ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಆಯೋಜಿಸಿದ ‘ಬಣ್ಣಗಳ ಭಾವಲೋಕ’ ಭಾರತನಾಟ್ಯ ಕಾರ್ಯಕ್ರಮ ದಿನಾಂಕ 18 -05-2024 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಿದುಷಿ ವಸುಂಧರಾ ದೊರೆಸ್ವಾಮಿ ಮಾತನಾಡಿ “ನಾದ ನೃತ್ಯ ಕೇಂದ್ರವನ್ನು ನಡೆಸಿಕೊಂಡು ಬಂದಿರುವ ನನ್ನ ಶಿಷ್ಯೆ ಭ್ರಮರಿ ಶಿವಪ್ರಕಾಶ್ ತಾನು ನೃತ್ಯ ಪ್ರದರ್ಶಿಸುವುದಲ್ಲದೆ ತನ್ನ ಶಿಷ್ಯೆಯರಿಗೆ ಆ ವಿದ್ಯೆಯನ್ನು ಧಾರೆಯೆರೆದು ಇಂದು ಆ ಮಕ್ಕಳ ಜೊತೆಯಲ್ಲಿ ನೃತ್ಯ ಕಾರ್ಯಕ್ರಮ ನೀಡುತಿದ್ದಾರೆ. ಗುರುವಾಗಿ ನನಗೆ ಇಂದು ಶಿಷ್ಯೆಯನ್ನು ಪ್ರಶಿಷ್ಯೆಯರ ಜೊತೆ ನೋಡುವ ಸಂಭ್ರಮ. ಇಂದು ಭ್ರಮರಿ ಪ್ರಸ್ತುತ ಪಡಿಸಿದ ‘ಬಣ್ಣಗಳ ಭಾವ ಲೋಕ’ ಪದವರ್ಣದಲ್ಲಿ ಎಲ್ಲವೂ ನಾಯಕ ಹಾಗೂ ನಾಯಕಿ ಭಾವದಲ್ಲಿದ್ದರೂ ಮೊದಲು ಏಕವ್ಯಕ್ತಿಯಾಗಿ ಅಭಿನಯಿಸಿ, ಎರಡನೇ ನೃತ್ಯ ಪ್ರದರ್ಶನದಲ್ಲಿ ಇಬ್ಬರು ಜೊತೆಯಾಗಿ ದ್ವಿಗುಳ ನೃತ್ಯಬಂಧವನ್ನು ಪ್ರದರ್ಶಿಸಿ, ಅಂತಿಮವಾಗಿ ನೃತ್ಯ ರೂಪಕವನ್ನು ಪ್ರದರ್ಶಿಸಲಿರುವುದು ಹಾಗೂ ನೃತ್ಯ ಚೌಕಟ್ಟಿನಲ್ಲಿ ಇದೆಲ್ಲವನ್ನು ಪ್ರದರ್ಶಿಸುತ್ತಿರುವುದು ಅವಳ ಒಳಗಿರುವ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಕರಾವಳಿ ನೃತ್ಯ ಪರಿಷತ್ ಇದರ ಅಧ್ಯಕ್ಷರಾದ ವಿದ್ವಾನ್ ಯು. ಕೆ. ಪ್ರವೀಣ್ ಮಾತನಾಡಿ “ ಭ್ರಮರಿಯವರ ಅಧ್ಭುತವಾದ ನೃತ್ಯ ಸಂಯೋಜನೆ ಹಾಗೂ ಪ್ರಸ್ತುತಪಡಿಸಿದ ರೀತಿ ಶ್ಲಾಘನೀಯ. ‘ಬಣ್ಣದ ಭಾವಲೋಕ’ ಎಂಬ ಹೆಸರನ್ನು ಕಾರ್ಯಕ್ರಮಕ್ಕೆ ಇಟ್ಟಂತೆ ಪ್ರೇಕ್ಷಕರನ್ನು ಹಿಡಿದಿಟ್ಟು ಭಾವ ಲೋಕಕ್ಕೆ ಕೊಂಡೊಯ್ದ ಭಾವನಾತ್ಮಕವಾದ ಈ ಕಾರ್ಯಕ್ರಮ ಉತ್ತಮ ಯಶಸ್ಸನ್ನು ಕಂಡಿದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಅಧ್ಭುತವಾದ ಹೊಸ ಪರಿಕಲ್ಪನೆಯ . ‘ಬಣ್ಣದ ಭಾವಲೋಕ’ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಹೊಸತನ್ನು ಬಯಸುವ ಜನರ ನಿರೀಕ್ಷೆ ಸುಳ್ಳಾಗಲಿಲ್ಲ. ಹುಟ್ಟಿ ಒಂದು ದಶಕವನ್ನು ದಾಟಿದ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಜನರಲ್ಲಿ ಹೊಸ ಅಭಿರುಚಿಯನ್ನು ಹುಟ್ಟಿಸುವ ಕಾರ್ಯಕ್ರಮ ನೀಡಿ ಪ್ರಗತಿಯತ್ತ ಹೆಜ್ಜೆ ಇಡುತ್ತಿರುವುದು ಸ್ತುತ್ಯಾರ್ಹ.” ಎಂದರು.
ನೃತ್ಯ ಕಾರ್ಯಕ್ರಮದಲ್ಲಿ ಮೊದಲಿಗೆ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಣಯಿನಿಯಾದ ಹಿಡಿಂಬೆಯ ಮನೋ ಪ್ರಪಂಚದ ಅಭಿವ್ಯಕ್ತಗೊಂಡರೆ, ದ್ವಿಗುಳ ನೃತ್ಯ ಪ್ರದರ್ಶನದಲ್ಲಿ ನಾಯಕಿಯಾದ ಗೋಪಿಕೆಯು ಶ್ರೀ ಕೃಷ್ಣರಾಯನ ಬರವನ್ನೇ ಎದುರು ನೋಡುತ್ತ ತನ್ನ ಸಖಿಯ ಮೂಲಕ ಶ್ರೀ ಕೃಷ್ಣನನ್ನು ತನ್ನೆಡೆಗೆ ಕರೆಸಿಕೊಳ್ಳುವ ನೃತ್ಯವನ್ನು ಪ್ರಸ್ತುತಪಡಿಸಿ, ಅಂತಿಮವಾಗಿ ಮೀನಾಕ್ಷಿ ಕಲ್ಯಾಣ ನೃತ್ಯ ನಾಟಕದ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಕಲಾವಿದರಿಗೆ ನಟುವಾಂಗದಲ್ಲಿ ಡಾ. ವಸುಂದರಾ ದೊರೆಸ್ವಾಮಿ, ಹಾಡುಗಾರಿಕೆಯಲ್ಲಿ ಕುಮಾರಿ ಶ್ರೀರಕ್ಷಾ, ಮೃದಂಗದಲ್ಲಿ ವಿದ್ವಾನ್ ವಿ. ಕೆ. ಹೆಚ್. ರವಿಕುಮಾರ್, ವಯಲಿನ್ ನಲ್ಲಿ ವಿ. ಗಣರಾಜ ಕಾರ್ಲೆ ಹಾಗೂ ಕೊಳಲಿನಲ್ಲಿ ವಿ. ಕೃಷ್ಣ ಪವನ್ ಕುಮಾರ್ ಸಹಕರಿಸಿದರು.