ಮಂಗಳೂರು : ‘ಬ್ಯಾರಿವಾರ್ತೆ’ ಕನ್ನಡ ಲಿಪಿ, ಬ್ಯಾರಿ ಭಾಷೆಯಲ್ಲಿರುವ ಬ್ಯಾರಿ ಸಮುದಾಯದ ಏಕೈಕ ಮಾಸಿಕ. ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಈ ಪತ್ರಿಕೆಗೆ ಈಗ ದಶಮಾನೋತ್ಸವ ಸಂಭ್ರಮ. ಈ ಸುಸಂದರ್ಭದಲ್ಲಿ ಪತ್ರಿಕೆಯು ‘ಬ್ಯಾರಿ ಲೇಖನ ಸ್ಪರ್ಧೆ-2026’ಯನ್ನು ಹಮ್ಮಿಕೊಂಡಿದೆ.
ಬ್ಯಾರಿಗಳಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಮೂಡಿಸುವುದು. ಬ್ಯಾರಿ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸುವುದು ಈ ಸ್ಪರ್ಧೆಯ ಉದ್ದೇಶ. ಈ ಸ್ಪರ್ಧೆಗೆ ಯಾರು ಬೇಕಾದರೂ ಬರೆಯಬಹುದು. ‘ಬ್ಯಾರಿವಾರ್ತೆ’ಗೆ ಹತ್ತು ವರ್ಷ ಆಗಿರುವುದರಿಂದ ತಲಾ ಹತ್ತು ಬಹುಮಾನಗಳನ್ನು ಇಡಲಾಗಿದೆ. ಪ್ರಥಮ ಬಹುಮಾನ ತಲಾ ರೂ. ಎರಡು ಸಾವಿರ ಹತ್ತು ಜನರಿಗೆ, ದ್ವಿತೀಯ ಬಹುಮಾನ ತಲಾ ರೂ. ಒಂದು ಸಾವಿರ ಹತ್ತು ಜನರಿಗೆ, ತೃತೀಯ ಬಹುಮಾನ ತಲಾ ರೂ. ಐನ್ನೂರು ಹತ್ತು ಜನರಿಗೆ, ಸ್ಪರ್ಧೆಗೆ ಬಂದು ಲೇಖನ ಬ್ಯಾರಿವಾರ್ತೆಯಲ್ಲಿ ಪ್ರಕಟವಾದರೆ ಪ್ರತಿಯೊಂದು ಲೇಖನಕ್ಕೂ ರೂ.150/- ಸಮಾಧಾನಕರ ಬಹುಮಾನ ನೀಡಲಾಗುವುದು.
ಲೇಖನ 600 ಪದಗಳ ಒಳಗಿರಬೇಕು. ಕನ್ನಡ ಲಿಪಿ, ಬ್ಯಾರಿ ಭಾಷೆಯಲ್ಲಿರಬೇಕು. ಲೇಖನ ಬೇರೆ ಎಲ್ಲಿಯೂ ಪ್ರಕಟವಾಗಿರಬಾರದು. ಟೈಪ್ ಮಾಡಿ ಕೆಳಗಿನ ವಾಟ್ಸಾಪ್ ನಂಬರಿಗೆ ಕಳುಹಿಸಬೇಕು. ಕೈ ಬರಹದ ಲೇಖನ ಬೇಡ. ಅನುವಾದ ಬೇಡ. ಕಥೆ, ಕವನ, ಮಕ್ಕಳ ಕಥೆ ಬೇಡ. ತಮಗಿಷ್ಟವಾದ ವಿಷಯದಲ್ಲಿ ಬರೆಯಬಹುದು. ಲೇಖನಕ್ಕೆ ಶೀರ್ಷಿಕೆ ಕಡ್ಡಾಯ. ಲೇಖಕರ ಹೆಸರು, ಊರು, ಮೊಬೈಲ್ ನಂಬರ್, ವಾಟ್ಸಾಪ್ ನಂಬರ್ ಲೇಖನದ ಕೊನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಲೇಖನ ಕಳುಹಿಸಲು ಕೊನೆಯ ದಿನಾಂಕ 25 ಜನವರಿ 2026 ಆಗಿರುತ್ತದೆ. ಲೇಖನವನ್ನು 9591728426 ವಾಟ್ಸಾಪ್ ನಂಬರಿಗೆ ಕಳುಹಿಸಿಕೊಡಬೇಕಾಗಿ ‘ಬ್ಯಾರಿವಾರ್ತೆ’ ತಿಳಿಸಿದೆ.
