ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಪ್ರಕಟಿಸಿರುವ ಡಾ. ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಕೃತಿಯು ದಿನಾಂಕ 5 ನವೆಂಬರ್ 2025ರಂದು ತುಳು ಭವನದ ಸಿರಿ ಚಾವಡಿಯಲ್ಲಿ ಲೋಕಾರ್ಪಣೆಗೊಂಡಿತು.
ಕೃತಿ ಬಿಡುಗಡೆಗೊಳಿಸಿದ ಸಂಶೋಧಕಿ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ “ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಭೌತಿಕ ವಸ್ತು ಹಾಗೂ ಗುತ್ತು ಮನೆ, ಆರಾಧನೆ ಸ್ಥಳಗಳ ಕುರಿತು ಆಳವಾದ ಅಧ್ಯಯನ ಮಾಡಿರುವ ಡಾ. ಇಂದಿರಾ ಹೆಗ್ಗಡೆ ಇವರ ಕ್ಷೇತ್ರ ಕಾರ್ಯದ ಅನುಭವಗಳು ಅನನ್ಯವಾಗಿದ್ದು. ಅವು ಕೃತಿ ರೂಪದಲ್ಲಿ ದಾಖಲಾಗಿದ್ದು ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಿದ್ದು, ಇದೊಂದು ಮಹತ್ವದ ಕೃತಿಯಾಗಲಿದೆ.” ಎಂದು ನುಡಿದರು.
ಡಾ. ಇಂದಿರಾ ಹೆಗ್ಗಡೆ ಮಾತನಾಡಿ “ತನ್ನ ಸಂಶೋಧನಾ ಕೃತಿಗಳನ್ನು ಓದಿದ ಓದುಗರು ತನ್ನ ವ್ಯಾಪಕ ಕ್ಷೇತ್ರ ಕಾರ್ಯದ ಕುರಿತು ಆಸಕ್ತಿಯಿಂದ ಪ್ರಶ್ನಿಸುತ್ತಿದಿದ್ದುದೇ ಈ ಕೃತಿಗೆ ಪ್ರೇರಣೆಯಾಗಿದ್ದು, ಇದು ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡುವಂತಾಗಲಿ” ಎಂದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ “ಇಲ್ಲಿ ದಾಖಲಾಗಿರುವ ಅನುಭವ ಕಥನಗಳು ಹೊಸ ಹೊಳಹುಗಳನ್ನು ತೆರೆದಿಡುತ್ತಿದ್ದು, ಮುಂದಿನ ಸಂಶೋಧನೆಗೆ ಹೊಸ ಹಾದಿ ತೋರಿಸಿಕೊಡುತ್ತದೆ” ಎಂದು ನುಡಿದರು.

ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳ್ಯಾರು ಮಾತನಾಡಿ “ಅಸಮಾನತೆಯ ಸಮಾಜ ವ್ಯವಸ್ಥೆಯ ನಡುವೆ ಅಡ್ಡಿ ಆಂತಕಗಳನ್ನು ಮೀರಿ ಸಂಶೋಧನೆಯ ಮೂಲಕ ತುಳುನಾಡ ಜ್ಞಾನದ ಅರಿವನ್ನು ವಿಸ್ತರಿಸಿದ ನೂತನ ಸಾಧ್ಯತೆಗಳ ಕೃತಿ ಇದಾಗಿದೆ” ಎಂದರು. ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ್ದ ಲೇಖಕಿ ಪ್ರೇಮ ಅಜ್ರಿ ಮಾತನಾಡಿ “ಗ್ರಾಮೀಣ ಭಾಗದ ಆಚರಣೆಗಳು ಇಲ್ಲಿ ದಾಖಲೆಗೊಂಡಿದ್ದು ಅವುಗಳನ್ನು ಉಳಿಸಿಕೊಳ್ಳುವ ಅಗತ್ಯ ಇದೆ” ಎಂದರು.

ಡಾ. ಸಮೀರ್ ಮಾಡ ಕ್ಷೇತ್ರ ಕಾರ್ಯದ ಅನುಭವಗಳನ್ನು ತಿಳಿಸಿ “ಗ್ರಾಮಗಳ ಕಥನಗಳ ದಾಖಲಾತಿ ಆಗಬೇಕಿದ್ದು, ಈ ಕೃತಿ ನೂತನ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ “ಜಾನಪದ ವಿಚಾರಗಳ ಅಧ್ಯಯನದಲ್ಲಿ ಕ್ಷೇತ್ರ ಕಾರ್ಯದ ಅಗತ್ಯ, ಮಹತ್ವ, ವಿಚಾರ ನಿಷ್ಠೆಯ ಸಾಧ್ಯತೆ ಇಲ್ಲಿ ವ್ಯಕ್ತವಾಗಿದ್ದು ಪ್ರಸಕ್ತ ಸಂದರ್ಭದಲ್ಲಿ ಇಂತಹ ಕೃತಿಗಳು ಇನ್ನಷ್ಟು ಬರಬೇಕಾಗಿವೆ” ಎಂದರು. ಈ ಸಂದರ್ಭದಲ್ಲಿ ಡಾ. ಇಂದಿರಾ ಹೆಗ್ಗಡೆಯವರನ್ನು ಸಮ್ಮಾನಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
