ಕುಂದಾಪುರ : ಹಿರಿಯ ಪತ್ರಕರ್ತ, ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ಕುಂದಾಪುರದ ‘ಕುಂದಪ್ರಭ’ ಸಂಸ್ಥೆಯಿಂದ ನೀಡಲಾಗುತ್ತಿರುವ ‘ಕೋ. ಮ. ಕಾರಂತ ಪ್ರಶಸ್ತಿ’ಗೆ ಈ ವರ್ಷ ಪ್ರತಿಭಾವಂತ ಕುಂಚ ಕಲಾವಿದ, ಪ್ರಗತಿಪರ ಉದ್ಯಮಿ, ಇಂಜಿನಿಯರ್ ಬಳ್ಕೂರು ಜಯರಾಮ ಉಡುಪ ಇವರನ್ನು ಆಯ್ಕೆ ಮಾಡಲಾಗಿದೆ. ಬಳ್ಕೂರಿನ ನಿವೃತ್ತ ಮುಖ್ಯ ಶಿಕ್ಷಕ, ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ. ಬಿ. ಸುಬ್ರಾಯ ಉಡುಪ ಮತ್ತು ದಿ. ಭಾಗೀರಥಿ ಉಡುಪ ಅವರ ಪುತ್ರರಾಗಿರುವ ಇವರು ರೇಖಾ ಚಿತ್ರ, ಚುಕ್ಕಿ ಚಿತ್ರ, ವ್ಯಂಗ್ಯ ಚಿತ್ರಕಾರರಾಗಿದ್ದು, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರ, ರೇಖಾ ಚಿತ್ರ, ವ್ಯಕ್ತಿ ಚಿತ್ರ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವೃತ್ತಿಯಲ್ಲಿ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನ ಹೊಂದಿದವರಾಗಿದ್ದು, ದೇಶಕ್ಕಾಗಿ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಹೆಲಿಕಾಪ್ಟರ್, ವಿಮಾನ, ಕ್ಷಿಪಣಿ ಯೋಜನೆಗಳಿಗೆ ತಾಂತ್ರಿಕ ವಿನ್ಯಾಸ ನೀಡಿದವರು. ತೇಜಸ್ ಯುದ್ಧ ವಿಮಾನಕ್ಕಾಗಿ ಬ್ಯಾಕಪ್ ಡಿಸ್‌ಪ್ಲೇ ಯುನಿಟ್ ವಿನ್ಯಾಸ ಅಭಿವೃದ್ಧಿ ಪ್ರಮಾಣಿಕರಣ ಇವರ ಸಾಧನೆ, ಬೆಂಗಳೂರಿನ ಡಾಟಾ ಸೋಲ್ ಇನ್ನೋವೇಟಿವ್ ಲ್ಯಾಬ್‌ನ ಸ್ಥಾಪಕ ನಿರ್ದೇಶಕರಾಗಿರುವ ಇವರು, ತಾಂತ್ರಿಕ ಸಲಹೆಗಾರರಾಗಿ ಹಾಗೂ ಪೈ-ವಿ ಟೆಕ್ನಾಲಜೀಸ್ ಪೈ. ಲಿ. ನ ತಾಂತ್ರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
