ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-7’ ಕಾರ್ಯಕ್ರಮವು ಕಂಕನಾಡಿ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ದಿನಾಂಕ 28-09-2023ರಂದು ನಡೆಯಿತು. ದೀಪ ಬೆಳಗಿಸಿ ‘ಆಟ-ಕೂಟ–ನಲಿಕೆ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಚಿಲಿಂಬಿ ಸಾಯಿ ಮಂದಿರದ ಮುಕ್ತೇಸರರಾದ ಶ್ರೀ ವಿಶ್ವಾಸ ಕುಮಾರ್ ದಾಸ್ ಇವರು “ತುಳುವನ್ನು ನಾವು ಬಹಳ ಹಚ್ಚಿಕೊಂಡು ಕೃಷಿ ಮಾಡುವ ಭಾಷೆ, ನಮ್ಮ ಮಾತೃಭಾಷೆಯನ್ನು ನಾವೇ ಕಾಪಾಡಿಕೊಂಡು ಬರಬೇಕು. ಹಾಗಾಗಿ ನಾನು ತುಳು ಭಾಷಾ ಕಾರ್ಯಕ್ರಮಗಳಿಗೆ ಕೂಡಲೇ ಸ್ಪಂದಿಸುತ್ತೇನೆ. ತುಳು ಭಾಷೆ, ಸಂಘಟನೆಗಳಿಗೆ ನಮ್ಮ ದೇವಾಲಯದಲ್ಲಿ ಬಹಳ ಅವಕಾಶ ಮಾಡಿಕೊಟ್ಟು, ತುಳು ಕೂಟದ ಸರಣಿ ಕಾರ್ಯಕ್ರಮವನ್ನು ನಮ್ಮಲ್ಲಿಯೂ ನಡೆಸಲು ಈ ಮೂಲಕ ಆಹ್ವಾನಿಸುತ್ತೇನೆ. ನನ್ನ ಧರ್ಮಪತ್ನಿ ಲಾವಣ್ಯ ದಾಸ್ ಕೂಡಾ ತುಳು ನಾಟಕ, ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶವಿದೇಶಗಳಲ್ಲಿ ಭಾಷಾ ಪ್ರಸರಣಕ್ಕಾಗಿ ಶ್ರಮ ಪಡುತ್ತಿದ್ದಾರೆ. ತುಳುಕೂಟದ ನಿರಂತರ ಐವತ್ತು ವರ್ಷಗಳ ಸಾಧನೆಗಾಗಿ ಕೂಟವನ್ನು ಅಭಿನಂದಿಸುತ್ತೇನೆ” ಎಂದರು.
ಮಾಜಿ ವಿಧಾನ ಸಭಾ ಸದಸ್ಯರಾದ ಶ್ರೀ ಜೆ.ಆರ್. ಲೋಬೊ ಇವರು ಮಾತನಾಡುತ್ತಾ “ಭಾಷಾ ಸಾಮರಸ್ಯತೆಗೆ ತುಳು ಭಾಷೆ ಸಾಕ್ಷಿ. ಈ ತುಳುನಾಡಿನಲ್ಲಿ ಬೇರೆ ಬೇರೆ ಭಾಷಿಗರು ಇಲ್ಲಿ ಬಂದು ತುಳುವರೇ ಆಗಿದ್ದಾರೆ ಮತ್ತು ಅಷ್ಟೇ ವೇಗವಾಗಿ ಈ ಮಣ್ಣಿನ ಸಂಸ್ಕಾರವನ್ನು ಅರಗಿಸಿಕೊಂಡಿದ್ದಾರೆ. ಸರ್ವರ ಸಹಕಾರದೊಂದಿಗೆ ಮೂಲ ಭಾಷೆ ತುಳು ವಿಜೃಂಭಿಸುತ್ತಿದೆ. ಮನೆ-ಮನೆಗಳ ಮಧ್ಯೆ ವಿನಿಮಯ. ಕೊಡು-ಕೊಳ್ಳುವಿಕೆ ಎಲ್ಲವೂ ನಿರ್ವಂಚನೆಯಿಂದ ನಡೆಯುತ್ತಿದೆ. ಇಂದು ಮಹಿಳಾ ಆಟ ಕೂಟಗಳ ಸಂಭ್ರಮ ಹೆಂಗಸರಿಗೊಂದು ವಿಶೇಷ ವೇದಿಕೆ. ಅವರು ಜತನದಿಂದ ತುಳುವನ್ನು ತಮ್ಮ ಮಕ್ಕಳಿಗೆ ದೊಡ್ಡ ಕೊಡುಗೆ ಕೊಟ್ಟಂತೆಯೇ” ಎಂದು ಹೇಳಿದರು.
ಅಧ್ಯಕ್ಷೀಯ ಸ್ಥಾನದಿಂದ ಮರೋಳಿ ಬಿ.ದಾಮೋದರ ನಿಸರ್ಗ ಮಾತನಾಡುತ್ತಾ “ಬಹಳ ಕಷ್ಟದಿಂದ ಕಟ್ಟಿ ಬೆಳಸಿದ ಸಂಸ್ಥೆ ಇದು. ಇಂದು ಸಂತಸವಾಗುತ್ತಿದೆ. ಸ್ವಲ್ಪವೇ ಭೂಭಾಗ ತುಳುವರದ್ದಾಗಿದ್ದರೂ ಇಂದು ಕವಲು-ಕವಲಾಗಿ ಎಲ್ಲೆಡೆ ತುಳು ಪಸರಿಸಿದೆ. ತುಳುವ ಎಂದಾಗ ಹೃದಯ ಹರ್ಷಿಸುತ್ತದೆ, ಮನ ಮಿಡಿಯುತ್ತದೆ. ಇನ್ನೂ ಎಷ್ಟೋ ಕಡೆ ತುಳು ತಲುಪಿಲ್ಲ ಎಂಬುದು ಖೇದಕರ. ಹಳೆಯ ಪದಗಳು, ವಸ್ತು-ವಾಹನಗಳ ಹೆಸರುಗಳು, ಸ್ಥಳಗಳ ಹೆಸರುಗಳು ಅದರ ಮೂಲ ಹೆಸರಿನಲ್ಲಷ್ಟೇ ಗುರುತಿಸಿದಂತಾದರೆ ತುಳುಕೂಟದ ಪ್ರಯತ್ನ ಫಲ ಕೊಟ್ಟಂತೆಯೇ ಸರಿ. ಇದಕ್ಕೆ ಎಲ್ಲರ ಸಹಕಾರ ಇರಲಿ” ಎಂದರು.
ಅತಿಥಿಗಳಾಗಿ ಗರೋಡಿ ಸಾಯಿ ಮಂದಿರದ ಶ್ರೀ ಗಂಗಾಧರ ಶಾಂತಿ, ಶ್ರೀಮತಿ ಜಯಂತಿ ಗಂಗಾಧರ ಶಾಂತಿ, ಮ.ನ.ಪಾ. ಸದಸ್ಯ ಶ್ರೀ ಕೇಶವ ಮರೋಳಿ, ಶ್ರೀಮತಿ ಸರಳಾ ಕುಲಾಲ್, ಕೂಟದ ಪ್ರಮುಖರಾದ ಜೆ.ವಿ. ಶೆಟ್ಟಿ, ಶ್ರೀ ಚಂದ್ರಶೇಖರ ಸುವರ್ಣ, ಹೇಮಾ ನಿಸರ್ಗ, ಶ್ರೀಮತಿ ಸುಜಾತಾ ಸುವರ್ಣ, ದಿನೇಶ್ ಕುಂಪಲ, ರಮೇಶ್ ಕುಲಾಲ್ ಬಾಯಾರು, ವಿಶ್ವನಾಥ ಬಜಾಲ್ ಉಪಸ್ಥಿತರಿದ್ದರು.
ಶ್ರೀಮತಿ ಮಮತಾ ಪ್ರವೀಣ ಮತ್ತು ಕಾಮಾಕ್ಷಿ ಪ್ರಾರ್ಥನೆ ಹಾಡಿ, ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಕೊನೆಯಲ್ಲಿ ಗೋಪಾಲಕೃಷ್ಣ ಪಿ. ಧನ್ಯವಾದವಿತ್ತರು. ಬಳಿಕ ಮಹಿಳಾ ಸಂಭ್ರಮದ ಪೂರ್ಣ ಸ್ಪರ್ಧೆಗಳನ್ನು ವಿಶೇಷವಾಗಿ ಮಹಿಳೆಯರೇ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಜರಗಿತು.