ಕೂಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಬಲೆ ತುಳು ಸಾಹಿತ್ಯ ಓದುಗ’ ಅಭಿಯಾನದ ಎರಡನೇ ಕಾರ್ಯಕ್ರಮ ದಿನಾಂಕ 09 ಜನವರಿ 2025 ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳುಭವನದ ತುಳು ಸಾಹಿತ್ಯ ಆಕಾಡಮಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ತುಳು ಸಾಹಿತಿ ಹಾಗೂ ನಾಟಕಗಾರ ಪರಮಾನಂದ ಸಾಲ್ಯಾನ್ ಮಾತನಾಡಿ “ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಇಂತಹ ಅಭಿಯಾನ ಸೂಕ್ತ. ತುಳು ಬದುಕಿನ ನಂಬಿಕೆಯ ಜತೆಗೆ ಜಿಜ್ಞಾಸೆಯನ್ನು ಸಮಚಿತ್ತದಿಂದ ಕಾಣುವ ಪ್ರಜ್ಞಾವಂತಿಕೆ ಓದಿನ ಮೂಲಕ ಮೂಡಲಿದೆ” ಎಂದರು.
ಇದೇ ಸಂದರ್ಭದಲ್ಲಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಮದಿಪು’ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಮಾತನಾಡಿ “ಪ್ರತಿ ಸಂದರ್ಭದಲ್ಲಿಯೂ ಅಕಾಡಮಿಗಳು ಸರಕಾರದತ್ತ ನಿರೀಕ್ಷೆ ಮಾಡುವುದಕ್ಕಿಂತ ಸ್ವಯಂ ಸಂಪನ್ಮೂಲ ಕ್ರೂಡೀಕರಿಸಿ ಜನಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸುವುದು ಅಗತ್ಯ” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಮಾರ್ ಉದ್ಯಾವರ, ರವಿರಾಜ್ ಸುವರ್ಣ ಮುಂಬಯಿ, ಬೂಬ ಪೂಜಾರಿ, ಯೇನಪೊಯ ಕಾಲೇಜಿನ ಶಿಕ್ಷಕರಾದ ನಿಯಾಝ್ ಪಿ., ಡಾ. ದಿನಕರ ಪಚ್ಚನಾಡಿ, ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ ಭಾಗವಹಿಸಿದ್ದರು.
ಅಕಾಡೆಮಿ ರಿಜಿಸ್ಟಾರ್ ಪೂರ್ಣಿಮಾ ಸ್ವಾಗತಿಸಿ, ಸದಸ್ಯೆ ಅಕ್ಷಯಾ ಆರ್. ಶೆಟ್ಟಿ ನಿರ್ವಹಿಸಿ, ಸದಸ್ಯ ಬಾಬು ಕೊರಗ ಪಾಂಗಾಳ ವಂದಿಸಿದರು.
ಅಕಾಡೆಮಿಡ್ ‘ಬಲೆ ತುಳು ಸಾಹಿತ್ಯ ಓದುಗ’ ಕಾರ್ಯಕ್ರಮದಲ್ಲಿ ಕೂಳೂರಿನ ಯೇನಪೊಯ ಕಾಲೇಜಿನ 50 ವಿದ್ಯಾರ್ಥಿಗಳು ದಿನಪೂರ್ತಿ ಭಾಗವಹಿಸಿ ಸಂಜೆ ವೇಳೆಗೆ ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಅತಿಥಿಗಳೊಂದಿಗೆ ಸಂವಾದ ನಡೆಸಿದರು.