Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧ್ಯಾನಸ್ಥ ಕವಿತೆಗಳ ʼಬಂದರಿಗೆ ಬಂದ ಹಡಗುʼ – ಡಾ. ರವಿಶಂಕರ ಜಿ.ಕೆ.
    Book Release

    ಧ್ಯಾನಸ್ಥ ಕವಿತೆಗಳ ʼಬಂದರಿಗೆ ಬಂದ ಹಡಗುʼ – ಡಾ. ರವಿಶಂಕರ ಜಿ.ಕೆ.

    April 6, 2023No Comments10 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಮರ್ಶಕರ ಬಗ್ಗೆ:
    ಡಾ. ರವಿಶಂಕರ ಜಿ.ಕೆ.
    ಡಾ.ರವಿಶಂಕರ ಜಿ.ಕೆ. ಪುತ್ತೂರು ತಾಲೂಕಿನ ಪಾಣಾಜೆಯವರಾಗಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಇಲ್ಲಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ಕನ್ನಡ ಸಾಹಿತ್ಯದಲ್ಲಿ ಪ್ರಾಣಿರೂಪಕಗಳು: ಅನ್ಯತೆಯ ಅನುಸಂಧಾನ’ ಎಂಬ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದಿರುವ ಇವರು ‘ಹವಿಗನ್ನಡದ ಅನನ್ಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ’, ‘ಅಂತಾರಾಷ್ಟ್ರೀಯ ಕೃಷಿ-ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ’ ಕೃತಿಗಳನ್ನು ಬರೆದಿದ್ದಾರೆ. ಚಿಂತನ ಬಯಲು, ಅಭಿಜಾತ ಕನ್ನಡ, ವಿಶ್ವವಾಣಿ, ವಿಜಯಕರ್ನಾಟಕ, ಉದಯವಾಣಿ, ಸುಧಾ, ಮಂಗಳ, ಕಸ್ತೂರಿ, ಹಸಿರುವಾಸಿ, ಕಾರವಲ್‌ ಮುಂತಾದ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

     


    ವಾಸುದೇವ ನಾಡಿಗ್‌ ಕನ್ನಡ ಕಾವ್ಯ ಕ್ಷೇತ್ರಕ್ಕೆ ಚಿರಪರಿಚಿತವಾದ ಹೆಸರು. ʼವೃಷಭಾಚಲದ ಕನಸುʼ ಕವನ ಸಂಕಲನದ ಮೂಲಕ ಕಾವ್ಯ ಕೃಷಿ ಆರಂಭಿಸಿದ ವಾಸುದೇವ ನಾಡಿಗರು ʼಹೊಸ್ತಿಲು ಹಿಮಾಲಯದ ಮಧ್ಯೆʼ ʼಭವದ ಹಕ್ಕಿʼ ʼವಿರಕ್ತರ ಬಟ್ಟೆಗಳುʼ, ʼನಿನ್ನ ಧ್ಯಾನದ ಹಣತೆʼ, ʼಅಲೆ ತಾಕಿದರೆ ದಡʼ, ʼಅವನ ಕರವಸ್ತ್ರʼ ಮುಂತಾದ ಕವನಸಂಕಲನಗಳ ಮೂಲಕ ಗುರುತಿಸಿಕೊಂಡಿದ್ದಾರೆ. ೨೦೨೧ರಲ್ಲಿ ಪ್ರಕಟವಾದ ʼಬಂದರಿಗೆ ಬಂದ ಹಡಗುʼ ಅವರ ಎಂಟನೇ ಕವನ ಸಂಕಲನ.

    ವಾಸುದೇವ ನಾಡಿಗ್‌ ಅವರಿಗೆ ಕಾವ್ಯ ಸೃಷ್ಟಿಯ ಕಾರ್ಯದಲ್ಲಿ ಅಪಾರವಾದ  ಪ್ರೀತಿ ತಾದಾತ್ಮ್ಯ, ಹಂಬಲಗಳಿವೆ ಎಂಬುದನ್ನು ʼಬಂದರಿಗೆ ಬಂದ ಹಡಗುʼ ಸಂಕಲನದ ಕವನಗಳು ಸಾಧಿಸಿತೋರಿಸುತ್ತದೆ.  ‘ಉಸಿರು ಕುದಿದು ಎಸರು ಬಂದಂತೆ ಅಕ್ಷರಗಳ ಸುರಿಯುತ್ತೇನೆ'(ಅಕ್ಷರ ಪಾತ್ರೆ) ಎಂದೇ ಕವಿತೆಯನ್ನು ಆರಂಭಿಸುವ ವಾಸುದೇವ ನಾಡಿಗ್‌ರು ‘ಕೈಹಿಡಿದು ಜುಲುಮೆ ಮಾಡಬೇಡಿ ಪದಗಳೆ ನಾನು ಮಾಗದೆ ನಿಮಗೆ ಬಿಡುಗಡೆ ಇಲ್ಲ’ ಎಂದು ಪದಗಳನ್ನು ಬೇಡಿಕೊಳ್ಳುತ್ತಾರೆ. ‘ಕಣ್ಣಬಾವಿಗಳಿಂದ ಬೆಳಕ ಸೇದದ ಹೊರತು ಬರೆದ ಅಕ್ಷರಗಳಿಗೆಲ್ಲ ಅರ್ಥ ಇಲ್ಲ’ ಎನ್ನುವ ಖಚಿತತೆಯ ಹಂತಕ್ಕೆ ಅವರು ತಲುಪಿದ್ದಾರೆ. ಈ ಕವಿತೆ ಮಹಾಕಾವ್ಯಗಳು ಹುಟ್ಟಿದ್ದರಿಂದ ಆರಂಭಿಸಿ ಕಾವ್ಯವೆಂಬ ಪಾತ್ರ ತುಂಬುತ್ತಾ, ಹಿಗ್ಗುತ್ತಾ ಬಂದ ಇತಿಹಾಸವನ್ನು ನೆನಪಿಸುತ್ತದೆ. ಆಕಾರವಿರುವ ಲಿಪಿಗಳನ್ನು ಬೇಕಾದ ಹಾಗೆ ಬಳಸಿಕೊಂಡು ಅವುಗಳ ಮೂಲಕ ಅಪಾರ ಅರ್ಥಗಳನ್ನು ಹುಟ್ಟಿಸಬಹುದಾದ ಕಾವ್ಯದ ಅನಂತ ಸಾಧ್ಯತೆಗಳ ಬಗ್ಗೆ ಕವಿಯಲ್ಲಿ ಸಂಭ್ರಮ, ಸಡಗರಗಳಿವೆ. ಅದರ ಜೊತೆಜೊತೆಗೆ ಅಕ್ಷರಪಾತ್ರೆಯಿಂದ ಬೇಕಾದಷ್ಟು ‘ಉಂಡಮೇಲೆಯೂ ಉಳಿದುಬಿಡುವ ಏನೋ ಇರದ ಭಾವವ ಹೇಳಲಾಗದು’ ಎಂಬ ಹಸಿವೆಯೂ ಇದೆ.

    ವಾಸುದೇವ ನಾಡಿಗರು ಕವಿತೆ ಹೇಗಿರಬೇಕು ಎಂಬುದಕ್ಕೆ ವ್ಯಾಖ್ಯಾನ ಕೊಡುವ ಪ್ರಯತ್ನವನ್ನು ʼಕವಿತೆಯೆಂದರೆʼ ಕವನದಲ್ಲಿ ಮಾಡುತ್ತಾರೆ. ಕವಿತೆ ಕೊತಕೊತ ಕುದಿಯದೆ, ಹಿಮದಂತೆ ತಣ್ಣಗೂ ಆಗದೆ, ಹೆಪ್ಪಿಟ್ಟ ಕೆನೆಮೊಸರಾಗಿ, ಆ ಮೊಸರನು ಲಯದಲಿ ಕಡೆದಾಗ ಅರಳುವ ನವನೀತವಾಗಬೇಕು ಎನ್ನುತ್ತಾರೆ. ಹಾಗಾಗಿ ʼಕವಿ ಕಾಯಬೇಕು, ಕಾದಂತೆ ಮಾಗಬೇಕು, ಪದಗಳ ಮೆರವಣಿಗೆ ಅಲ್ಲ ಕವಿತೆʼ ಎನ್ನುವುದು ಅರ್ಥವಾಬೇಕು. ಮುಂದುವರಿದು, ʼಪದಗಳ ವೃಥಾ ಹತ್ಯೆ ಅಲ್ಲ ಕವಿತೆ, ಕವಿತೆ ಎಂದರೆ ಕಾದಪದಗಳು ಹೆಣೆದ ಆತ್ಮದ ಬಟ್ಟೆʼ ಎಂದಿದ್ದಾರೆ. ಕವಿತೆಯ ಕುರಿತಾಗಿ ಅವರು ನೀಡುವ ಈ ವ್ಯಾಖ್ಯಾನ ಖಂಡಿತವಾಗಿಯೂ ಅವರ ಕವಿತೆಗಳು ಎಷ್ಟು ಮಾಗಿವೆ ಎಂಬುದನ್ನು ಹೇಳಬಲ್ಲವು. ಕವಿತೆಯನ್ನೇ ಸದಾ ಧ್ಯಾನಿಸಿದ ಕವಿಗೆ ಮಾತ್ರ ಹೇಳುವುದಕ್ಕೆ ಸಾಧ್ಯವಾಗಬಹುದಾದ ಮಾತುಗಳಿವು.

    ಕವಿಗೆ ಕವಿತೆ ಹೊಸೆಯುವ ಕಾರ್ಯ ಅಷ್ಟು ಸುಲಭದ್ದಲ್ಲ. ಅದೊಂದು ಏಕಾಂತದಲ್ಲಿ ಮಾಡುವ ತಪಸ್ಸು. ಆ ಏಕಾಗ್ರತೆಯನ್ನು ಗಳಿಸಿಕೊಂಡು ಬರೆದ ಕವಿತೆಗೆ ಮತ್ತು ಅದರಲ್ಲಿನ ಪ್ರತಿ ಪದಗಳಿಗೂ ಘನತೆ ಇವೆ ಎನ್ನುವುದು ನಾಡಿಗರ ನಿಲುವು. ʼಕವಿತೆಗೂ ಇದೆ ಘನತೆʼ ಎನ್ನುವ ಕವಿತೆಯ ಆರಂಭ ಇದು-

    ಸುಮ್ಮನೆ ಸರಳ ಸಲೀಸು ಸೂಜಿ ಚುಚ್ಚಿ
    ಹೂ ತೊಟ್ಟಿಗೆ
    ದಾರ ಆಕಡೆ ಎಳಕೊಂಡಂತೆ ಅಲ್ಲ
    ಪದದ ಪಕ್ಕ ಪದ ಕೂಡಿಸಿ ನಿಲಿಸಿ
    ನಿರರ್ಥಕ ಮುರಿದು ಗಲ್ಲ ಮೂಗು ಕಿವಿ
    ಕಣ್ಣು ಹಣೆ ತುಟಿ ಕಟಿ ವಟ ವಟ ಕೊರೆದು
    ಹಠಕೆ ಕೂತ ಕಪಟ
    ಸನ್ಯಾಸಿ ಧ್ಯಾನವಲ್ಲ
    ತಾರೆಯೊಂದು ಕತ್ತಲ ಸೀಳಿ ಬಾನಲಿ ಜಾಗ
    ಗಿಟ್ಟಿಸಿಕೊಳ್ಳುವ ಪರಿ ಸಲೀಸಲ್ಲ

    ಎನ್ನುತ್ತಲೇ ಕವಿತೆ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವಂಥದ್ದಲ್ಲ. ಹಾಗೆಯೇ ಬರೆದೆದ್ದಲ್ಲವೂ ಕವಿತೆ ಎನಿಸಿಕೊಳ್ಳುವುದಿಲ್ಲ. ಮನುಷ್ಯನ ಎಲ್ಲ ದುರಿತ ದಳ್ಳುರಿಗಳನ್ನು ಪದಗಳಲ್ಲಿ ಇರುಕಿಸುವುದಕ್ಕೆ ಸಾಧ್ಯವಿಲ್ಲ ಎನ್ನತ್ತಾರೆ ನಾಡಿಗರು. ಪರಿಣಯ ಸಲ್ಲಾಪದಂತಃಕರಣಗಳಿಗೆ ಪದ ಪರಿಮಳದಲಿ ಅದ್ದುವುದು ಮಲಗಿ ಏಳುವಷ್ಟು ಸುಲಭದ್ದಲ್ಲ ಎನ್ನುವ ಅನುಭವ ಕವಿಗೆ ಆಗಿದೆ. ಮಹಾಕವಿಗಳ ಕವಿತೆಗಳು ಪದಗಳಿಗಾಗಿ ಮುಗ್ಗರಿಸಿ ಬಿದ್ದಿದ್ದನ್ನು ಅವರು ಕಂಡಿದ್ದಾರೆ. ಕೆಲವೊಮ್ಮೆ ಕವಿ ಹೇಳಹೊರಟ ಭಾವಗಳ ಹತ್ತಿರಕ್ಕೂ ಪದಗಳು ಸೋಕದೇ ಇರುವಂಥ ಅನುಭವವಾಗಿದೆ. ಆ ಎಚ್ಚರಿಕೆಯಿಂದಲೇ,

    ಪದಗಳೇನು ಬೇಕಾಬಿಟ್ಟಿ ದೊರಕಲಿಕ್ಕೆ
    ಬಿಕರಿಗಿಟ್ಟ ಹಳೆವಸ್ತ್ರಗಳಲ್ಲ
    ನಿಮ್ಮ ಬೆನ್ನನು ಅವರು ಅವರ ಬೆನ್ನನು ನೀವು ತಟ್ಟುವ ಫಡಪೋಷಿ ಕೈಗಳಲ್ಲ
    ಕೊರಕಲಿನಲ್ಲಿ ಚಿಮ್ಮುವ ನೀರ ಚಿಲುಮೆ
    ನದಿಯಾದ ಕತೆಯಲಿ ಹೊಗಳಿಕೆಯ ದೃಶ್ಯ ಇಲ್ಲ
    ನಿಮ್ಮ ಸ್ವರತಿ ಸಂಪ್ರೀತ ಕವಿತೆಗಳಲಿ
    ಪದಗಳು ಮರುಜನ್ಮ ಪಡೆಯುವುದಿಲ್ಲ
    ಘನಮೋಡದ ಆಚೆ ನಿಂತ ಕಾಮನಬಿಲ್ಲು
    ಸನ್ಮಾನಗಳಿಗೆ ಕಾಯೊಲ್ಲ

    ಹಾಗಾಗಿ ಕೊನೆಗೆ “ಕವಿತೆಗೂ ಇದೆ ಘನತೆ ಎಂಬ ಸತ್ಯ ಅರ್ಥವಾಗುವವರೆಗೂ ಪದಗಳ ವೃಥಾ ಸಾವಿಗೆ ಕೊನೆ ಇಲ್ಲ” ಎನ್ನುತ್ತಾರೆ. ʼತಿಳಿಕೊಳ ಕವಿತೆʼಯಲ್ಲಿ ಕವಿತೆ ಎಷ್ಟು ತಿಳಿಯಾಗಬೇಕು ಎನ್ನುವುದನ್ನು ಸಾರುತ್ತಾರೆ.

    ಕೊಳದಂತಹ ಮನಸು ಕದಡಿದರೆ ಬಾಳು
    ನಿಂತ ನೀರಿಗೆಲ್ಲಿದೆ ಹೇಳಿ ಹೊಸತನ?
    ಕಲಕಬೇಕು ಮಗುವಿನ ಹುಚ್ಚು ಬೆರಳಗಳ ರೀತಿ
    ಬೊಗಸೆ ಬೊಗಸೆ ಎತ್ತಿ ಸುರಿಯಬೇಕು
    ಮತ್ತೆ ಒಳ ಸರಿಯಬೇಕು
    ಎದ್ದ ತರಂಗಗಳ ಬಣ್ಣಕೆ ತುಂಬಿ ಕವಿತೆ ಬರೆಯಬೇಕು

    ವಾಸುದೇವ ನಾಡಿಗರಿಗೆ ಗದ್ದೆಯ ಕೃಷಿಗೂ ಕಾವ್ಯಕೃಷಿಗೂ ಏನೂ ವ್ಯತ್ಯಾಸಗಳಿಲ್ಲ. ಕವಿಯಲ್ಲೊಂದು  ಸರಾಸರಿ ಎಂಟತ್ತು ಅಡಿಯ ಚಚ್ಚೌಕ ಗದ್ದೆಯಿದೆ. ಅದರಲ್ಲಿ ಮೆಂತೆ, ಕೊತ್ತಂಬರಿ, ಹಸಿಮೆಣಸು, ತುಳಸಿ, ದೊಡ್ಡಪತ್ರೆ, ಕಾಕಡ ಮಲ್ಲಿಗೆ ಎಲ್ಲವನ್ನೂ ಬೆಳೆದಿದ್ದಾನೆ (ನನ್ನ ಪುಟ್ಟ ಗದ್ದೆ ಮತ್ತು ನನ್ನ ಕವಿತೆ). ಕವಿತೆಯೂ ಪುಟ್ಟ ಗದ್ದೆಯ ತೆರನಾಗಿಯೇ ಪುಟ್ಟ ಕ್ಯಾನ್ವಾಸಿನ ಚಿತ್ರವೂ ಇದೆ. ಕವಿಯು ತನ್ನ ತೋಟಕ್ಕೆ,

    ಬರುವವರನೂ ಮಿತಗೊಳಿಸಿದ್ದೇನೆ
    ಹೋದವರ ಖಾತರಿ ಇರದ ವಿಳಾಸಗಳ ಅಳಿಸಿ
    ಹೆಚ್ಚು ಬಿಸಿಲಿಲ್ಲ ತುಸುವೂ ಅಸಹನೆ ಇಲ್ಲ
    ಸಹನೆ ಬಿಡಿಸಿದ ಚಿತ್ರಗಳು ಎಂದೂ ಮಾಸುವುದಿಲ್ಲ

    ಎನ್ನುತ್ತಲೇ ಎಂಟಡಿ ಚಚ್ಚಾಕದ ನನ್ನ ಗದ್ದೆ, ಪುಟ್ಟ ಕ್ಯಾನ್ವಾಸಿನ ಚಿತ್ರ ಗುಬ್ಬಚ್ಚಿಗೆ ಅರಮನೆಯ ಪಲ್ಲಂಗದ ಅಗತ್ಯವೂ ಇಲ್ಲ ಎಂದುಬಿಡುತ್ತಾರೆ.

    ʼಈ ಬೆಳಗುಗಳಲಿʼ ಕವಿತೆಯಲ್ಲಿ ದೀಪಹಚ್ಚುವ ರೂಪಕದ ಮೂಲಕ ಕವಿತೆ ಹೊಸೆಯುವುದನ್ನು ವರ್ಣಿಸಲಾಗಿದೆ. ಪ್ರತಿನಿತ್ಯ ಬತ್ತಿಯ ಮುಖವ ಚಿವುಟಿ ಕೊಡವಿ ದೀಪ ಉರಿಸುವಂತೆ ಕವಿಯೂ ಪ್ರತಿನಿತ್ಯ ಕವಿತೆ ಹೆಣೆಯುತ್ತಾನೆ.

    ದೀಪದ ಸುತ್ತ ಸುರತವಾಡಿ ಬಿದ್ದಂತೆ ರೆಕ್ಕೆಹುಳಗಳ ಸಾವು
    ಪ್ರಣತಿಯ ತುಂಬೆಲ್ಲ ಸುಟ್ಟ ಶವದ ವಾಸನೆ
    ಇರುಳುಗಳಲಿ ಕಂಡ ಕಪ್ಪು ಕನಸುಗಳ ಕೊಳ
    ಮೈಸುಟ್ಟುಕೊಂಡು ಬಿದ್ದ ಬೆಂಕಿ ಕಡ್ಡಿ ಬಣವೆ
    ಜೋತಾಡಿಕೊಂಡು ಉದುರಿದ ಪರಿಮಳದ ಬೂದಿ
    ಏನಾದರೂ ಬತ್ತಿ ಮೂತಿ ಕಪ್ಪಾಗುವುದು
    ತಪ್ಪುವುದಿಲ್ಲ ಉರಿದುರಿದ ಕವಿತೆ
    ದಣಿದು ಕೂತ ಅವೇಅವೇ ರೂಪಕಗಳು
    ಎಷ್ಟೊಂದು ಪದಗಳು ಹೋರಾಡಿದವು
    ಆ ಒಂದು ಅರ್ಥದ ಬೆಳಕಿಗೆ

    ಒಂದು ಅರ್ಥದ ಬೆಳಕಿಗಾಗಿ ಕವಿಯ ಪದಗಳು ಪ್ರತಿನಿತ್ಯ ಹೋರಾಡುತ್ತವೆ. ನಾಡಿಗರ ಪದಗಳು ಆ ಹೋರಾಟದಲ್ಲಿ ಗೆಲ್ಲುತ್ತವೆ.  ಹಾಗಾಗಿಯೇ ಕವರಿಗೆ ಕವಿತೆ ಹೊಸೆಯುವುದು ಕಷ್ಟದ ಕೆಲಸವಲ್ಲ. ಬದಲಿಗೆ,

    ಉಸಿರಾಡಿದಂತೆ ಸಲೀಸು ಬರೆವ ಕವಿಗೆ
    ಹೆಸರಿನ ಹಂಗೇಕೆ
    ಬರೆದಾದ ಮೇಲೆ ಎದ್ದು ಹೋಗುವ ಪದ
    ಉಳಿದದು ಭಾವ (ಜೀವಗೀತೆ)

    ಈ ಕವಿತೆಯಲ್ಲಿ ಬದುಕೇ ಬಿಟ್ಟುಕೊಟ್ಟಾಗ ಕವಿತೆ ಸೀಮೆ ಸುತ್ತಿ ಬರಲು ಹೊರಡುತ್ತದೆ. ಎಲ್ಲೆಲ್ಲೋ ಅಲೆದಾಡಿ, ಏನೆನೋ ಕಲಿತು, ಎಷ್ಟೆಷ್ಟೋ ಪಳಗಿ, ಯಾವ್ಯಾವುದರಲ್ಲೋ ಬೆರೆತು ಸ್ಪಂದಿಸಿ, ಪಾದ ಸವೆಸಿ ಬಂದಾಗ ಕವಿ ದಣಿಯುತ್ತಾನೆ. ಉರಿಯೊಳಗೆ ನೀರನ್ನು ಬಿತ್ತಿ ಕತ್ತಲಿನ ಜೊತೆ ನಿತ್ಯ ಸಮರಕ್ಕಿಳಿದಿದ್ದ ಕವಿಗೆ ತುಳಿದ ದಾರಿಗಳುದ್ದ ದೀಪಾವಳಿ ಕಂಡಿದೆ. ಹಾಗಾಗಿ ಕವಿತೆಗಳ ಪ್ರತಿಪದಗಳು ಬೇಯುತ್ತಿವೆ ಜೀವಸತ್ಯದ ಕಡೆಗೆ. ಇದರ ಜೊತೆಗೆ ಕವಿಗೆ ಎಲ್ಲವನ್ನೂ ಎದುರಿಸುವ ಧೈರ್ಯವೂ ಸಿದ್ಧಿಸಿದೆ

    ನೀನು ನಿಷ್ಕರುಣಿ ಆಗು ಬದುಕೇ
    ಕವಿ ಕರುಣೆ ಸೂಸುತ್ತಾನೆ
    ನೀನು ನಿರ್ಮೋಹವ ಒಡ್ಡು ಜೀವನವೆ
    ಕವಿ ಮೋಹವ ಸುರಿಸುತ್ತಾನೆ
    ಕವಿತೆ ಬರಿ ಪದವಲ್ಲ ಜೀವ ತೇರಿಗೆ ಬಿಗಿದ ಹಗ್ಗದೆಳೆತ 

    ಜಗತ್ತು ನೆಮ್ಮದಿಯಿಂದ ಮಲಗಿ ನಿದ್ರಿಸುತ್ತಿದ್ದರೂ ಕವಿಗೆ ಮಾತ್ರ ನಿದ್ದೆಯಿಲ್ಲ. ಆತ ಮಲಗಿದ ಮೇಲೂ ಕವಿತೆಯನ್ನೆ ಧ್ಯಾನಿಸುತ್ತಿರುವುದರಿಂದ ಅರೆತೆರೆದ ರೆಪ್ಪೆಗಳಲ್ಲಿ ಕವಿತೆಯದ್ದೇ ಕನವರಿಕೆಯಿರುತ್ತದೆ (ಮಧ್ಯದಿರುಳ ಕವನ) ಕವಿಯ ದೇಹ ಮಾತ್ರ ಮಗ್ಗಲು ಬದಲಾಯಿಸುವದಲ್ಲ, ಯೋಚನೆಯೂ ಕೂಡ ಆವಾಗಾವಾಗ ಮಗ್ಗಲು ಬದಲಾಯಿಸುತ್ತಿರುತ್ತದೆ.

    ಮೌನವನು ಹೊತ್ತುಕೊಂಡ ಉಸಿರ ಕಡಲು
    ಎದೆಮೇಲೆ ನೆಟ್ಟ ಭರವಸೆಯ ಸಸಿ
    ಬೇರ ಇಳಿಸಿ ಇಳಿಸಿ ಹೊಕ್ಕಾಗಲೆಲ್ಲ
    ಕಾಲದ ಕ್ರೂರ ಗಾಳಿ ರಭಸಕೆ ಮಣ್ಣು ಬಿರಿವ ನೋವು ಮಧ್ಯದಿರುಳ ಕವಿತೆಯ ತುಂಬಾ
    ಹಗಲು ಒತ್ತಿಸಿಕೊಂಡ ಹೆಜ್ಜೆಗಳ ಸಾಲು

    ತನ್ನ ಕನಸುಗಳನ್ನು ಒಳಕೋಣೆಯಲ್ಲಿ ನೇತುಹಾಕಿಕೊಂಡು ಕಾಯುತ್ತಿರುವ ಕವಿಯು ಮಧ್ಯದಿರುಳ ಕವಿತೆಯ ತುಂಬಾ ಹಗಲು ತುಂಬಿಸಿದ ಫಸಲಚೀಲಗಳ ಎಣಿಕೆ ಮಾಡುತ್ತಾನೆ. ಹಾಗಾಗಿ ‘ನೆನಪುಗಳಲಿ ಅಲೆವ ಹೃದಯಗಳಿಗೆ ಹಗಲು ಮತ್ತು ಇರುಳು ಎಂಬುದು ಕೇವಲ ಪದಗಳು’ ಎನ್ನುತ್ತಾನೆ.

    ʼಕವಿಯೊಬ್ಬನ ಸಾವುʼ ಕವಿತೆ ಜೀವನದ ನಶ್ವರತೆಯ ಬಗ್ಗೆ ಮಾತನಾಡುತ್ತಲೇ ಕವಿತೆಯ ಅನನ್ಯತೆಯ ಬಗ್ಗೆಯೂ ಮಾತನಾಡುತ್ತದೆ. ನೆಲಕೆ ಉರುಳಿಬಿದ್ದ ಮರ, ಬಾಗಿಲ ಸಂಧಿಗೆ ಜಜ್ಜಿ ಹೋದ ಜಿರಳೆ, ಟಯರಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ನಾಯಿ ಎಲ್ಲದರಲ್ಲೂ ಜೀವ ಇತ್ತು. ಆದರೆ ಕವಿಯೊಬ್ಬನ ಸಾವಿಗೆ ಕವಿತೆ ಮರುಗುವುದು ಯಾಕೆಂದರೆ, ಕವಿ ಪದಗಳ ಚೌಕಾಬಾರ ಆಡುತ್ತಿದ್ದ. ಅಕ್ಷರದ ಉಸಿರನ್ನು ಅರ್ಥಗಳ ದಾವೆಗೆ ಒಡ್ಡುತ್ತಿದ್ದ. ಹಾಗಾಗಿ,

    ನೋಡಿ ನೋಡಿ ನೋಡಿ ಅಲ್ಲಿ
    ಕವಿಯೊಬ್ಬನ ಸಾವಿನಿಂದ
    ಎಷ್ಟೊಂದು ಪದಗಳು ಅನಾಥವಾಗಿಬಿಟ್ಟವು
    ಅಸೀಮ ಆಕಾಶದ ಇರುಳ ನಕ್ಷತ್ರಗಳು ಸಭೆ ಸೇರಿದವು
    ತಣ್ಣಗೆ ಮಲಗಿಬಿಟ್ಟವನಿಗೂ
    ಜೋಗುಳ ಹಾಡುತ್ತಿದೆ ಕಾಲ
    ನಶ್ವರದ ತುಟಿಯ ಮೇಲೆ ಮತ್ತೆ ಅದೇ ಮುಗುಳ್ನಗು

    ಎನ್ನುತ್ತಾ ಕವಿತೆ ಮೌನಕ್ಕೆ ಜಾರುತ್ತದೆ.

    ಕವಿಯ ಪ್ರಾಮಾಣಿಕತೆ, ಕವಿತೆಯ ಮೇಲಿನ ಉತ್ಕಟ ಪ್ರೀತಿ, ಅವನ ಸರಳತನ ಇವುಗಳು ʼದೌರ್ಬಲ್ಯ ಅಲ್ಲʼ ಕವಿತೆಯಲ್ಲಿ ಕಾಣಿಸಿದೆ. ಆ ಕಾರಣದಿಂದಲೆ ತನ್ನ ವಿನೀತತೆಯನ್ನು ನಾಟಕ ಎಂದವರಿಗೆ, ಮೃದುತ್ವವನ್ನು ಢೋಂಗಿ ಎಂದವರಿಗೆ, ಸೌಜನ್ಯವನ್ನು ಸಮಯಸಾಧಕತನ ಎಂದವರಿಗೆ, ತಾಳ್ಮೆಯನ್ನು ವ್ಯಾಪಾರ ಎಂದವರಿಗೆ, ಮನುಷ್ಯತ್ವವನ್ನು ವಿದೂಷಕ ಎಂದವರಿಗೆ, ಭಾವುಕತನವನ್ನು ಹುಚ್ಚು ಎಂದವರಿಗೆ, ಎದೆಮಿಡಿತವನ್ನು ರೋಗ ಎಂದವರಿಗೆ, ಹಚ್ಚಿಕೊಳ್ಳುವಿಕೆಯನ್ನು ವ್ಯಸನ ಎಂದವರಿಗೆ, ಸ್ನೇಹ ಪರತೆಯನು ಅಸಹಜ ಎಂದವರಿಗೆ, ಮಿಡುಕುವ ಪರಿಯನು ವಿಕ್ಷಿಪ್ತ ಎಂದವರಿಗೆ ತನ್ನ ಜೊತೆ ಮುಖಾಮುಖಿಯಾಗುವಂತೆ ʼಓಪನ್ ಚಾಲೆಂಜ್ʼ ಹಾಕುತ್ತಾನೆ.

    ಒಮ್ಮೆ ಬನ್ನಿ ಮಾತಿಗೆ ಕೂಡಿ
    ಮುಖಕೆ ಮುಖ ಕೊಟ್ಟು ನೋಡಿ
    ಕಣ್ಣಲಿ ಕಣ್ಣಿಟ್ಟು ಓದಿ
    ಪದಗಳನು ಷೋಕಿಗೆ ಬಳಸದ ನಾನು
    ಪದಗಳ ಜೊತೆಗೆ ಚೆಲ್ಲಾಟ ಆಡಲಾರೆ 

    ಕವಿಗೆ ತನ್ನನ್ನು ತೆಗಳುತ್ತಿರುವವರಿಗೆ ಕವಿತೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವ ತಾಳ್ಮೆ ಮತ್ತು ಮುಖಕ್ಕೆ ಮುಖ ಕೊಟ್ಟು ಮಾತನಾಡುವ ಶಕ್ತಿ ಇಲ್ಲವೆಂಬುದರ ಅರಿವಿರುವುದರಿಂದ,

    ನಿಮ್ಮ ಶಂಕೆಯ ಕನ್ನಡಕ
    ನಿಮ್ಮ ಪೂರ್ವಾಗ್ರಹದ ವೇಷ
    ನಿಮ್ಮ ಅರೆಬರೆ ಅರಿವಿನ ಅರಿವೆ
    ನಿಮ್ಮ ವಿಷ ಮೆತ್ತಿಕೊಂಡ ತುಟಿ
    ತೆರೆದು ಕಳಚಿ ಬಿಸುಟು ಒರೆಸಿಕೊಂಡು ಬನ್ನಿ
    ನಿಮ್ಮ ಎದುರಿಗೆ ನಿಂತವನ ಜೀವ
    ಮತ್ತೆ ರೆಕ್ಕೆ ಜಾಡಿಸಿಕೊಂಡು ನಿಮ್ಮ ಎದೆಯಲಿ ಗೂಡುಕಟ್ಟದಿದ್ದರೆ ಹೇಳಿ

    ಎನ್ನುತ್ತಾನೆ.  ಅಪ್ಪಟ ಕವಿಯೊಬ್ಬನಿಂದ ಮಾತ್ರ ಇಂತಹ ಸವಾಲು ಎಸೆಯುವುದಕ್ಕೆ ಸಾಧ್ಯ. ಇಂತಹ ಕವಿ ತಾನು ನಡೆದು ಬಂದಿರುವ ಹಾದಿಯ ಬಗ್ಗೆಯೂ ಹೇಳುತ್ತಾನೆ.

    ತುಳಿವ ದಾರಿಗಳೇನೂ ಮೃದುವಲ್ಲ
    ಉಸಿರಿನ ಬುಟ್ಟಿ ಹೆಣೆಯುವ ಇವನು
    ಕೂತಕೂತಲೇ ಕರುಣೆಗಳ ಹಾಸುತ್ತಾನೆ
    ನದಿಗಳನ್ನು ಹೊಗಿಸಿಕೊಂಡು ಕಡಲಾಗುತ್ತಾನೆ
    ಕಡಲುಗಳ ಹೊದ್ದುಕೊಂಡು ಮುಗಿಲಾಗುತ್ತಾನೆ
    ಭೂಮಿಯೇ ತಾನಾಗಿ ದಣಿವವನ ಬಾಳಲಿ
    ಒಬ್ಬಂಟಿ ಆಗಿ ನಿಲ್ಲುತ್ತಾನೆ  (ಇಂಥವನನು ಕಂಡಿದ್ದರೆ ಹೇಳಿ)

    ತನ್ನ ಕಾವ್ಯಯಾನದಲ್ಲಿ ಎನೇನನ್ನೋ ಎದುರಿಸಿದ ಕವಿ ಈಗ ಬಂದರಿಗೆ ಬಂದು ನಿಂತಿದ್ದಾನೆ. (ಬಂದರಿಗೆ ಬಂದ ಹಡಗು) ಹೀಗೆ ಬರುವ ದಾರಿಯಲ್ಲಿ ಆತ ಅಸಂಖ್ಯಾತ ಜನರನ್ನು ಭೇಟಿಯಾಗಿದ್ದಾನೆ. ಅನೇಕ ಸ್ಥಳಗಳನ್ನು ಸಂದರ್ಶಿಸಿದ್ದಾನೆ. ಪ್ರಕೃತಿಯ ಶ್ರೀಮಂತಿಕೆಗೆ ಕಣ್ಣಾಗಿದ್ದಾನೆ. ಅನುಭವಿಸಿದ ನೋವುಗಳಿಗೆ ಕಣ್ಣೀರಾಗಿದ್ದಾನೆ. ಹಲವು ಜನರ ತುಳಿತಕ್ಕೆ ಒಳಗಾಗಿದ್ದಾನೆ. ಅನೇಕ ಇರುಳು ಹಗಲುಗಳನ್ನು ದಾಟಿ ಬಂದು ಬಂದರಿಗೆ ನಿಂತ ಹಡಗಾಗಿದ್ದಾನೆ. ಮಾತ್ರವಲ್ಲ, ಕವಿಯಲ್ಲಿದ್ದ ಹಾಜರಾತಿ ಪುಸ್ತಕ ತೆರೆನೀರಿಗೆ ಒದ್ದೆಯಾಗಿದೆ. ಹಾಗಾಗಿ ವಾಸುದೇವ ನಾಡಿಗರು, ʼನನ್ನ ಮೌನ ಮೊಗ್ಗುಗಳೆಲ್ಲ ರೂಪಕಗಳ ಸ್ನೇಹ ಮಾಡಿದೆ ಅರಳಿದ ಹೂಪಕಳೆಗಳಲಿ ಬಾಳು ಚದುರಿದೆʼ (ಪದ ಧ್ಯಾನ) ಎನ್ನತ್ತಾರೆ; ‘ಕವಿತೆಗಳು ಬರೀ ಕವಿತೆಗಳಲ್ಲ ಕಾಲಕೆ ನಾನು ಕೊಡುವ ಉತ್ತರಗಳು’ (ನಾನು ನನ್ನ ಕವಿತೆ ಮತ್ತು ಕಾಲ) ಎನ್ನುತ್ತಾರೆ; ʼಕವಿತೆಯಲ್ಲಿ ಅರ್ಥಹುಡುಕದಿರು ನೀನು ಅರ್ಥವಾದ ಮೇಲೆ ಯಾರಿಗೆ ಯಾರೂ ಇಲ್ಲ’ (ಅರ್ಥ ಹುಡುಕದಿರು) ಎಂದೂ ಉದ್ಗರಿಸಿದ್ದಾರೆ.

    ಬಂದರಿಗೆ ಬಂದ ಹಡಗು ಸಂಕಲನದ ʼಸರಳರೇಖೆಯಂತಲ್ಲ ಬಾಳುʼ ಕವಿತೆ ಬದುಕಿನ ಬಹುದೊಡ್ಡ ರಹಸ್ಯವನ್ನು ಸರಳವಾಗಿ ನಿರೂಪಿಸುವ ಕವಿತೆ. ಕಾಳಜಿಗಳನ್ನು ಸಂತೆಯಲಿ ಮಾರಲಾಗುವುದಿಲ್ಲ, ಸಾಂತ್ವನಗಳನ್ನು ತರಕಾರಿಯಂಗಡಿಲಿ ಪೇರಿಸಿಟ್ಟಿಲ್ಲ. ಒಲವು-ಸ್ನೇಹ-ಪ್ರೇಮಗಳನ್ನು ಯಾರಿಗೆ ಯಾರೂ ಕಲಿಸಲಾಗುವುದಿಲ್ಲ ಎನ್ನುತ್ತಾರೆ ನಾಡಿಗರು. ಮುಂದುವರಿದು,

    ಮುಳ್ಳಕಂಟಿ, ಪೊದೆಗಳನ್ನು ತರಿದು ಸರಿಯದೆ ಇದ್ದರೆ
    ದಾರಿ ತೆರೆದುಕೊಳ್ಳುವುದಿಲ್ಲ ದಿವ್ಯತೆ ಒಲಿಯುವುದಿಲ್ಲ
    ಎದೆಗೆ ಎದೆ ಮಿಡಿವ ನಾಡಿನಲಿ ನೋವು ಹಾಯುವುದಿಲ್ಲ
    ಬೇಡಿ ದಯನೀಯ ಬಯಸಿ ತರಿಸಿಕೊಂಡದ್ದು ಬೆಲೆಯಿಲ್ಲ

    ಎನ್ನುತ್ತಾರೆ. ನಿರೀಕ್ಷೆಗಳಲಿ ಮುಪ್ಪಡರುವ ಜೀವಕೆ ಬದುಕು ಹೂವಿನ ಹಾಸಿಗೆಯೂ ಹಿತವಲ್ಲ. ಯಾರ ಜೀವಕೆ ಯಾರೂ ಜವಾಬ್ದಾರರಲ್ಲ ಎಂಬುದನ್ನು ನೆನಪಿಸುತ್ತಾ ‘ಮಗು ನೀಟಾಗಿ ಸ್ಲೇಟಿನ ಮೇಲೆ ಎಳೆದ ಸರಳರೇಖೆಯಲ್ಲ ಬಾಳು’, ʼನೀರಲಿ ಕಾಗದದ ದೋಣಿ ಬಿಡುವಂತೆ ಸರಳರೇಖೆಯಂತಲ್ಲ ಬಾಳು’, ʼಚೌಕಾಬಾರ ಆಡಲು ಸೇರಿದ ಮಕ್ಕಳು ಎಳೆವ ಸರಳ ಗೆರೆಗಳಂತಲ್ಲ ಬಾಳುʼ ಎಂಬುದನ್ನು ಪ್ರತಿಪಾದಿಸುತ್ತದೆ.

    ʼಹಚ್ಚಿಕೊಳ್ಳುವುದುʼ ಎಂಬ ಕವಿತೆಯು ಉಗುರಿಗೆ ಬಣ್ಣ, ಅಂಗೈಗೆ ಮೆಹಂದಿ, ಕಣ್ಣಿಗೆ ಕಾಡಿಗೆ, ಮುಖಕೆ ಪೌಡರು, ಗೋಡೆಗೆ ಡಿಸ್ಟಂಪ‌ರ್‌, ತಲೆಗೆ ಎಣ್ಣೆ, ಹೊಸ್ತಿಲಿಗೆ ಕೆಮ್ಮಣ್ಣು, ಬಾಗಿಲಿಗೆ ಕುಂಕುಮ, ಮೈಗೆ ಪರಿಮಳ, ಕೆನ್ನೆಗೆ ಹಳದಿ ಹಚ್ಚಿಕೊಂಡಂತೆ ಅಲ್ಲ ಬದುಕನು ಹಚ್ಚಿಕೊಳ್ಳುವ ಪರಿ ಎಂದು ಆರಂಭವಾಗುತ್ತದೆ. ಎದೆಯನು ಕೊರೆಸಿಕೊಂಡು ಹೃದಯದೊಳಗೆ ಇಳಿಸಿಕೊಳ್ಳುವ ಜೀವಕೆ ಮಾತ್ರ ಹಚ್ಚಿಕೊಳ್ಳುವುದು ಸರಳವಲ್ಲ ಎಂಬುದು ಗೊತ್ತಿರುತ್ತದೆ. ಹಚ್ಚಿಕೊಳ್ಳುವ ಮನಸಿಗೆ ನೆಪದ ಹಂಗಿಲ್ಲ ಎನ್ನುತ್ತಲೇ,

    ಗಿಡವನ್ನು ಹಚ್ಚಿಕೊಂಡ ಗಾಳಿ
    ಗಾಳಿಯನು ಹಚ್ಚಿಕೊಂಡ ಪರಿಮಳ
    ಪರಿಮಳವನು ಹಚ್ಚಿಕೊಂಡ ಪತಂಗ
    ಪತಂಗವನು ಹಚ್ಚಿಕೊಂಡ ಆಕಾಶ
    ಆಕಾಶವನು ಹಚ್ಚಿಕೊಂಡ ಇಳೆ
    ಇಳೆಯನು ಹಚ್ಚಿಕೊಂಡ ಬೇರು
    ಬೇರನ್ನು ಹಚ್ಚಿಕೊಂಡ ನೀರು
    ನೀರಿಗೆ ಋಣಿಯಾದ ಗಿಡ ಎಲ್ಲವ ಹಚ್ಚಿಕೊಂಡಿತು
    ಹಚ್ಚಿಕೊಳ್ಳುವ ಜೀವವ ನೋಡಿ ನಗುವ ಕೆಲವರು

    ಸುಟ್ಟು ಕೊಳೆತು ಹೋಗುವ ದೇಹವನು ಮಾತ್ರ ಹಚ್ಚಿಕೊಂಡಿದ್ದಾರೆ ಎನ್ನುತ್ತಾ ಮೌನವಾಗುತ್ತದೆ. ಈ ಕವಿತೆಗೆ ಹಲವು ಅರ್ಥಸಾಧ್ಯತೆಗಳನ್ನು ಹೊಮ್ಮಿಸಬಲ್ಲ ಶಕ್ತಿ ಇದೆ. ಚರಮ ಸತ್ಯ ಕವಿತೆ ಬದುಕಿನ ವಾಸ್ತವವನ್ನು ಬಿಚ್ಚಿಡುತ್ತಾ ʼಇಲ್ಲಿ ಯಾರಿಗೂ ಏನೂ ಗೊತ್ತಿಲ್ಲ ಎಂಬುದೊಂದೆ ಸತ್ಯʼ ಎಂಬುದನ್ನು ಸಾರುತ್ತದೆ.

    ‘ಒಂದು ಕತೆ’ ಕವಿತೆ ಒಬ್ಬೊಬ್ಬರ ಬದುಕಿಗೆ ಒಂದೊಂದು ನೋವುಗಳು ಎನ್ನುತ್ತದೆ. ಈ ಕವಿತೆಯಲ್ಲಿ ಪುಟ್ಟ ಬೆಕ್ಕಿನ ಮರಿಯನ್ನು ಹಾವೊಂದು ಕಚ್ಚಿ ಸಾಯಿಸಿದೆ. ತಾಯಿ ಬೆಕ್ಕು ಇಲ್ಲವಾಗಿರುವ ತನ್ನ ಕರುಳ ಕುಡಿಯನ್ನು ಅರಸುತ್ತಾ ತಿರುಗಾಡುತ್ತದೆ. ಅದು ಹುಡುಕುತ್ತಿರುವುದು ಮರಿಗೋ ಹಾವಿಗೋ ಎನ್ನುವುದರ ಸ್ಪಷ್ಟತೆ ಕವಿಗೆ ಆಗಿಲ್ಲ. ಆದರೆ ಹಾವು ತಾನು ಇಟ್ಟು ಬಂದಿರುವ ಮೊಟ್ಟೆಗಳ ಚಿಂತೆಯಲ್ಲಿದೆ. ಈ ಸನ್ನಿವೇಶವನ್ನು ನಿರೂಪಿಸುತ್ತಾ ಕವಿ ಮೂಡಿಸುವ ಅರಿವು ಬಹಳ ದೊಡ್ಡದು. ʼಒಂದಿಲ್ಲ ಒಂದು ವೇದನೆಗಳಲೆ ಮುಗಿದು ಹೋಗುತ್ತಿವೆ ಬಾಳುಗಳುʼ. ಈ ವಾಸ್ತವವನ್ನು ತಣ್ಣಗೆ ನಮ್ಮ ಮುಂದಿಟ್ಟು ಮೌನವಾಗುತ್ತಾರೆ.

    ʼಡೈರಿ ಮತ್ತು ಆಷ್ಟ್ರೇʼ ಕವಿತೆ ಗುಲ್ಜಾರರ ಕವಿತೆಯ ಪ್ರೇರಣೆಯಿಂದ ಬರೆದ ಕವಿತೆಯಾಗಿದ್ದು ಹೃದಯದಲ್ಲಿ ಹೆಪ್ಪುಗಟ್ಟಿರುವ ನೋವನ್ನು ವ್ಯಕ್ತಪಡಿಸುತ್ತದೆ. ಕವಿ ತನ್ನ ಡೈರಿಯ ಕೆಲವು ಪುಟಗಳಿಗನ್ನು ಯಾವತ್ತೂ ತಾನು ತೆರೆಯಲೇಬಾರದು ಎಂಬ ಕಾರಣಕ್ಕೆ ಅವುಗಳ ನಡುವೆ ಗೋಂದು ಹಚ್ಚಿಟ್ಟಿದ್ದಾನೆ. ಆ ಪುಟಗಳನ್ನು ತೆರೆದರೆ ಅವು ಕವಿಯ ಕಣ್ಣುರೆಪ್ಪೆಗಳನ್ನು ತೋಯಿಸುತ್ತವೆ ಇಲ್ಲವೆ ಆತನ ರಕ್ತದೊತ್ತಡ ಹೆಚ್ಚಿಸುತ್ತದೆ ಅಥವಾ ಅವನ ಎದೆಯ ಕವಾಟವನ್ನು ಕಿರ್ರೆಂಬ ನೋವಿನಲಿ ತೆರೆಯುತ್ತದೆ. ಹೀಗಿದ್ದರೂ ಆ ನೋವಿನಿಂದ ತನಗೆ ಬಿಡುಗಡೆ ಇಲ್ಲ ಎಂಬುದು ಕವಿಗೆ ಗೊತ್ತಿದೆ. ಅಂಟಿಕೊಂಡಿರುವ ಪುಟಗಳ ಮಧ್ಯೆ ಮರೆಯಾಗಿರುವ ಸತ್ಯ ಆತನನ್ನು ಪ್ರತಿ ಇರಳೂ ತಿವಿದು ಎಬ್ಬಿಸಿ ಹಿಂಸಿಸುತ್ತದೆ. ನೆನಪುಗಳ ಹೊಗೆಸುರುಳಿ ಸುತ್ತಿ ಉಸಿರುಗಟ್ಟಿಸುತ್ತದೆ. ಅದರಿಂದ ಪಾರಾಗಲು ಆತ ಹುಣ್ಣಿಮೆಯ ಚಂದಿರನನ್ನು ಸುಲಿಯುತ್ತ ಸುಲಿಯುತ್ತ ಸಿಪ್ಪೆಯನ್ನು ಆಷ್ಟ್ರೇನಲಿ ತುಂಬುತ್ತಾ ಹೋಗುತ್ತಾನೆ. ಸೀಗರೇಟಿನ ಘಾಟುವಾಸನೆ ಕೋಣೆಯಲ್ಲೆಲ್ಲ ತುಂಬಿ, ಬೆರಳ ಮಧ್ಯೆ ಬಿಸಿ ತಾಕಿದಾಗ,

    ಪುಪ್ಪುಸಗಳಲಿ ಯಂತ್ರ ಕೆಟ್ಟು ನಿಂತ ಹಡಗುಗಳು ಓಲಾಡಿದವು
    ತುಟಿಯೀಚೆ ಭಾವಗೀತೆಗೆ ಬದಲು
    ಹೊಗೆ ಏಣಿಯಾಯಿತು
    ಈಗ ಆ ಏಣಿಯನೇ ಏರಿ
    ಧುಮುಕುವವನಿದ್ದೇನೆ 

    ಎನ್ನುತ್ತಾನೆ. ಕೊನೆಗೆ ಕವಿಯ ಮುಂದೆ ಅಂಟಿಕೊಂಡಿದ್ದ ಡೈರಿಯ ಪುಟಗಳು ಇಕ್ಕಟ್ಟುಗಳಿಂದ ತುಂಬಿಕೊಂಡ ಆಷ್ಟ್ರೇ ಅಗ್ನಿಕುಂಡದ ಹಾಗೆ ತೆರೆದುಕೊಳ್ಳುತ್ತದೆ.

    ಭಗ್ನಪ್ರೇಮದ ಇದೇ ಭಾವ ʼಉರಿಯ ನಾಲಗೆಯ ಮೇಲೆ ಹಿಮದ ಸಾಲುʼ ಕವಿತೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇಲ್ಲಿ ಹೀಗೆ ಅಪಮಾನಗಳೆಲ್ಲ ಪಾಠವಾಗಿವೆ ಎಂದು ಆರಂಭಗೊಂಡ ಕವಿತೆಯು ಕೆಲವು ದಿನಾಂಕಗಳು ಕ್ಯಾಲೆಂಡರಲಿ ಇರಬಾರದಿತ್ತು, ಕೆಲವು ಸಂಜೆಗಳು ಗಗನದಲಿ ಬರಬಾರದಿತ್ತು, ಕೆಲವು ಹೂವುಗಳು ಆ ತೋಟದಲಿ ಆರಳಬಾರದಿತ್ತು, ಕೆಲವು ಕನಸುಗಳು ಹಾಸಿಗೆಗೆ ಅಂಟಬಾರದಿತ್ತು, ಕೆಲವು ತಿರುಗುಗಳಲ್ಲಿ ಹೀಗೆ ನಡೆಯಬಾರದಿತ್ತು, ಕೆಲವು ವೃತ್ತಗಳಲ್ಲಿ ಕಾದು ಕೂಡಬಾರದಿತ್ತು, ಕೆಲವು ಅಧ್ಯಾಯಗಳನು ಶುರುಮಾಡಬಾರದಿತ್ತು ಎನ್ನುವ ವಿಷಾದದ ಭಾವ ಕವಿತೆಯ ಉದ್ದಕ್ಕೂ ಇದೆ. ಯಾಕೆಂದರೆ ಜೀವಾಂಕುರವನು ಹೊಕ್ಕ ಮುಳ್ಳು ಆಟವಾಡುತ್ತಿದೆ, ಬಣ್ಣದ ಮಾತುಗಳೆಲ್ಲ ಶಿಲುಬೆ ಮೊಳೆಯಾಗಿದೆ, ನಂಬಿ ಬೆಟ್ಟಕೆ ಗುದ್ದಿಕೊಂಡ ಹಣೆಬರಹ ಸೀಳಿದೆ, ಆತ್ಮಾಂತಃಕರಣದ ಹಾಲು ಗಮಲು ಒಡೆದು ಹುಳಿಯಾಗಿದೆ, ಪಶ್ಚಾತ್ತಾಪ ಹೆಣೆದ ಬೆಂಕಿಬಲೆ ಎದೆ ಬರಡಾಗಿಸಿದೆ, ನಿರೀಕ್ಷೆಗಳೆಲ್ಲ ಹಾಸ್ಯದ ಅಧ್ಯಾಯಗಳಾಗಿವೆ, ಕಲ್ಲಾಗುವುದೇ ಬದಲಾವಣೆಯೆಂಬ ಪಾಠ ಕವಿಗೆ ಅರಿವಾಗಿದೆ. ಮಿಡಿವ ನರನಾಡಿಗಳೆಲ್ಲ ಟಾರಿನ ರೋಡಾಗಿದೆ, ಹಾಗಾಗಿ ಕ್ಷೇಮಕುಶಲ ಕೇಳುವುದೂ ಅಸಹಜ ತೆವಲು ಎಂಬುದರ ಅರಿವಿನಿಂದ ʼಪ್ರೇಮ ಸೃಷ್ಟಿಸಿದ ನರಕದಲಿ ಈಗ ಘಾಸಿತ ಆತ್ಮʼ ಎಂದು ಕವಿ ಉದ್ಗರಿಸುತ್ತಾನೆ.  ಆದರೆ ತನ್ನ ಈ ಭಗ್ನ ಮನಸ್ಸಿನಿಂದ ಹೊರಬರಬೇಕು ಎನ್ನುವ ಯೋಚನೆ ಕವಿಗೆ ಇದೆ. ಅದಕ್ಕಾಗಿಯೇ ʼಜೀವಭಿತ್ತಿʼ ಕವಿತೆಯಲ್ಲಿ ʼನಿನ್ನೆಯ ಕೆಲನೆನಪುಗಳ ಇರುಳುಗಳಲಿ ನಾಳೆಯ ಕನಸ ಗರ್ಭ ಕಟ್ಟದಿರಲಿʼ ಎಂದಿದ್ದಾರೆ.

    ಕಾಲನ ಹೊಡೆತಕ್ಕೆ ಸಿಲುಕಿ ಕಳೆದುಹೋಗಿರುವ ಪ್ರೀತಿಯ ಅನ್ವೇಷಣೆಯನ್ನು ‘ಪುರಾತನ ಕಟ್ಟಡ’ ಎನ್ನುವ ಕವಿತೆ ಮಾಡುತ್ತದೆ. ಯವ್ವನದಲ್ಲಿ ಎದ್ದಿದ್ದ ಮನೆಯ ಹಳೆಯ ವೈಭವವನ್ನು ಸೊಬಗನ್ನು ಕವಿತೆ ನೆಪಿಸಿಕೊಳ್ಳುತ್ತದೆ. ಅಂತಹ ಮನೆ ಕುಸಿಯಬಾರದು ಎಂಬ ಕಾಳಜಿ ಕವಿಯಲ್ಲಿ ದಟ್ಟವಾಗಿದ್ದರೂ ಯಾವುದೋ ಕಾರಣದಿಂದ ಆ ಮನೆ ಕುಸಿದು ಹೋಗಿದೆ. ಹಾಗಾಗಿ ಕವಿತೆ

    ಇದ್ದಕ್ಕಿದ್ದಂತೆ ಕುಸಿದ ತೊಲೆಕಂಬ ಸರಿದ ಬುನಾದಿ
    ಎಲ್ಲಿ ತಪ್ಪಿಹೋಯಿತೋ ರಾಗದ ತಂತಿಮೀಟು
    ಬಿದ್ದ ಆ ಪುರಾತನ ಯವ್ವನದ ನಡುಮನೆ
    ಪಡಸಾಲೆ ಕೋಣೆ ಒಳಕೋಣೆ ತಳಕೋಣೆ
    ಏರುಕೋಣೆ ಇಳಿವಕೋಣೆ ಕಿರುಕೋಣೆ
    ವೃದ್ಧಮನಸೊಂದು ಅವಶೇಷಗಳ ಆಯುತ್ತಿದೆ

    ಎಂಬುದಾಗಿ ವಿಷಾದಪಡುತ್ತದೆ.

    ವಾಸುದೇವ ನಾಡಿಗರ ಬಹುತೇಕ ಕವಿತೆಗಳು ಭಾವಜೀವಿಯೊಬ್ಬನ ಸ್ವಗತ ಗೀತೆಗಳು. ಅವರು ತಮ್ಮ ಕಣ್ಣಮುಂದಿನ ಪ್ರಪಂಚವನ್ನು ಭಾವದ ಕಣ್ಣುಗಳಿಂದ ಕಾಣುವುದರಿಂದ ಸಣ್ಣ ಸಣ್ಣ ವಿಷಯಗಳನ್ನೂ ಗುರುತಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ನೀರಿಗೆ ಬಿದ್ದ ಇರುವೆ ಎಲೆಯ ಸಹಾಯದಿಂದ ಮೇಲೆರುವ ಸಾಹಸ (ಇರುವೆ ಎಲೆ ಮತ್ತು ನದಿ), ಪಾರ್ಥನಿಗೆ ಹೊರಳುವ ಪುಟ್ಟ ರೆಪ್ಪೆ, ಹೊಳೆವ ಪಾಪೆಗಳ ಮಿಂಚುವ ಕಣ್ಣು ಕಂಡಿದೆಯಷ್ಟೇ ಹೊರತು ಹಕ್ಕಿಯೊಳಗಿನ ಜೀವ ಕಾಣದೇ ಹೋಯಿತು ಎನ್ನುವ ವಿಷಾದ(ದ್ರೋಣರ ಪ್ರಯೋಗಶಾಲೆ), ಒಂದೇ ಒಂದು ಹನಿ ಇಬ್ಬನಿಯಲಿ ಮೀಯುವ ಸೂಕ್ಷ್ಮತೆ(ಮೀಯುವಾಟ), ಕರ್ಕಶ ಕಿರುಚು ಧ್ವನಿ ಹೊರಡಿಸುತ್ತಿದ್ದ ಬಿದಿರು ಮುರಲಿಯಾಗುವ, ಮೃದ್ವಂಗಿಯ ಒರಟು ಚಿಪ್ಪು ಪಾಂಚಜನ್ಯವಾಗುವ ವಿಸ್ಮಯ(ಕೊಳಲು ಶಂಖ ಮತ್ತು ಇದಾನಲ್ಲ ಆ ಅವನು), ʼಆ ಹಕ್ಕಿʼ ಕವಿತೆಯಲ್ಲಿ ಕಾಣಿಸುವ ಆಶಾವಾದ,  ಚಾರ್ಲಿ ಚಾಪ್ಲಿನ್ ನ ನಗುವ ಹಿಂದಿನ ನೋವುಗಳು, ಕಲಾವಿದನೊಬ್ಬ ರಚಿಸಿದ ಚಿತ್ರದ ಸೌಂದರ್ಯವನ್ನು, ಅದ್ಭುತಗಳನ್ನು ವರ್ಣಿಸುತ್ತಲೇ ಚಿತ್ರದ ಭಾರ ಹೊತ್ತ ಮೊಳೆಯನು ಯಾರೂ ಗಮನಿಸಲಿಲ್ಲ ಎಂಬ ವಿಷಾದ (ಹೊತ್ತ ಹೆಗಲು), ಬೆಟ್ಟಕ್ಕೆ ಚಳಿಯಾದರೆ ಇಳೆಯನೇ ಎಳೆದುಕೊಳ್ಳಬೇಕು(ನಂತರ) ಎನ್ನುವ ಸಾಲು, ಎಲ್ಲವನ್ನು ಗೆದ್ದ ದೊರೆಗೆ ಹೆಣ್ಣಿನ ಮನಸ್ಸು ಗೆಲ್ಲಲಾಗದ ಅಸಹಾಯಕತೆ (ದೊರೆಯ ಸಿರಿ) ವಾಸುದೇವ ನಾಡಿಗರ ಕವಿ ಹೃದಯದ ಸೂಕ್ಷ್ಮತೆಯನ್ನು ತೆರೆದಿಡುತ್ತದೆ.

    ಒಟ್ಟಿನಲ್ಲಿ ವಾಸುದೇವ ನಾಡಿಗರ ಕವಿತೆಗಳು ಕವಿತೆಗಳು ಹೇಳಬೇಕಾದ ಭಾವಗಳನ್ನು ಯಾವುದೇ ಗೊಂದಲಗಳಿಲ್ಲದೆ ಖಚಿತವಾಗಿ ಹೇಳುತ್ತವೆ ಮತ್ತು ಎಷ್ಟು ಹೇಳಬೇಕೋ ಅಷ್ಟನ್ನೇ ಹೇಳುತ್ತದೆ. ಕಾವ್ಯದ ಮೇಲೆ ಉತ್ಕಟ ಪ್ರೀತಿಯಿಟ್ಟುಕೊಂಡ ಕವಿಯೊಬ್ಬನಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಹುಟ್ಟಬಹುದಾದಂಥ ಕವಿತೆಗಳಿವು ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ.

    • ಡಾ. ರವಿಶಂಕರ ಜಿ.ಕೆ., ಕೆದುಂಬಾಡಿ ಮನೆ, ಪಾಣಾಜೆ ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು, ದ.ಕ. 574259

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ನೂರಾರು ಲೇಖಕರ ನೂರಾರು ಕತೆಗಳು’ ಪುಸ್ತಕ ಬಿಡುಗಡೆ
    Next Article ಮಂಗಳೂರಿನಲ್ಲಿ ‘ಮತಪೆಟ್ಟಿಗೆ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.