ಬೆಂಗಳೂರು : ದೀಪಾ ಭಸ್ತಿಯವರು ಇಂಗ್ಲೀಷ್ ಗೆ ಅನುವಾದಿಸಿರುವ ಬಾನು ಮುಷ್ತಾಕ್ ಅವರ ಸಣ್ಣಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಪ್ರಧಾನ ಸುತ್ತಿಗೆ ಆಯ್ಕೆಯಾಗಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಪಾರ ಸಂತಸ ವ್ಯಕ್ತ ಪಡಿಸಿ, ಕೃತಿಯು ಅಂತಿಮ ಸುತ್ತಿಗೂ ಆಯ್ಕೆಯಾಗಲಿ, ಪ್ರಶಸ್ತಿಗೆ ಕೂಡ ಆಯ್ಕೆಯಾಗಲಿ, ಈ ಮೂಲಕ ಐವತ್ತು ಸಾವಿರ ಪೌಂಡ್ ಗಳ (ಸರಿಸುಮಾರು 55 ಲಕ್ಷ ರೂಪಾಯಿಗಳು) ಪುರಸ್ಕಾರ ಮೊಟ್ಟ ಮೊದಲಿಗೆ ಕನ್ನಡಕ್ಕೆ ಲಭಿಸಲಿ, ಈ ಮೂಲಕ ಕನ್ನಡದ ಕೀರ್ತಿ ಪತಾಕೆ ಜಾಗತಿಕವಾಗಿ ಹಾರಲಿ ಎಂದು ಆಶಿಸಿದ್ದಾರೆ. ಇದಕ್ಕೆ ಕಾರಣರಾದ ಕನ್ನಡದ ಪ್ರಮುಖ ಲೇಖಕಿ ಬಾನು ಮುಷ್ತಾಕ್ ಇವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಬಾನು ಮುಷ್ತಾಕ್ ಇವರ ‘ಹಸೀನಾ’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಿತ್ರ ರಾಷ್ಟ್ರ ಪುರಸ್ಕಾರವನ್ನು ಪಡೆದಿರುವುದನ್ನು ನೆನಪು ಮಾಡಿಕೊಂಡಿರುವ ಅವರು, ಇನ್ನೊಮ್ಮೆ ಬಾನು ಮುಷ್ತಾಕ್ ಇವರಿಂದ ಇತಿಹಾಸ ಸೃಷ್ಟಿಯಾಗಲಿ ಎಂದು ಆಶಿಸಿದ್ದಾರೆ.
2023ನೇ ಇಸವಿಯಲ್ಲಿ ಬಾನು ಮುಷ್ತಾಕ್ ರವರ ಕಥಾ ಸಂಕಲನ ‘ಹೆಣ್ಣು ಹದ್ದಿನ ಸ್ವಯಂವರ’ ಪ್ರಕಟವಾಯಿತು. ಆ ಕಥಾ ಸಂಕಲನಕ್ಕೆ ಬಿದರಹಳ್ಳಿ ನರಸಿಂಹಮೂರ್ತಿಯವರು ಮುನ್ನುಡಿಯನ್ನು ಬರೆದರು. ಅದರಲ್ಲಿ “ಬಾನು ಮುಷ್ತಾಕ್ ರವರ ಬರಹ ಯಾವ ಮುಲಾಜಿಗೂ ಒಳಗಾಗದೆ ಬರೆದ ಮಾನವತಾ ವಾದ” ಎಂದು ಗುರುತಿಸಿದ್ದರು. ಈ ಕಥೆಗಳ ಇಂಗ್ಲೀಷ್ ಅನುವಾದವನ್ನು ದೀಪಾ ಭಸ್ತಿ ಮಾಡಿದರು. “ಹಾರ್ಟ್ ಲ್ಯಾಂಪ್” ಶೀರ್ಷಿಕೆಯ ಕಥಾ ಸಂಕಲನದ ಅನುವಾದದ ಬಗ್ಗೆ ಅಂತರರಾಷ್ಟ್ರೀಯ ಪೆನ್ ಟ್ರಾನ್ಸ್ಲಟ್ಸ್ ಪ್ರಶಸ್ತಿ ದೊರಕಿತು. ನಂತರ ಅವರ ಕಥೆ ‘ರೆಡ್ ಲುಂಗಿ’ಯ ಅನುವಾದ 2024ರ ಜೂನ್ ಜುಲೈ ತಿಂಗಳ ‘ದ ಪ್ಯಾರಿಸ್ ರಿವ್ಯೂ’ ಮ್ಯಾಗಝೀನ್ ನಲ್ಲಿ ಪ್ರಕಟವಾಯಿತು. ಸಂಕಲನದ ಇನ್ನೊಂದು ಕಥೆ “ಒಮ್ಮೆ ಹೆಣ್ಣಾಗು ಪ್ರಭುವೆ” ಇದರ ಅನುವಾದ ಇನ್ನೊಂದು ಸಾಹಿತ್ಯಕ ಪತ್ರಿಕೆಯಾದ “ದಿ ಬ್ಯಾಫ್ಲರ್” ನಲ್ಲಿ ಪ್ರಕಟವಾಯಿತು. ಇದೀಗ ಕಥಾ ಸಂಕಲನವು ಅಮೆರಿಕದಲ್ಲಿ ಹಾಗೂ ಬ್ರಿಟನ್ ನಲ್ಲಿ ‘ಅಂಡ್ ಅದರ್ ಸ್ಟೋರೀಸ್’ ಪ್ರಕಾಶನ ಸಂಸ್ಥೆಯಿಂದ ಮತ್ತು ಭಾರತದಲ್ಲಿ ‘ಪೆಂಗ್ವಿನ್ ರಾಂಡಮ್ ಹೌಸ್’ನಿಂದ 2025ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಪ್ರಕಟಣಾ ಪೂರ್ವದಲ್ಲಿಯೇ ಕಥಾ ಸಂಕಲನವಾದ ‘ಹಾರ್ಟ್ ಲ್ಯಾಂಪ್’ 2025ರ ಅಂತರ ರಾಷ್ಟ್ರೀಯ ಬೂಕರ್ ಬಹುಮಾನದ ಪ್ರಧಾನ ಸುತ್ತಿಗೆ ಆಯ್ಕೆಯಾಗಿದೆ. ಬಾನು ಮುಷ್ತಾಕ್ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡವರು. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಟಿಯಲ್ಲಿ ಭಾಗವಹಿಸಿದ್ದವರು. ಅವರ ಗೆಲುವಿಗೆ ಉಳಿದ ಕನ್ನಡಿಗರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕಾತರದಿಂದ ನಿರೀಕ್ಷಿಸಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.