ಕಾಸರಗೋಡು : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ) ಇದರ 79ನೇ ವಾರ್ಷಿಕೋತ್ಸವದಲ್ಲಿ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈವಿಧ್ಯ, ಭಜನೆ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟವು ದಿನಾಂಕ 23-12-2023 ಶನಿವಾರ ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬನಾರಿ ಇಲ್ಲಿ ನಡೆಯಲಿದೆ.
ಪೂರ್ವಾಹ್ನ ಗಂಟೆ 9:30ರಿಂದ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ದೇವಿ ಭಜನಾ ಮಂಡಳಿ ಕಾವು ಇವರಿ೦ದ ಭಜನಾ ಕಾರ್ಯಕ್ರಮ, ಪೂರ್ವಾಹ್ನ ಗಂಟೆ 11:15ಕ್ಕೆ ಸಂಘದ ಮಹಿಳಾ ಕಲಾವಿದರಿಂದ ‘ಸಮರ ಸನ್ನಾಹ’ ಯಕ್ಷಗಾನ ತಾಳಮದ್ದಳೆ, ಅಪರಾಹ್ನ ಗಂಟೆ 12:15ರಿಂದ ದೇಲಂಪಾಡಿ ಶಾಲಾ ಮಕ್ಕಳಿಂದ ‘ನೃತ್ಯ ವೈವಿಧ್ಯ’, ಅಪರಾಹ್ನ ಗಂಟೆ 12: 45ರಿಂದ ‘ಚಿಣ್ಣರ ಚಿಲಿಪಿಲಿ’ ಐನಾರಿ ಅಂಗನವಾಡಿಯ ಪುಟಾಣಿಗಳಿಂದ, 2 ಗಂಟೆಗೆ ಹಿರಿಯ ಕವಯತ್ರಿ ಶ್ರೀಮತಿ ಸತ್ಯವತಿ ಎಸ್. ಕೊಳಚೆಪ್ಪು ಇವರಿಂದ ಕೀರಿಕ್ಕಾಡು ಸಂಸ್ಮರಣೆ ಮತ್ತು ಖ್ಯಾತ ಹಿರಿಯ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರ ನಾರಾಯಣ ಭಟ್ ಇವರಿಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಸಂಸ್ಮರಣಾರ್ಥ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಪರಾಹ್ನ ಗಂಟೆ 4ರಿಂದ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ವಿಭೀಷಣ ನೀತಿ’ ಯಕ್ಷಗಾನ ತಾಳಮದ್ದಳೆ ಮತ್ತು ರಾತ್ರಿ 7ರಿಂದ ನೃತ್ಯಗುರುಗಳಾದ ಶ್ರೀಮತಿ ಸರೋಜಿನಿ ಐನಾರಿ ಅವರ ನಿರ್ದೇಶನದಲ್ಲಿ ಸಂಘದ ಉದಯೋನ್ಮುಖ ಪ್ರತಿಭೆಗಳಿಂದ ‘ಶಕಟಾಸುರ ವಧೆ, ತರಣಿಸೇನ ಕಾಳಗ, ಗಿರಿಜಾ ಕಲ್ಯಾಣ’ ಎಂಬ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.