ಬಂಟ್ವಾಳ: ಮೊಡಂಕಾಪು ‘ಸರಿದಂತರ’ ಪ್ರಕಾಶನವು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಆಯೋಜಿಸಿದ ಪ್ರೊ. ರಾಜಮಣಿ ರಾಮಕುಂಜ ಇವರ ‘ಬಂಟ್ವಾಳದ ಸಾಂಸ್ಕೃತಿಕ ಪರಿಸರ’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 31 ಅಕ್ಟೋಬರ್ 2024ರ ಗುರುವಾರದಂದು ಬಂಟ್ವಾಳದ ಕನ್ನಡ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಮೂಡುಬಿದಿರೆ ಧವಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ “ಬಂಟ್ವಾಳದ ಆರಾಧನಾ ಕೇಂದ್ರ, ಶೈಕ್ಷಣಿಕ ವಲಯ, ಸಾಧಕರು, ಸ್ಥಳನಾಮಗಳ ವಿವರಗಳೊಂದಿಗೆ ಇತಿಹಾಸದ ಸೂಕ್ಷ್ಮನೋಟಗಳನ್ನು ಪ್ರೊ. ರಾಜಮಣಿ ರಾಮಕುಂಜ ಅವರ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿ ನೀಡುತ್ತದೆ. ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವನ್ನು ಒಂದು ಕೇಂದ್ರವಾಗಿಟ್ಟುಕೊಂಡು ಇಡೀ ಪರಿಸರದ ಸಾಂಸ್ಕೃತಿಕ ಪರಂಪರೆ ಹಾಗೂ ಇತಿಹಾಸದ ಸಮಗ್ರ ನೋಟವನ್ನು ಪುಸ್ತಕ ನೀಡುತ್ತದೆ ಮತ್ತು ಸಾಂಸ್ಕೃತಿಕ ಪರಿಸರವನ್ನು ತೆರೆದಿಡುತ್ತದೆ. ಈ ಕೃತಿಯು ಸಂಶೋಧನಾತ್ಮಕ ನೋಟವನ್ನು ನೀಡಿದೆ. ಪಾಡ್ಡನ, ಮೌಖಿಕ ಮಾಹಿತಿ ಸಹಿತ ದೊರಕಿದ ಮಾಹಿತಿಯೊಂದಿಗೆ ಸೀಮಿತವಾದ ಪ್ರದೇಶವನ್ನು ಸಮಗ್ರವಾಗಿ ನೀಡಿರುವ ಉಲ್ಲೇಖ ಇದೆ. ಪುಸ್ತಕ ಸಿದ್ಧ ಸೂತ್ರವನ್ನು ಅನುಸರಿಸದೆ ಬರೆಯಲಾಗಿದೆ. ಸ್ವಂತ ನೆಲೆಯಲ್ಲಿ ಪ್ರಕಾಶಿಸುವ ಧೈರ್ಯ ಮಾಡಿದ್ದಕ್ಕೆ ಅಭಿನಂದನೆ. ಹದಿನಾಲ್ಕು ವರ್ಷದ ಶ್ರಮದ ಪ್ರತಿಫಲವಾಗಿ ಪುಸ್ತಕ ಹೊರಬಂದಿದೆ.” ಎಂದರು
ಮುಂಬೈ ವಿ. ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ ಮಾತನಾಡಿದರು. ದ. ಕ. ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಕ. ಸಾ. ಪ. ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು. ಕೃತಿಕಾರ ಪ್ರೊ. ರಾಜಮಣಿ ರಾಮಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿ. ಮಧುರಾ ಕಡ್ಯ ವಂದಿಸಿದರು.

 
									 
					