ಸುಳ್ಯ : ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ಇಲ್ಲಿ ಕಾರ್ಯಾಚರಿಸುತ್ತಿರುವ ರಂಗ ಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ 5ನೇ ವರ್ಷದ ‘ಬಣ್ಣ’ ರಾಜ್ಯ ಮಟ್ಟದ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಹಾವಿಷ್ಣು ಸಭಾ ಭವನದಲ್ಲಿ ದಿನಾಂಕ 09-04-2024ರಂದು ನಡೆಯಿತು.
ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಪಿ.ಕೆ.ಯವರು ದೇಸಿಯ ಗ್ರಾಮೀಣ ಸೊಗಡಿನ ಆಟ ಅಡಿಕೆ ಹಾಳೆಯಲ್ಲಿ ಮಗುವನ್ನು ಕುಳ್ಳಿರಿಸಿ ಹಾಳೆಯನ್ನು ಎಳೆಯುವುದರೊಂದಿಗೆ ಶಿಬಿರಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು.
ಮುಖ್ಯ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ದೀಪ ಪ್ರಜ್ವಲಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕುಕ್ಕುಜಡ್ಕ, ಸುದ್ಧಿ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್, ಪೋಷಕ ಕಮಿಟಿ ಸದಸ್ಯ ಚಂದ್ರಶೇಖರ ಗುಡ್ಡೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತಿನೊಂದಿಗೆ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಕಲಾ ಶಾಲೆಯ ಸದಸ್ಯ ಶಶಿಕಾಂತ್ ಮಿತ್ತೂರು ವಂದಿಸಿದರು. ಕು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಮೇನಾಲ ಸಹಕರಿಸಿದರು. ದಿನಾಂಕ 09-04-2024ರಿಂದ 17-04-2024ರ ತನಕ ಬೇಸಿಗೆ ಶಿಬಿರವು ನಡೆಯಲಿದ್ದು 7ರಿಂದ 17ರ ವಯೋಮಾನದ ಮಕ್ಕಳಿಗೆ ಶಿಬಿರದಲ್ಲಿ ವಿವಿಧ ಬಗೆಯ ದೇಸಿಯ ಕಲೆಗಳ ಅನಾವರಣದೊಂದಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಯಲಿರುವುದು. ರಂಗಮಯೂರಿಯ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕ ಕಮಿಟಿ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.