ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಬಸವ ಜಯಂತಿ’ ಕಾರ್ಯಕ್ರಮವು ದಿನಾಂಕ 10-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿಯವರು ಮಾತನಾಡಿ “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ ಕಲ್ಯಾಣ ಕ್ರಾಂತಿಯ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದ ಬಸವಣ್ಣನವರ ಕೊಡುಗೆ ಅಪಾರ. ಬಸವಣ್ಣನವರು ಸಾಹಿತ್ಯದಲ್ಲಿ ಸರಳತೆಯನ್ನು ತಂದು ಜನ ಸಾಮಾನ್ಯರನ್ನು ತಲುಪಿದವರು. ಗಹನ ವೇದಾಂತವನ್ನು ಸರಳವಾಗಿ ಜನರ ಬಳಿಗೆ ತಂದವರು. ಅನುಭವ ಮಂಟಪದ ಪರಿಕಲ್ಪನೆಯ ಮೂಲಕ ಸಮಾಜದ ಎಲ್ಲರನ್ನೂ ಒಂದುಗೂಡಿಸಿದವರು. ಅವರ ತಾತ್ವಿಕ ಮೌಲ್ಯಗಳನ್ನು ಭಾರತದ ಸಂವಿಧಾನ ಕೂಡ ಅಳವಡಿಸಿಕೊಂಡಿದೆ ಈ ಘೋಷಣೆಯ ಮೂಲಕ ಬಸವಣ್ಣನವರ ಚಿಂತನಗಳು ಎಲ್ಲೆಡೆ ಪಸರಿಸಲು ಅನುಕೂಲವಾಗುವುದು” ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ಬಸವಣ್ಣನವರ ಜೀವನ ಸಾಧನೆಯನ್ನು ಪ್ರಸಾರ ಮಾಡುವಲ್ಲಿ ಬಹಳ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಎಂ.ಆರ್. ಶ್ರೀನಿವಾಸ ಮೂರ್ತಿಯವರು ವಚನ ಸಾಹಿತ್ಯದ ಬಗ್ಗೆ ಪರಿಣಿತರಾಗಿದ್ದ ಅವರ ಅವಧಿಯಲ್ಲಿ ಬಸವಣ್ಣನವರ ಕುರಿತ ಇಡೀ ದಿನ ವಿಚಾರ ಸಂಕಿರಣ ನಡೆದಿದ್ದು ಇಂದಿಗೂ ಸ್ಮರಣೀಯವಾಗಿದೆ. ಅವರ ‘ವಚನ ಧರ್ಮ ಸಾರ’ ಇಂದಿಗೂ ಬಹು ಬೇಡಿಕೆಯ ಕೃತಿಯಾಗಿದೆ. ಇದಲ್ಲದೇ ಪೂಜ್ಯಶ್ರೀ ಬಸವಲಿಂಗ ಪಟ್ಟದೇವರ ‘ಬಸವಣ್ಣ ಮತ್ತು ಅಷ್ಟಾವರಣ’, ‘ಎಂ.ಜಿ. ಚಂದ್ರಶೇಖರಯ್ಯನವರ ‘ಬಸವಣ್ಣ ಜೀವನ ಸಾಧನೆ’ ಹಾಗೂ ಎಂ.ಎನ್. ಗಿರಿಜಾಪತಿಯವರ ‘ವಚನ ರತ್ನತ್ರಯರು’ ಮೊದಲಾದ ಬಸವಣ್ಣನವರ ಕುರಿತ ಅನೇಕ ಪ್ರಮುಖ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ” ಎಂದು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ. ನಟರಾಜ್, ರಾಘವೇಂದ್ರ ಕುಲಕರ್ಣಿ, ಕೇಶವ ಮೂರ್ತಿ, ಶ್ರೀನಿವಾಸ ಮೂರ್ತಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.