ಮಂಗಳೂರು : ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ತನ್ನ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಮಂಗಳೂರಿನ ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ.), ಉರ್ವಾ ಇದರ ಸಹಯೋಗದಲ್ಲಿ ಮಂಗಳೂರು ಉರ್ವಾದ ಕಾ. ವಾ. ಆಚಾರ್ಯ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಂಥ ಲೋಕಾರ್ಪಣಾ ಸಮಾರಂಭವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ “ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳು ಸಮಾಜದಲ್ಲಿ ಸುಸಂಸ್ಕೃತಿಯು ಆಳವಾಗಿ ಬೇರೂರಲು ಸಹಾಯಕವಾಗಿವೆ. ಈ ಚಟುವಟಿಕೆಗಳ ಪರಿಣಾಮವು ಮೇಲ್ನೋಟಕ್ಕೆ ಕಾಣದೇ ಇದ್ದರೂ ಈ ಚಟುವಟಿಕೆಗಳು ದೂರಗಾಮಿ ಫಲನೀಡುವುದು ದಿಟ. ಆ ನಿಟ್ಟಿನಲ್ಲಿ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯು ಅದ್ಭುತವಾದ ಕಾರ್ಯ ಮಾಡುತ್ತಿದೆ” ಎಂದು ನುಡಿದರು.
‘ಬೆಳ್ಳಿ ಬೆಳಕು’ ಹಾಗೂ ‘ವಿ.ಜಿ. ದೀಕ್ಷಿತ್ ಸಮಗ್ರ ಕೃತಿ ಸಂಪುಟ’ ಭಾಗ 1 ಎಂಬ ಗ್ರಂಥಗಳನ್ನು ಲೋಕಾರ್ಪಣೆ ಗೈದು ಮಾತನಾಡಿದ ಮಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ.ಕೆ. ಆಚಾರ್ಯರು ಕಾರ್ಯಕ್ರಮ ಆಯೋಜಿಸಿದ ಎರಡೂ ಸಂಸ್ಥೆಗಳ ಪ್ರಯತ್ನವನ್ನು ಶ್ಲಾಘಿಸಿ, “ವಿಶ್ವಕರ್ಮ ಸಮಾಜದ ಕುರಿತಾಗಿ ಸಾಮಾಜಿಕ ಅಧ್ಯಯನದ ಅಗತ್ಯವಿದೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ (ರಿ.), ಇದರ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಆಚಾರ್ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಸಂಚಾಲಕರಾಗಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ವಿಶ್ವಬ್ರಾಹ್ಮಣರ ಇತಿಹಾಸ ಸಂಸ್ಕೃತಿಗಳ ಕುರಿತಾಗಿ ನಾಲ್ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ ಭೀಮಸೇನ ಬಡಿಗೇರರ ಭಗೀರಥ ಯತ್ನವನ್ನು ಶ್ಲಾಘಿಸಿದರು.
ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಸಂಚಾಲಕರಾದ ಇಂ. ಭೀಮಸೇನ ಬಡಿಗೇರ ಪ್ರಸ್ತಾವನೆಗೈದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ ಆಚಾರ್ಯ ಪಿ. ಶುಭ ಹಾರೈಸಿದರು. ಪ್ರೊ. ಜಿ. ಯಶವಂತ ಆಚಾರ್ಯ ಹಾಗೂ ಡಾ. ಸುಷ್ಮಾ ಪಿ.ಎಸ್. ಬಿಡುಗಡೆಯಾದ ಗ್ರಂಥಗಳ ಕುರಿತು ಪರಿಚಯ ಭಾಷಣ ಮಾಡಿದರು. ಟ್ರಸ್ಟಿನ ಕೋಶಾಧಿಕಾರಿ ಬಿ.ಎಚ್. ಯೋಗೀಶ್ ಆಚಾರ್, ಜೊತೆ ಕಾರ್ಯದರ್ಶಿ ಎ.ಜಿ. ಸದಾಶಿವ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟಿನ ಕಾರ್ಯದರ್ಶಿ ಡಾ. ಎಸ್.ಪಿ. ಗುರುದಾಸ್ ಸ್ವಾಗತಿಸಿ, ಸಹಕೋಶಾಧಿಕಾರಿ ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ ಧನ್ಯವಾದ ಸಮರ್ಪಿಸಿ, ಭರತ್‌ರಾಜ್ ಬೈಕಾಡಿ ಕಾರ್ಯಕ್ರಮ ನಿರ್ವಹಿಸಿ, ಯುವ ಗಾಯಕ ಆಯುಷ್ ಪ್ರೇಮ್ ಗೀತಗಾಯನ ಕಾರ್ಯಕ್ರಮ ನೀಡಿದರು.