ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್. ಕಾಲೇಜು, ರೇಡಿಯೋ ಪಾಂಚಜನ್ಯ 90.80 ಎಫ್.ಎಂ. ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27-12-2023ರಂದು ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಪುತ್ತೂರಿನ ತೆಂಕಿಲದ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.
ಪುತ್ತೂರಿನ ಖ್ಯಾತ ಆಯುರ್ವೇದಿಕ್ ವೈದ್ಯರಾದ ಡಾ. ಹರಿಕೃಷ್ಣ ಪಾಣಾಜೆ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ ಅಂಧಕಾರ ತೊಲಗಿಸಬೇಕು” ಎಂದು ಶುಭ ಹಾರೈಸುತ್ತಾ ತಮ್ಮ ಸ್ವರಚಿತ ಕವನ ಒಂದನ್ನು ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಬಿ.ಎಡ್. ಕಾಲೇಜಿನ ಸಂಚಾಲಕರಾದ ಶ್ರೀಮತಿ ಗಂಗಮ್ಮ ಎಚ್. ಶಾಸ್ತ್ರಿ ಅವರು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ವಸಂತ ಮಾಧವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ಅವರು ಭಾರತೀಯ ಭಾಷಾ ಉತ್ಸವದ ಮಹತ್ವವನ್ನು ತಿಳಿಸುತ್ತಾ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶಾಲಿನಿ ಆತ್ಮಭೂಷಣ್ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರಾಜೀವಿ ನಾಗೇಶ್ ಅವರು ಕಾರ್ಯಕ್ರಮ ನಿರೂಪಣೆಗೈದರು.
ಉದ್ಘಾಟನೆಯ ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿ ನಡೆಯಿತು. ಸಾರ್ವಜನಿಕ ವಿಭಾಗದಲ್ಲಿ 47 ಸಾಹಿತಿಗಳು ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ 34 ಯುವ ಸಾಹಿತಿಗಳು ಭಾಗವಹಿಸಿದ್ದರು. ವಿವೇಕಾನಂದ ಬಿ.ಎಡ್. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಸನ್ನ ಭಟ್ ಬಲ್ನಾಡ್ ಅವರ ಉಪಸ್ಥಿತಿಯಲ್ಲಿ ಹಾಗೂ ಶ್ರೀಮತಿ ಶಂಕರಿ ಶರ್ಮ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ನಡೆಯಿತು. ಶ್ರೀಮತಿ ಭುವನೇಶ್ವರಿ ಅವರು ಈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಶಾಂತ ಪುತ್ತೂರು ಅವರು ವಹಿಸಿದ್ದರು. ಶ್ರೀಯುತ ಬಾಲಕೃಷ್ಣ ನಾಯಕ್ ಅವರು ಉಪಸ್ಥಿತರಿದ್ದರು. ಶ್ರೀಮತಿ ಅಕ್ಷತಾ ಅವರು ನಿರೂಪಣೆಗೈದರು.
ವಿವೇಕಾನಂದ ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಸರ್ವ ಭಾಷಾ ಐಕ್ಯತೆಯನ್ನು ಸಾರುವ ಸುಂದರವಾದ ರಂಗೋಲಿ ಹಾಗೂ ವೇದಿಕೆ ಮೇಲ್ಭಾಗದಲ್ಲಿ ತೂಗು ಹಾಕಿದ ಸರ್ವ ಭಾಷಾ ಸ್ವಾಗತ ಫಲಕವು ಜನರ ಕಣ್ಮನ ಸೆಳೆಯಿತು. ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ನಡೆದ ಈ ಬಹುಭಾಷಾ ಕವಿ ಗೋಷ್ಠಿಯು ಸರ್ವರ ಪ್ರಶಂಸೆಗೆ ಪಾತ್ರವಾಯಿತು.