ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ, ತುಳು, ಬ್ಯಾರಿ ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಮತ್ತು ಜಿಲ್ಲಾಡಳಿತ – ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಬಹುಸಂಸ್ಕೃತಿ ಉತ್ಸವ’ವನ್ನು ದಿನಾಂಕ 03 ಡಿಸೆಂಬರ್ 2024 ಮತ್ತು 04 ಡಿಸೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆ, ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ವಿದ್ಯಾರ್ಥಿ ಸಮಾವೇಶ ನಡೆಯಲಿದೆ.
ದಿನಾಂಕ 03 ಡಿಸೆಂಬರ್ 2024ರಂದು ಭವ್ಯ ಸಾಂಸ್ಕೃತಿಕ ಮೆರವಣಿಗೆಯ ಉದ್ಘಾಟನೆಯು ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಮಾನ್ಯ ಸಭಾಧ್ಯಕರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಫರೀದ್ ಹಾಗೂ ‘ಬಹುಸಂಸ್ಕೃತಿ ಉತ್ಸವ’ದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಇವರಿಂದ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಇವರು ಕಲಾ ಪ್ರದರ್ಶನ ಮತ್ತು ವಸ್ತು ಪ್ರದರ್ಶನಗಳ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2-00 ಗಂಟೆಯಿಂದ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 04 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ನಡೆಯಲಿರುವ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ‘ಕರ್ನಾಟಕದ ಬಹು ಸಂಸ್ಕೃತಿಯ ಪರಂಪರೆ’ ಎಂಬ ವಿಷಯದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉಪನ್ಯಾಸ ನೀಡಲಿದ್ದಾರೆ. 11-30 ಗಂಟೆಗೆ ‘ಕರ್ನಾಟಕಕ್ಕೆ ಒಡನಾಡಿ ಭಾಷಾ ಸಮುದಾಯಗಳ ಕೊಡುಗೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.