ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ದಸರಾ ಅಂಗವಾಗಿ ಅಮೃತ ಸೋಮೇಶ್ವರ ಇವರ ನೆನಪಿನಲ್ಲಿ ಆಯೋಜಿಸಿದ್ದ ‘ಬಹುಭಾಷಾ ಕವಿಗೋಷ್ಠಿ ಮತ್ತು ತುಳು ಕವಿಗೋಷ್ಠಿ’ಯು ದಿನಾಂಕ 4 ಅಕ್ಟೋಬರ್ 2024ರಂದು ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ಪ್ರಸ್ತುತಗೊಂಡಿತು. ಈ ದಿನ ಕವಿಗೋಷ್ಠಿಯಲ್ಲಿ ವಾಚಿಸುವ ಕವಿತೆಗಳನ್ನು ಒಳಗೊಂಡ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಡಾ. ಮೀನಾಕ್ಷಿ ರಾಮಚಂದ್ರ ಇವರು ಅಧ್ಯಕ್ಷತೆ ವಹಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಚೇತನ್ ಸೋಮೇಶ್ವರ, ಡಾ. ವಿಶ್ವನಾಥ ಬದಿಕಾನ, ಗಣೇಶ ಪ್ರಸಾದ ಪಾಂಡೇಲು, ರಘುಪತಿ ಭಟ್, ಕರುಣಾಕರ ಬಳ್ಕೂರು, ರೇಮಂಡ್ ಡಿಕುನ್ನಾ ತಾಕೊಡೆ, ಬದ್ರುದ್ದೀನ್ ಕೂಳೂರು, ಅರುಣ್ ಶೇಟ್, ಹಸನ್ ಕುಂಜತ್ತಬೈಲ್, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಅರವಿಂದ ಶ್ಯಾನಭಾಗ ಬಾಳೇರಿ ಇವರುಗಳು ಭಾಗವಹಿಸಿ ಕವಿತೆಗಳನ್ನು ವಾಚಿಸಿದರು.
ಡಾ. ವಸಂತ ಕುಮಾರ್ ಪೆರ್ಲ ಇವರು ಅಧ್ಯಕ್ಷತೆ ವಹಿಸಿದ್ದ, ತುಳು ಕವಿಗೋಷ್ಠಿ’ಯಲ್ಲಿ ವಿಜಯಲಕ್ಷ್ಮೀ ಶೆಟ್ಟಿ ಸಾಲೆತ್ತೂರು ಸೂರ್ಯೋದಯವನ್ನು, ಸುಧಾ ನಾಗೇಶ್ ತುಳು ಭಾಷೆಯನ್ನು, ಅಕ್ಷಯಾ ಆರ್ವ. ಶೆಟ್ಟಿ ತಾಯಿಯ ವಾತ್ಸಲ್ಯವನ್ನು, ಅಕ್ಷತಾರಾಜ್ ಪೆರ್ಲ ತುಳು ಮಣ್ಣಿನ ಗುಣವನ್ನು, ವಿಶ್ವನಾಥ್ ಕುಲಾಲ್ ಎಲ್ಲ ಕಡೆ ಸಲ್ಲುವ ಹಣವನ್ನು ಚಿತ್ರಿಸಿ, ಬಣ್ಣಿಸಿದರೆ ವಿಜಯಲಕ್ಷ್ಮಿ ಕಟೀಲು ಹೃದಯದಲ್ಲಿ ಹುದುಗಿರುವ ಸಣ್ಣ ಅಳುಕಿನ ಬಗ್ಗೆ ಹೇಳಿದರು. ‘ಕಕ್ಕೆಯಾವೊಡು ಯಾನ್ ಕಕ್ಕೆ ಆವೊಡು ; ಕಪ್ಪು ಕಪ್ಪು ಅಂಡ ದಾನೆ, ಸ್ವರ ಕರಕರ ಅಂಡ ದಾನೆ… ಮಾತೆರೆನ್ನಾ ಗೂಟುಪಾಡ್ದ್ ಕೂಡ್ದು ತಿನ್ಪಿ ಮಲ್ಲ ಮನಸ್ಸುಂಡತ್ತ…’ ಉಪನ್ಯಾಸಕ ರಘು ಇಡ್ತಿದು ಅವರ ತುಳು ಕವನದ ಸಾಲುಗಳು ಹೀಗೆ ಸಾಗುತ್ತಿದ್ದಾಗ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಸೇರಿದ್ದ ಸಹೃದಯರು ಚಿಂತನಾಮಗ್ನರಾದರು. ಪ್ರಸ್ತುತಗೊಂಡ ‘ಕಕ್ಕೆ’ ಕವಿತೆ ‘ನಾನು ಕಾಗೆಯಂತಾಗಬೇಕು’ ಎಂಬ ಆಶಯವನ್ನು ಹೊಂದಿತ್ತು.
ಕುದ್ರೋಳಿ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್., ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಸದಸ್ಯ ಶಶಿರಾಜ್ ಕಾವೂರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ಸ್ಮರಣಿಕೆ, ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಕರುಣಾಕರ ಬಳ್ಕೂರು ಮತ್ತು ಮೈಮ್ ರಾಮ್ ದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.