ಬೆಂಗಳೂರು: ಕಲಬುರಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ನಿಂದ ಕೊಡಮಾಡುವ 2025ನೇ ಸಾಲಿನ ‘ಬಸವ ಪ್ರಶಸ್ತಿ’ಗೆ ಕವಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 11 ಜನವರಿ 2025ರಂದು ಸಂಜೆ 5.30ಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಜಿ .ಎಸ್. ಸಿದ್ದಲಿಂಗಯ್ಯ :
ಖ್ಯಾತ ವಿಮರ್ಶಕ, ಕವಿ, ಸಾಹಿತಿ ಡಾ. ಜಿ .ಎಸ್. ಸಿದ್ದಲಿಂಗಯ್ಯನವರು ದಿನಾಂಕ 20 ಫೆಬ್ರವರಿ 1931ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಸಂಗಮ್ಮ ಹಾಗೂ ಜಿ. ಬಿ. ಶ್ರೀಕಂಠಯ್ಯನವರ ಪುತ್ರರಾಗಿ ಜನಿಸಿದರು.
ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ., ಮೈಸೂರು ವಿ.ವಿ.ಯಿಂದ ಎಂ. ಎ. ಪದವಿ ಪಡೆದ ಇವರು ಸರ್ಕಾರಿ ಕಾಲೇಜಿನ ಅಧ್ಯಾಪಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. 1989 ರಿಂದ 1992 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ತಾಲ್ಲೂಕು ಮಟ್ಟದವರೆಗೂ ಕೊಂಡೊಯ್ದರು. ಇವರು ಪರಿಷತ್ತಿನ ಹಣಕಾಸಿನ ವ್ಯವಹಾರದ ಬಗ್ಗೆ ಕೈಗೊಂಡ ನಿರ್ಣಯಗಳು ಮಹತ್ವದ್ದು.
ಬಿ. ಎಂ. ಶ್ರೀ. ಅವಧಿಯಲ್ಲಿ ಪರಿಷತ್ತು ಒಂದು ಲಾಂಛನ ರೂಪಿಸಿ ಅಂಗೀಕರಿಸಿತ್ತು ಆದರೆ ಲಾಂಛನದೊಂದಿಗೆ ಧ್ವಜದ ಅಗತ್ಯ ಕಂಡು ಸಿದ್ಧಲಿಂಗಯ್ಯನವರು ತಜ್ಞರ ಸಮಿತಿ ನೇಮಿಸಿ, ಧ್ವಜದ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಿ, ಕಲಾವಿದ ಕಮಲೇಶ್ ಅವರಿಗೆ ಧ್ವಜರೂಪಿಸುವ ಕಾರ್ಯ ವಹಿಸಿತು. ಅದನ್ನು ಕಾರ್ಯಸಮಿತಿ 16 ಜನವರಿ 1990ರಲ್ಲಿ ಅಂಗೀಕರಿಸಿತು. ಅಂದಿನಿಂದ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಮುಖ ಸಮಾರಂಭಗಳಲ್ಲಿ ಅದೇ ಧ್ವಜವನ್ನು ಹಾರಿಸಲು ಪ್ರಾರಂಭಿಸಿತು.
‘ಮಹಾನುಭಾವ ಬುದ್ಧ’,’ ಕವಿ ಲಕ್ಷ್ಮೀಶ’, ‘ಚಾಮರಸ’ ಹಾಗೂ ‘ಹೊಸಗನ್ನಡ ಕಾವ್ಯ’ ವಿಮರ್ಶಾ ಕೃತಿಗಳನ್ನು ರಚಿಸಿರುವ ಇವರು ‘ಉತ್ತರ’, ‘ಚಿತ್ರ-ವಿಚಿತ್ರ’, ‘ಐವತ್ತರ ನೆರಳು’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಶತಾಬ್ದಿ ದೀಪ’ ಹಾಗೂ ‘ಜಂಗಮಜ್ಯೋತಿ’ ಇವರ ಸಂಪಾದಿತ ಕೃತಿಗಳು.