ್ಶನದ ಹಿನ್ನೆಲೆಯಲ್ಲಿ ಚಿತ್ರಿಸಿಯೂ ಕಾದಂಬರಿಯು ಶುಷ್ಕ ಸಿದ್ಧಾಂತದ ನೀರಸ ವರದಿಯಾಗದೇ ಕಲಾತ್ಮಕವಾಗಿ ವಿಜೃಂಭಿಸುವಂತೆ ಮಾಡಿರುವುದೇ ಭೈರಪ್ಪನವರು ಇಲ್ಲಿ ಸಾಧಿಸಿರುವ ಸಾಹಿತ್ಯಿಕ ಯಶಸ್ಸು ” ಎಂಬುದನ್ನು ಮುನ್ನೆಲೆಗೆ ತಂದು ಚರ್ಚಿಸಿರುವುದು ಔಚಿತ್ಯಪೂರ್ಣ ಉಪಕ್ರಮ.
‘ಉತ್ತರಕಾಂಡ’ವೂ ‘ವಾಲ್ಮೀಕಿರಾಮಾಯಣ’ದ ಪುನರ್ಸೃಷ್ಟಿಯೇ. ಪಿತೃವಾಕ್ಯ ಪರಿಪಾಲಕನಾದ ಧೀರೋದಾತ್ತ ರಾಮನು ರಾವಣನನ್ನು ಕೊಂದು ತನ್ನ ಮಡದಿಯೊಡನೆ ವನವಾಸವನ್ನು ಮುಗಿಸಿ ಪಟ್ಟಾಭಿಷಿಕ್ತನಾಗಿ ನಂತರ ಪ್ರಜಾಸಮ್ಮತಿಯನ್ನು ಗಳಿಸಲು ತನ್ನ ಪರಮಪ್ರೀತಿಯ ಪತ್ನಿಯಿಂದ ಎರಡನೆಯ ಬಾರಿಗೆ ದೂರಾಗುವ ಕಥೆಯೇ. ಆದರೆ ಪತಿಯಿಂದ ಪರಿತ್ಯಕ್ತಳಾಗಿ, ಬಸುರಿನ ಭಾರದಿಂದ ಬಳಲಿ, ಅವಳಿಗಳನ್ನು ಹೆತ್ತು, ಏಕಪೋಷಕಳಾಗಿ ಅವರನ್ನು ಬೆಳೆಸುವ ಸೀತೆಯ ಒಳಗುದಿ ಎಷ್ಟು ತೀವ್ರವಾದುದೆನ್ನುವುದನ್ನು ಅತಿ ಹೃದ್ಯವಾಗಿ ಅಭಿವ್ಯಕ್ತಿಸುವ ಕಥೆ. ಸೀತಾರಾಮನು ಹಂತಹಂತವಾಗಿ ಮಾರ್ಪಾಡಾಗುತ್ತಾ ರಾಜಾರಾಮನಾಗಿಬಿಡುವ ಸೀತೆಯ ಜೀವನದ ದುರಂತವನ್ನು ಅವಳದೇ ಮಾತುಗಳಲ್ಲಿ ಬಿಚ್ಚಿರಿಸುವ ಕಥೆ. ಅತಿಮಾನುಷತೆಯ ಆವರಣವು ಇಲ್ಲಿಯೂ ಭೇದಿತವಾಗಿದೆ. ನೈಜತೆ ಮತ್ತು ಸಂಭಾವ್ಯತೆಗಳ ಎರಡು ಗಟ್ಟಿಯಾದ ದಡಗಳ ನಡುವೆಯೇ ಉತ್ತರಕಾಂಡದ ಕಥಾವಾಹಿನಿಯು ಪ್ರವಹಿಸುತ್ತದೆ. ಮಿಥಕಗಳನ್ನು ಪವಾಡಗಳನ್ನು ನಿವಾರಿಸಿಕೊಂಡು ಅವು ಪ್ರತೀಕಗಳು ಎನ್ನುವ ನೆಲೆಯಲ್ಲಿ ಜೀವನದ ಅನ್ವೇಷಣೆಯಲ್ಲಿ ತೊಡಗುವ ಭೈರಪ್ಪ ಅವರ ಕೃತಿಗಳ ಗುಣಾತಿಶಯಗಳನ್ನು ಇಲ್ಲಿ ಗುರುತಿಸಿ ವಿವೇಚಿಸಿರುವುದು ಸಮೀಚೀನವಾಗಿದೆ.
‘ಪರ್ವ’ ಮತ್ತು ‘ಉತ್ತರಕಾಂಡ’ ಕಲಾ ಕೃತಿಗಳ ಆಶಯವನ್ನು ವಿಶ್ಲೇಷಿಸುವುದರ ಜೊತೆಗೆ ಅವೆರಡಕ್ಕೂ ಆಧಾರವಾಗಿರುವ
ಮಹಾಭಾರತ ಮತ್ತು ರಾಮಾಯಣಗಳ ಆಶಯದತ್ತಲೂ ಸೂಕ್ಷ್ಮವಾಗಿ ಗಮನಹರಿಸಿರುವುದು ಈ ಮಹಾಪ್ರಬಂಧದ ಧನಾತ್ಮಕ ಅಂಶ. ಆದಿಕವಿ ವಾಲ್ಮೀಕಿಗಳಾಗಲೀ, ಮಹಾಕವಿ ವ್ಯಾಸರಾಗಲೀ ತಮ್ಮ ಕೃತಿಗಳ ಮುಖಾಂತರವಾಗಿ ಏನನ್ನು
ಸಂವಹಿಸಬಯಸಿದ್ದರೆನ್ನುವುದನ್ನು ಎತ್ತಿ ಹೇಳುತ್ತಲೇ ಆ ತಿಳಿವಳಿಕೆಯ ಬೆಳಕಿನಲ್ಲಿ ‘ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳ ಆಶಯವನ್ನು ವಿಸ್ತಾರವಾಗಿ ಮನಗಾಣಿಸಿರುವುದು ಮೆಚ್ಚತಕ್ಕ ಸಂಗತಿ.
ಮಹಾಭಾರತವನ್ನು ಓದಿದ ನಂತರ ಜೀವನಧರ್ಮದ ದರ್ಶನವು ಸಾಮಾನ್ಯರಿಗೆ ಅಷ್ಟಾಗಿ ಉಂಟಾಗದೇ ಹೋದರೂ ಎಲ್ಲರನ್ನೂ ಒಂದು ನಿರ್ವೇದವಂತೂ ಆವರಿಸಿಕೊಳ್ಳುತ್ತದೆ. ‘ಪರ್ವ’ದಲ್ಲಿ ಈ ನಿರ್ವೇದವು ಮತ್ತೂ ಗಾಢವಾಗಿ ತೋರಿಕೊಳ್ಳುತ್ತದೆ. ಡಿವಿಜಿಯವರು ಹೇಳುವ ಮೂರು ಪ್ರಯೋಜನಗಳಲ್ಲಿ ‘ಪರ್ವ’ವು
ಕಾವ್ಯಾನಂದವನ್ನುಂಟುಮಾಡುವುದು, ಅದನ್ನು ಓದಿದ ಸಹೃದಯರೆಲ್ಲರ ಅನುಭವಕ್ಕೆ ಬಂದಿರುವಂತಹದು. ಇನ್ನು
‘ಪರ್ವ’ದಂತೆ ಮಾನವಸ್ವಭಾವ ಪರಿಚಯವನ್ನು ಮಾಡಿಕೊಡುವುದು ಬೆರಳೆಣಿಕೆಯ ಕೆಲವು ಬರವಣಿಗೆಗಳಿಗಷ್ಟೇ
ಸಾಧ್ಯವಾಗಿರುವ ಸಾಫಲ್ಯ. ‘ಪರ್ವ’ದ ನಿರ್ವೇದವು ಹುಟ್ಟುವುದು ಕೇವಲ ಯುದ್ಧದಲ್ಲಿ ಉಂಟಾದ ಅಪಾರವಾದ
ಪ್ರಾಣಹಾನಿಯಿಂದ ಮತ್ತು ಗೆದ್ದವರು ಸೋತವರಿಬ್ಬರ ವಂಶಗಳೂ ಚಿಗುರುಗಳನ್ನು ಮುರುಟಿಸಿಕೊಂಡು
ನಿರ್ವಂಶವಾಗಿಬಿಟ್ಟಿರುವ ದುರಂತಗಳಿಂದಷ್ಟೇ ಅಲ್ಲ; ಅದು ಹುಟ್ಟುವುದು ವ್ಯಾಸರು ತೋರಿಸದೇ ಬಿಟ್ಟಿರುವ ಯುದ್ಧದ
ಇನ್ನೊಂದು ಕ್ರೂರಮುಖವನ್ನು ಭೈರಪ್ಪನವರು ಓದುಗರಿಗೆ ತೋರಿಸಿರುವುದರಿಂದ. ಸತ್ತವರಲ್ಲಿ ಕೊನೆಗೊಳ್ಳದೇ ಯುದ್ಧದ
ಕ್ರೌರ್ಯವು ಬದುಕುಳಿದವರ ಜೀವವನ್ನೂ ನಿರ್ದಯವಾಗಿ ಹಿಂಡುತ್ತಿರುವುದರಿಂದ!!!
ಉತ್ತರಕಾಂಡ ಕಾದಂಬರಿಯ ಕೊನೆಯಲ್ಲಿ ಸೀತೆಯ ಸಾವಿನಿಂದ ದುಃಖಿತರಾಗಿದ್ದ ವಾಲ್ಮೀಕಿಮಹರ್ಷಿಗಳು ತಮ್ಮ ಶಿಷ್ಯನಿಗೆ ಹೇಳುತ್ತಾರೆ: ತಾರಕ, ಜೋಡಿಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ದುಃಖವನ್ನು ವ್ಯಕ್ತಪಡಿಸಲು ನಾನು ವಸ್ತುವನ್ನು ಹುಡುಕುತ್ತಿದ್ದುದು ನಿನಗೇ ಗೊತ್ತಿದೆ. ಈ ಕಥೆಯನ್ನಾದರೂ ಸುಖಾಂತ್ಯ ಮಾಡಬೇಕು ಅಂತ ನಾನೇ ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಿಸಲು ಆಗಲಿಲ್ಲ. ಕಾವ್ಯದಲ್ಲಿ ಕೂಡ ಸುಖವನ್ನು ಸೃಷ್ಟಿಸುವುದು ಸಾಧ್ಯವಿಲ್ಲಎಂದಾಯಿತಲ್ಲ. ಕವಿಯು ಏನನ್ನು ತಾನೇ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ….. ‘ಉತ್ತರಕಾಂಡ’ದ ಹಿನ್ನೆಲೆಯಲ್ಲಿ ಮಾತನ್ನು ನೋಡೋಣ. ಸಹೃದಯವಾಚಕರ ಸಂವೇದನಾಶೀಲತೆಯನ್ನು ಮತ್ತೂ ಸೂಕ್ಷ್ಮಗೊಳಿಸಿ ನಿರ್ವೇದದ ಗಾಢವಾದ ಅನುಭೂತಿಯಲ್ಲಿ ಮತ್ತೆ ಮತ್ತೆ ಮುಳುಗೇಳುವಂತೆ ಮಾಡಿರುವುದು ಕಡಿಮೆಯ ಸಾಧನೆಯಲ್ಲ. ‘ಉತ್ತರಕಾಂಡ’ವನ್ನು ಬರೆದುದರ ಆಶಯ ಈ ಮಟ್ಟಿಗೆ ಖಂಡಿತವಾಗಿಯೂ ಸಫಲವಾಗಿದೆ.
ಇಲ್ಲೆಲ್ಲ ಡಾ. ಉಮಾ ರಾಮರಾವ್ ಅವರ ಪ್ರತಿಭೆ, ವೈಜ್ಞಾನಿಕ ನಿಲುವು, ತರ್ಕಬದ್ಧ ತೀರ್ಮಾನ, ನೇರವಾದ ಖಚಿತವಾದ ವಿಶ್ಲೇಷಣೆಗಳಿಂದ ಪ್ರಸ್ತುತ ಕೃತಿ ಸಮೃದ್ಧವಾಗಿ ಮೈತಾಳಿದೆ.
ಹೀಗೆ ಭೈರಪ್ಪ ಅವರ ಎರಡು ಮಹಾ ಕಾದಂಬರಿಗಳ ಹಿರಿಮೆ ಗರಿಮೆಗಳನ್ನು ತುಲನಾತ್ಮಕವಾಗಿ ಪುನರ್ ಮೌಲ್ಯಮಾಪನಕ್ಕೆ ಗುರಿಪಡಿಸಿರುವುದು ಸಹ ಈ ಕೃತಿಯ ಇನ್ನೊಂದು ವಿಶೇಷ ಸಾಧನೆ.ಕನ್ನಡ ಸಾರಸ್ವತ ಪ್ರಪಂಚಕ್ಕೆ ಇದೊಂದು ಮೌಲಿಕ ಸೇರ್ಪಡೆ. ಈ ಶೋಧ ಕೃತಿಗಾಗಿ ಡಾ. ಉಮಾ ರಾಮರಾವ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬೈ.
ಡಾ. ಉಮಾ ರಾಮರಾವ್
ಇವರ ‘ಬಹು ನೆಲೆಗಳ ಬೆರಗು’ ಮಹಾಪ್ರಬಂಧ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಸಕ್ತಿಯುಳ್ಳವರು ಈ ಕೃತಿಯನ್ನು ಖರೀದಿಸಲು ಸಾಹಿತ್ಯ ಭಂಡಾರದ ಸಂಪರ್ಕ ವಿವರ ಜೊತೆಗೆ ಇದೆ. ಕೃತಿಯನ್ನು ಕೊಂಡು ಸಹಕರಿಸಬೇಕಾಗಿ ವಿನಂತಿ.
ಸಾಹಿತ್ಯ ಭಂಡಾರದ ಶ್ರೀ. ರಾಜ 944 969 5586 , 080-22877618
ಅಥವಾ ಶ್ರೀ. ಅಭಿಜಿತ್ 948 316 5897
ಪುಸ್ತಕದ ಬೆಲೆ : ರೂಪಾಯಿ 545/-