ಮಂಗಳೂರು : ಬ್ಯಾರಿ ಎಲ್ತ್ ಗಾರ್ತಿಮಾರೊ ಕೂಟದ ವತಿಯಿಂದ ಆಯೋಜಿಸಿದ್ದ ‘ಸಾಹಿತ್ಯತ್ತೊ ಒಸರ್ -2024’ (ಸಾಹಿತ್ಯದ ಒರತೆ) ಕಾರ್ಯಕ್ರಮವು ದಿನಾಂಕ 12-05-2024ರಂದು ಬಲ್ಮಠದ ಸಹೋದಯ ಸಭಾಂಗಣದಲ್ಲಿ ಜರಗಿತು.
ಈ ಕಾರ್ಯಕ್ರಮದ ನೆಪದಲ್ಲಿ ನಡೆದ ‘ಪಾಟೆಲ್ತ್ ರೊ ಒಸರ್’ ಬಹುಭಾಷಾ ಕವಿಗೋಷ್ಠಿಯಲ್ಲಿ ಮೊದಲು ಕವಿತೆ ಪ್ರಸ್ತುತಪಡಿಸಿದವರು ಆಯೆಷಾ ಯು.ಕೆ. “ಹೌದು, ಅಮ್ಮನೆಂದರೆ ನಾಟಕಕಾರ್ತಿ… ಕುಟುಂಬದ ಒಳಿತಿಗಾಗಿ ದುಃಖ ದುಮ್ಮಾನವನ್ನು ಹುದುಗಿಟ್ಟುಕೊಂಡು ಏನೂ ಆಗಲಿಲ್ಲ ಎಂಬಂತೆ ನಟಿಸುವಾಕೆ…’ ಅವರು ಸ್ವರಚಿತ ಕವನದ ಇಂಥ ಸಾಲುಗಳನ್ನು ಓದುತ್ತಿರುವಾಗ ಸಭಿಕರಲ್ಲಿ ಮೊದಲು ಮೌನ, ನಂತರ ಹೃದಯ ಭಾರ. ಕೆಲವರ ಕಣ್ಣಂಚು ತಮಗರಿವಿಲ್ಲದೇ ಒದ್ದೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ತಾಯಂದಿರ ಕುರಿತ ಕವಿತೆ ವಾಚಿಸಿದ ಅವರು, ಅಮ್ಮಂದಿರು ತಮ್ಮ ನೋವನ್ನು ನಾಟಕೀಯವಾಗಿ ಅಡಗಿಸಿಡುವುದನ್ನು ಕಾವ್ಯಾತ್ಮಕವಾಗಿ ನಿರೂಪಿಸಿ ಸಭಿಕರ ಹೃದಯವನ್ನು ಆರ್ದ್ರಗೊಳಿಸಿದರು.
ನೋವನ್ನು ಕಣ್ಣೀರಿನ ಮೂಲಕ ಪ್ರಕಟಪಡಿಸದೆ ಅಡಗಿಸಿಟ್ಟ ಅಮ್ಮ ಕೊನೆಗೊಂದು ದಿನ ಕಣ್ಣೀರು ಹಾಕಿದಾಗ ಮಕ್ಕಳು ‘ಆಹಾ… ಅಮ್ಮ ನಾಟಕ ಮಾಡುತ್ತಿದ್ದಾಳೆ…’ ಎಂದು ಗೇಲಿ ಮಾಡಿದರು ಎಂಬ ಸಾಲುಗಳು ಕಿವಿಗೆ ಬೀಳುತ್ತಿದ್ದಂತೆ ಕಾವ್ಯಪ್ರಿಯರು ಮಂತ್ರಮುಗ್ಧರಾದರು. ‘ಹೌದು, ನಾಟಕ ಮಾಡಿಯೇ ಎಲ್ಲವನ್ನೂ ಮಾಡಿದೆ’ ಎಂದು ಹೇಳಿದ ತಾಯಿ ‘ಮತ್ತೊಂದು ದಿನ ನಾಟಕ ಮಾಡಿಯೇ ರಂಗವನ್ನು ತೊರೆದಳು’ ಎಂಬ ಸಾಲುಗಳು ಬಹುತೇಕರ ಹೃದಯದಾಳವನ್ನು ಚುಚ್ಚಿದವು.
ಮರಿಯಂ ಇಸ್ಮಾಯಿಲ್ ಅವರ ‘ಕಲ್ಬಿಲೆ ಕತ್ತಲ್’ ಕವಿತೆಯು ಸದ್ಯದ ದುಷ್ಟ ಸಮಾಜದ ಮೇಲೆ ಬೇಸರದಿಂದ ಬೆಳಕು ಚೆಲ್ಲಿತು. ಸಾರಾ ಪಲ್ಲಡ್ಕ ಅವರ ‘ಅಪ್ಪನ ಕನಸಿನ ಕೆಂಪು ಕಾರು’ ಎಂಬ ಕನ್ನಡ ಕವಿತೆ ಕೂಡ ಹೃದಯದಾಳಕ್ಕೆ ಇಳಿಯುವ ಸಾಲುಗಳನ್ನು ಒಳಗೊಂಡಿತ್ತು. ಕೆಂಪು ಕಾರು ಕೊಳ್ಳಬೇಕೆಂಬ ಆಸೆ ಇದ್ದ ಅಪ್ಪ ಕುಟುಂಬದ ಜವಾಬ್ದಾರಿಗಳ ನಡುವೆ ಬಯಕೆಯನ್ನು ಈಡೇರಿಸಿಕೊಳ್ಳಲಾಗದೆ
ಕೊನೆಗೊಮ್ಮೆ ಇಲ್ಲವಾಗಿಬಿಟ್ಟ ಎಂಬ ಸಾಲುಗಳು ಹೃದಯದಾಳಕ್ಕೆ ಇಳಿದವು.
ಬ್ಯಾರಿ, ಕನ್ನಡ ಮತ್ತು ತುಳು ಕವಿತೆಯ ಕಂಪು ಕೂಡ ಕವಿಗೋಷ್ಠಿಯಲ್ಲಿ ಇತ್ತು. ಸಾರಾ ಅಲಿ, ಶಾಹಿದಾ, ರಮ್ಲತ್, ರಹ್ಮತ್ ಪುತ್ತೂರು, ತನ್ಸೀರಾ ಆತೂರು, ನಝ್ಮತುನ್ನೀಸ ಲೈಝ್, ಫೌಜಿಯಾ ಹರ್ಷದ್ ಮೂಡುಬಿದ್ರೆ, ಆಯಿಷಾ ಪೆರ್ನೆ, ರಮೀಝ ಎಂ.ಬಿ., ರೈಹಾನ ವಿ.ಕೆ., ಝುವೈರಿಯಾ ಮುಫೀದಾ, ಸಲ್ಮಾ ಮಂಗಳೂರು, ಅಯಿಷ ತಶಿ ಉಳ್ಳಾಲ್ ಕವಿತೆ ವಾಚಿಸಿದರು.
ದಫ್ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಕೀಲ ಬಿ.ಎ. ಮೊಹಮ್ಮದ್ ಹನೀಫ್ ಮಾತನಾಡಿ “ಬ್ಯಾರಿ ಭಾಷೆಯಲ್ಲಿ ಮಹಾಪ್ರಾಣ ಇಲ್ಲ. ಪದಪ್ರಯೋಗ ಮಾಡುವಾಗ ಅಲ್ಪಪ್ರಾಣವನ್ನು ಬಳಿಸಿದರೆ ಮಾತ್ರ ಭಾಷೆಯ ಮೂಲಸತ್ವ ಉಳಿಯಬಲ್ಲುದು” ಎಂದರು.
ಕವಿಗೋಷ್ಠಿಯ ನಂತರ ‘ಪಲಕತ್ತೂ ಒಸರ್’ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕಿ ಫಾತಿಮಾ ರಲಿಯಾ “ಸಾಹಿತ್ಯವು ಪ್ರಭುತ್ವದ ದಾಳಿಗೆ ಒಳಗಾಗುತ್ತಿರುವ ಕಾಲ ಇದು. ಇಂಥ ಸಂದರ್ಭದಲ್ಲಿ ಮಹಿಳಾ ಸಾಹಿತ್ಯವು ಪುರುಷರ ಸಾಹಿತ್ಯಕ್ಕಿಂತ ಭಿನ್ನ ಎಂದು ತೋರಿಸಿಕೊಡುವುದಕ್ಕಾಗಿ ಬ್ಯಾರಿ ಎಲ್ತ್ ಗಾರ್ತಿಮಾರೊ ಕೂಟ ಸಾಹಿತ್ಯ ರಚನೆ ಮಾಡುತ್ತಿಲ್ಲ” ಎಂದು ಸ್ಪಷ್ಟಪಡಿಸಿದರು. ಸಾಹಿತಿ ಝುಲೇಕಾ ಮುಮ್ರಾಜ್ ಉಪಸ್ಥಿತರಿದ್ದರು.