ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ ಇದರ ಸಹಯೋಗದಲ್ಲಿ ಕಾಲೇಜಿನ ಸಾಹಿತ್ಯ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಸವರಾಜ ಕಟ್ಟೀಮನಿ ಸಾಹಿತ್ಯ : ಹೊಸ ಓದು’ ಎಂಬ ವಿಚಾರವಾಗಿ ರಾಜ್ಯಮಟ್ಟದ ಒಂದು ದಿನದ ವಿಚಾರಸಂಕಿರಣವು ದಿನಾಂಕ 02-03-2024ರಂದು ನಡೆಯಿತು.
ಈ ವಿಚಾರಸಂಕಿರಣವನ್ನು ಉದ್ಘಾಟಿಸಿದ ಕನ್ನಡದ ಸಾಹಿತಿ, ಕವಿ, ಡಾ. ನಾ. ಮೊಗಸಾಲೆಯವರು ಮಾತನಾಡಿ “ಪ್ರಜ್ಞಾವಂತ ನಾಗರಿಕರಾಗಿ ಬದುಕು ಮಾಡಬೇಕಾದರೆ ಹಿರಿಯ ಸಾಹಿತಿ ವ್ಯಕ್ತಿತ್ವಗಳನ್ನು ಅರಿತುಕೊಳ್ಳಬೇಕು. ಬಸವರಾಜ ಕಟೀಮನಿಯವರು ಸಮಾಜದ ಹಲವು ಸ್ತರಗಳ ಕೊರತೆಗಳನ್ನು ಗಮನಿಸಿ ತಮ್ಮ ಕಥೆ, ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದರು. ಅಂಥವರ ಸ್ಮರಣೆ ಇಂದಿಗೂ ಮನನೀಯವಾದುದು. ವಿದ್ಯಾರ್ಥಿಗಳು ಅವರ ಕೃತಿಗಳನ್ನು ಸದಾ ಗಮನಿಸುವಂತಾಗಬೇಕು. ಅವರಲ್ಲಿ ತಿಳಿವಳಿಕೆ ಮೂಡಬೇಕು. ಆಗ ಲೋಕದಲ್ಲಿ ಜ್ಞಾನದ ಬೆಳಕು ಮೂಡುತ್ತದೆ” ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ “ಜಗತ್ತಿನಲ್ಲಿ ಎರಡು ಯುದ್ಧಗಳಾದರೂ ಶಾಂತಿ ಇನ್ನೂ ಸಿಕ್ಕಿಲ್ಲ. ತಿಳಿವಳಿಕೆಯ ಕೊರತೆ ಎದ್ದುಕಾಣುತ್ತದೆ. ಅಕ್ಷರ ಸಂಸ್ಕೃತಿ ಇದ್ದರೆ ಸಾಲದು. ನಾವು ಅರಿವಿನೆಡೆಗೆ ಸಾಗಬೇಕಾದ ಅಗತ್ಯವಿದೆ” ಎಂದರು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಇದರ ಸದಸ್ಯ ಸಂಚಾಲಕ ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರೆ ಅವರು ಉಪಸ್ಥಿತರಿದ್ದು ಪ್ರಸ್ತಾವನೆಗೈದರು. ಸಾಹಿತ್ಯ ಸಂಘದ ಸಂಚಾಲಕ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ಅರುಣಕುಮಾರ್ ಎಸ್.ಆರ್. ಉಪಸ್ಥಿತರಿದ್ದರು. ಶ್ರೀನಿಧಿ ಶೆಟ್ಟಿ ಸ್ವಾಗತಿಸಿ, ಸೌರಭ್ ಶೆಣೈ ವಂದಿಸಿ, ಶ್ವೇತಾ ನಿರೂಪಿಸಿದರು.
ಅನಂತರ ನಡೆದ ಗೋಷ್ಠಿಯಲ್ಲಿ ಹೆಸರಾಂತ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಅವರು ‘ಪ್ರಗತಿಶೀಲ ಸಾಹಿತ್ಯ ಹಾಗೂ ಚಳವಳಿ’ಯ ಕುರಿತು ಮಾತನಾಡಿದರೆ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಸಿ. ಅವರು ‘ಕಟ್ಟೀಮನಿ ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭ’ ಎಂಬ ವಿಚಾರವಾಗಿ ವಿದ್ವತ್‌ಪೂರ್ಣ ಮಾತುಗಳನ್ನಾಡಿದರು. ಎರಡನೆಯ ಗೋಷ್ಠಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೇಮನೆಯವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಾದ ಶ್ರೇಯಾ, ಪ್ರಾರ್ಥನಾ, ಕೆ.ಎಸ್. ನಂದನ, ವಿಯೋಲಾ ರೋಸಾರಿಯೋ, ಸಹನಾ ವಾಗ್ಗೆ, ಶ್ರೀರಕ್ಷಾ ಭಟ್, ಗೌತಮ್ ಶೆಟ್ಟಿ ಅವರು ಬಸವರಾಜ ಕಟ್ಟೀಮನಿಯವರ ಕಥೆಗಳ ಕುರಿತು ಚರ್ಚಿಸಿದರು. ಅಥಣಿಯ ಕನ್ನಡ ಪ್ರಾಧ್ಯಾಪಕ ಎನ್.ಬಿ. ಝರೆ ಅವರು ಈ ಗೋಷ್ಠಿಗೆ ಕಟ್ಟೀಮನಿ ಕಥಾವಾಚನದ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿನಿ ದ್ರವ್ಯಾ ನಿರೂಪಿಸಿ, ವಂದಿಸಿದರು.