ಉಡುಪಿ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಜಾನಪದ ವಿದ್ವಾಂಸ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 15 ಮಾರ್ಚ್ 2025ರಂದು ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ ಇದರ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ.
ಈ ಸಾಲಿನ ‘ಜಾನಪದ ವಿದ್ವಾಂಸ ಪ್ರಶಸ್ತಿ’ಯನ್ನು ಜಾನಪದ ಸಂಶೋಧಕ ಡಾ. ತುಕಾರಾಂ ಪೂಜಾರಿ ಇವರಿಗೆ ಹಾಗೂ ‘ಜಾನಪದ ಕಲಾವಿದ ಪ್ರಶಸ್ತಿ’ಯನ್ನು ದೈವಾರಾಧನಾ ಸೇವಾ ವರ್ಗದ ಅಲೆವೂರು ಗೋಪು ಮಡಿವಾಳ ಅವರಿಗೆ ಪ್ರದಾನ ಮಾಡಲಾಗುವುದು.
ಸಹಕಾರಿ ಧುರೀಣ ಜಯಕರ್ ಶೆಟ್ಟಿ ಇಂದ್ರಾಳಿ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಉದ್ಯಮಿ ರಂಜನ್ ಕೆ. ಹಾಗೂ ಪ್ರಶಸ್ತಿಯ ರೂವಾರಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು.
ರಜತ ವರ್ಷದ ಸಡಗರದಲ್ಲಿರುವ ಉಡುಪಿ ಯುವವಾಹಿನಿ ಸಂಘಟನೆಯು ಸಾಹಿತಿ ಮುದ್ದು ಮೂಡುಬೆಳ್ಳೆ ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರ ವಿವರಗಳನ್ನು ಕಲೆ ಹಾಕಿ ಆಯ್ಕೆ ಪ್ರಕ್ರಿಯೆ ನಡೆಸಿದೆ. ಪ್ರಶಸ್ತಿಯನ್ನು ಕೆಮ್ಮಲಜೆ ಜಾನಪದ ಪ್ರಕಾಶನ ಕಳೆದ 8 ವರ್ಷಗಳಿಂದ ನೀಡುತ್ತಾ ಬರುತ್ತಿದ್ದು, ಕಳೆದ 5 ವರ್ಷಗಳಿಂದ ಯುವವಾಹಿನಿ ಉಡುಪಿ ಘಟಕ ಈ ಜವಾಬ್ದಾರಿಯನ್ನು ವಹಿಸಿದೆ.



