ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಸಮ್ಮೇಳನ ಸಂಯೋಜನ ಸಮಿತಿ, ಕೊಯ್ಯೂರು ಸರಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 28 ಡಿಸೆಂಬರ್ 2025ರಂದು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪ್ರೊ. ಎಸ್. ಪ್ರಭಾಕರ್ ವೇದಿಕೆಯಲ್ಲಿ ನಡೆಯಿತು.

ಈ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ವಿವಿ ಮಾಜಿ ಕುಲಪತಿ ಕೆ. ಚಿನ್ನಪ್ಪ ಗೌಡ “ಸಾಹಿತ್ಯದ ಬಗ್ಗೆ ಅರಿವು, ಜಾಗೃತಿಯೊಂದಿಗೆ ವಿವೇಕ ಮೂಡಿಸುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶ. ಸಾಹಿತ್ಯದ ಓದಿನಿಂದ ಸಂಸ್ಕಾರಯುತ ಜೀವನ ಸಾಧ್ಯವಾಗುತ್ತದೆ. ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಸಾಹಿತ್ಯದ ಮೂಲಕ ಶಿಕ್ಷಣ ನೀಡಿದಾಗ ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಬಳಿಕ ಶಾಲೆಯಲ್ಲಿ ‘ಶ್ರದ್ಧಾ’ ವಾಚನಾಲಯ ಉದ್ಘಾಟಿಸಿದ ಅವರು, ತಮ್ಮ ಕೆಲವು ಪುಸ್ತಕಗಳನ್ನು ಕೊಡುಗೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರೊ. ಎಸ್. ಪ್ರಭಾಕರ್ ಇವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಆಶಯ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್, “ತಾಲೂಕು ಮಟ್ಟದಲ್ಲಿ 13, ಜಿಲ್ಲಾ ಮಟ್ಟದಲ್ಲಿ 3, ಹೋಬಳಿ ಮಟ್ಟದಲ್ಲಿ 2 ಸಮ್ಮೇಳನಗಳನ್ನು ನಡೆಸಲಾಗಿದೆ. ಶಾಲೆ ಕಾಲೇಜುಗಳಲ್ಲಿ 450ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬಂಟ್ವಾಳದಲ್ಲಿ ಮಾರ್ಚ್‌ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಭಾಷೆ ಬಲವಾದಷ್ಟು ಸಾಹಿತ್ಯ, ಸಂಸ್ಕೃತಿ ಸದೃಢವಾಗುತ್ತದೆ. ಕನ್ನಡವನ್ನು ಹೆಚ್ಚು ಬಳಸಿ. ಬೆಳೆಸಬೇಕು” ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಬಿ. ಭುಜಬಲಿ ಧರ್ಮಸ್ಥಳ ಇವರು ಮಾತನಾಡಿ, “ಶುದ್ಧ ಕನ್ನಡ ಪದಗಳ ಬಳಕೆಯೊಂದಿಗೆ ಪದ್ಮ, ವಚನ, ಸಂಭಾಷಣೆಗಳ ಮೂಲಕ ಯಕ್ಷಗಾನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದೆ. ವ್ಯಾಕರಣಬದ್ದವಾಗಿ ಸ್ಪಷ್ಟ ಉಚ್ಛಾರದೊಂದಿಗೆ ಪೌರಾಣಿಕ ಕಥೆಗಳ ನಿರೂಪಣೆಯಿಂದಾಗಿ ಜನರಲ್ಲಿಯೂ ಶುದ್ಧ ಪದ ಪ್ರಯೋಗ ಮಾಡುವ ಹವ್ಯಾಸ ಬೆಳೆದಿದೆ. ಯಕ್ಷಗಾನ ಕಲಾವಿದರು ಕಡಿಮೆ ಶಿಕ್ಷಣ ಹೊಂದಿದ್ದರೂ ಅವರ ಭಾಷಾ ಸೊಗಡು, ವಾಕ್‌ಪಟುತ್ವ ಶ್ಲಾಘನೀಯ. ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಮನೆ ಮಾತಿನಲ್ಲಿ ಶಾಲೆ- ಕಾಲೇಜುಗಳಲ್ಲಿ, ದಿನನಿತ್ಯದ ವ್ಯವಹಾರದಲ್ಲಿ, ಮಾಧ್ಯಮಗಳಲ್ಲಿ ಕನ್ನಡವನ್ನೇ ಬಳಸಬೇಕು. ತಂತ್ರಜ್ಞಾನವನ್ನು ದೂರ ಇಡುವ ಬದಲು ಕನ್ನಡದ ಬೆಳವಣಿಗೆಗೆ ಬಳಸಬೇಕು. ಕನ್ನಡ ಸಾಹಿತ್ಯದ ಬಹುಪಾಲು ಬೇರು ಗ್ರಾಮೀಣ ಬದುಕಿನಲ್ಲಿ ನೆಲೆಗೊಂಡಿದೆ. ಅದನ್ನು ಉಳಿಸಿ, ಬೆಳೆಸಬೇಕು ಎಂದು ಸಲಹೆ ನೀಡಿದರು.

ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಎ. ಕೃಷ್ಣಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಭಟ್ ಅಗ್ರಸಾಲೆ ಸ್ವಾಗತಿಸಿದರು. ರಾಮಕೃಷ್ಣ ಭಟ್ ಚೊಕ್ಕಾಡಿ ವಂದಿಸಿದರು. ರಾಮಕೃಷ್ಣ ದೊಡ್ಡಮನಿ, ದೀಪ್ತಿ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕೃತಿ ಬಿಡುಗಡೆ, ಕಥಾಗೋಷ್ಠಿ, ಕವಿಗೋಷ್ಠಿ, ಚಾವಡಿ ಚಿಂತನೆ, ಸಾಧಕರಿಗೆ ಸನ್ಮಾನ, ಯಕ್ಷಗಾನ ಬಯಲಾಟ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
