ಧಾರವಾಡ : ಸಾಧನಕೇರಿಯಲ್ಲಿರುವ ವರಕವಿ ಅಂಬಿಕಾತನಯದತ್ತರ ‘ಶ್ರೀಮಾತಾ’ ಮನೆಯಂಗಳದಲ್ಲಿ ದಿನಾಂಕ 31 ಜನವರಿ 2026ರಂದು ಕವಿದಿನ “ಇದು ಬರೀ ಬೆಳಗಲ್ಲೋ ಅಣ್ಣಾ” ಬೇಂದ್ರೆ ಕಾವ್ಯ ವಾಚನ ಗಾಯನ ಕಾರ್ಯಕ್ರಮವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿತ್ತು. ಇಂದು ಬೇಂದ್ರೆಯವರ 130ನೇ ಜನ್ಮ ದಿನ.
“ಬೇಂದ್ರೆ ನಮ್ಮ ಹೆಮ್ಮೆ. ಅವರ ಊರಲ್ಲಿ ಇರೋದು ನಮ್ಮ ಸೌಭಾಗ್ಯ. ಧಾರವಾಡದ ಪೋತ್ನಿಸ ಗಲ್ಲಿಯಲ್ಲಿರುವ ಅವರ ಮನೆಯನ್ನು ಸ್ಮಾರಕ ಮಾಡುವದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಪೌರರಾದ ಜ್ಯೋತಿ ಪಾಟೀಲ ನುಡಿದರು. ಬೇಂದ್ರೆಯವರು ಜನಮಾನಸದಲ್ಲಿ ಉಳಿಯುವ ಶ್ರೇಷ್ಠ ಕವಿ. ಹೊರಗೆ ಹೋದಲ್ಲೆಲ್ಲಾ ಬೇಂದ್ರೆ ಊರಿನವರೇ ನೀವು ಎಂದು ಜನ ನಮ್ಮನ್ನು ಪ್ರೀತಿ ಗೌರವದಿಂದ ಮಾತನಾಡಿಸುತ್ತಾರೆ” ಎಂದು ಅಭಿಮಾನ ಹಂಚಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿ ನರಸಿಂಹ ಪರಾಂಜಪೆ “ಅವರು ಕವಿಯಂಗಳದ ಅಂಬೆಗಾಲಿನ ಕೂಸು ನಾನು. ಬೇಂದ್ರೆಯವರ ಆಶೀರ್ವಾದ ಇರುವದರಿಂದಲೇ ನಾಲ್ಕು ಸಾಲು ಬರೆಯುವಂತಾಯಿತು” ಎಂದರು. ಅನೇಕ ದಿಗ್ಗಜರ ಬೇಂದ್ರೆ ವರ್ಣನೆ ವಿವರಿಸುತ್ತ ‘ಬಾ ಹತ್ರರ’ ಬೇಂದ್ರೆ ಕವಿತೆಯ ವಾಚನ ಮಾಡಿದರು.

ಪುನರ್ವಸು ಬೇಂದ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಂಬಾ ಉತ್ಸಾಹದಿಂದ ಓಡಾಡುತ್ತ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತಿ ಡಾ. ಕೃಷ್ಣ ಕಟ್ಟಿ “ಬೇಂದ್ರೆ ಕಾವ್ಯ ಅವರು ಎಲ್ಲರಿಗೂ ಕೊಡುತ್ತಿದ್ದ ಕಲ್ಲುಸಕ್ಕರೆಯಂತೆ ನೋಡಲು ಸ್ವಚ್ಛ, ತಿಂದರೆ ಸಿಹಿ ಎಂದು ನುಡಿದರು. ಬೇಂದ್ರೆ, ಜೋಶಿ ಹಾಗೂ ಆಲೂರ ಅವರ ಕುಟುಂಬಗಳ ಮೂರನೇ ತಲೆಮಾರು ಆಸಕ್ತಿಯಿಂದ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಧಾರವಾಡದ ಸಾಹಿತ್ಯ ಶ್ರೇಷ್ಠತೆಯನ್ನು ಸಾರುತ್ತದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹರ್ಷ ಡಂಬಳ ಅವರು “ನಾವೆಲ್ಲ ಎಲ್ಲೆಡೆ ಇಷ್ಟೊಂದು ಸಂಭ್ರಮದಿಂದ ವರಕವಿ ಅಂಬಿಕಾತನಯದತ್ತರ 130ನೇ ಹುಟ್ಟುಹಬ್ಬ ಆಚರಿಸುತ್ತಿರುವುದೇ ಅವರು ಜಗದಕವಿ ಎಂಬುದನ್ನು ನಿರೂಪಿಸುತ್ತದೆ. ಬೇಂದ್ರೆಯವರಿಗೆ ಜಗದಕವಿ ಎಂಬ ಅಭಿದಾನ ಅಂದು ಇಂದು ಎಂದೆಂದು ಸಲ್ಲುತ್ತದೆ” ಎಂದರು. ಅಂಬಿಕಾತನಯದತ್ತ ಕವಿತೆಯ ವಾಚನವನ್ನು ಕೂಡಾ ಡಂಬಳ ಮಾಡಿದರು.

ಬೇಂದ್ರೆ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೇಂದ್ರೆ ವಿಶೇಷ ಭಾವಚಿತ್ರಗಳು ಮತ್ತು ಕವಿತೆಯ ಸಾಲುಗಳಿದ್ದ ವೇದಿಕೆ ಗಮನ ಸೆಳೆಯುವಂತಿತ್ತು. ಸುಂದರ ವೇದಿಕೆ ಶ್ರೀಮಾತಾದ ಪ್ರಸನ್ನ ಅಂಗಳ, ಆಗಸದೆತ್ತರಕ್ಕೆ ನಿಂತ ಗಿಡ ಮರ ತಲೆದೂಗುತ್ತಿದ್ದವು. ಅವುಗಳಲ್ಲಿಯ ಪಕ್ಷಿಗಳು ಕೂಡ ಬೇಂದ್ರೆ ಕಾವ್ಯ ನುಡಿಯುತ್ತಿದ್ದವು. ಬೇಂದ್ರೆಯವರ ನೆಚ್ಚಿನ ಪಾತರಗಿತ್ತಿಗಳು ಹುರುಪಿನಿಂದ ಹಾರಾಡುತ್ತ ಇವನ್ನೆಲ್ಲ ನಮಗೆ ಬೊಟ್ಟು ಮಾಡಿ ತೋರಿಸುತ್ತಿದ್ದವು.
ಮಾಜಿ ಮಹಾಪೌರ ಈರೇಶ ಅಂಚಟಗೇರಿ ಅವರ ಕವಿತಾ ವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. “ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ ನಾನೂನ ನಕ್ಕೇನ” ಎಂದು ಅವರು ಕವಿತೆ ಓದಿದರು. ಡಾ. ಕೃಷ್ಣ ಕಟ್ಟಿಯವರು ‘ಮೂಡಲ ಮನೆಯ ಮುತ್ತಿನ ನೀರಿನ ಸೊಬಗ’ನ್ನು ಕಟ್ಟಿಕೊಟ್ಟರು. ಮಧುರ ಚೆನ್ನರ ಕುರಿತಾದ ಕವಿತೆ, ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳದಿದೆ’ ಇದನ್ನು ಡಾ. ಬಾಳಣ್ಣಾ ಶೀಗಿಹಳ್ಳಿ ವಾಚನ ಮಾಡಿದರು. ‘ಮನಸಿನಲ್ಲಿ ಹೊಳೆದವನೆ ಕನಸಿನಲ್ಲಿ ಬೆಳೆದವನೆ’ ಎಂಬ ಬೇಂದ್ರೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದವರು ಗಾಯಕಿ ಮಾಯಾ ಚಿಕ್ಕೇರೂರ. ಗಂಗಾವತರಣ ಸಂಕಲನದಲ್ಲಿಯ ಅಂಬಿಕಾತನಯ ಯಾರು ಎಂಬುದನ್ನು ವಿವರಿಸುವ ‘ವಿಶ್ವಮಾತೆಯ ಕಮಲಗರ್ಭ ಜಾತ ಪರಮಾಣು ಪರಾಗ ಕೀರ್ತಿ ನಾನು’ ಎಂಬ ಕವಿತೆ ಓದಿದ ಡಾ. ಶಿವಪ್ರಸಾದ ಅವರು ಅದನ್ನು ಅತ್ಯಂತ ಸುಂದರವಾಗಿ ಇಂಗ್ಲೀಷಿಗೆ ಅನುವಾದಿಸಿ ಹೇಳಿದರು. ಮೇಘನಾ ಜಹಗೀರದಾರ ಅವರು ‘ಹಸಗೂಸು ಮಲಗಿಹುದು ಹುಸಿನಗೆಯ ತೊಲಗಿಹುದು’ ಎಂಬ ಬೇಂದ್ರೆ ಕಾವ್ಯವನ್ನು ಕಣ್ಣಿಗೆ ಕಟ್ಟುವಂತೆ ಹಾಡಿದರು. ರೀಡ ಮಾಡುತ್ತಲೇ ಇರಬೇಕು. ಆಗಲೇ ರೀಬಿಲ್ಡ ಸಾಧ್ಯ. ಮತ್ತೆ ಮತ್ತೆ ಓದಬೇಕು ಆಗಲೇ ಹೊಸತು ಕಟ್ಟಲು ಸಾಧ್ಯ ಎಂದ ರಂಗಕರ್ಮಿ ಮಹಾದೇವ ಹಡಪದ ಮರ್ಯಾದೆ ಕವನ ಸಂಕಲನದಲ್ಲಿರುವ ನೆಲದ ಮ್ಯಾಲ ನಡೀಲಿಕ್ಕೆ ಬರವಲ್ದು ಅಂತ ರಿಕ್ಷಾದಾಗ ಹೋಗಿದ್ದೆ ಎಂಬ ಕವಿತೆಯನ್ನು ತುಂಬಾ ಅರ್ಥಗರ್ಭಿತವಾಗಿ ಓದಿದರು. ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ನಾದಲೀಲೆ ಸಂಕಲನದಲ್ಲಿರುವ ‘ಕುರುಡು ಕಾಂಚಾಣಾ ಕುಣಿಯುತಲಿತ್ತು’ ಓದುತ್ತ ವಾಸ್ತವ ತಂದಿಳಿಸಿದರು. ಸಾಹಿತಿ ಡಾ.ಅನುರಾಧಾ ಕಟ್ಟಿಯವರು ಸಂತ ರಾಜಾರಾಮರ ಗುರುಭಕ್ತೀಚೆ ಅಭಂಗಗಳನ್ನು ಕನ್ನಡಕ್ಕೆ ಅನುವಾದಿಸಿರುವ ಬೇಂದ್ರೆಯವರ ಗುರುಭಕ್ತಿ ಅಭಂಗಗಳನ್ನು ನುಡಿದರು. ವರ್ಷಾ ಮಾಡಲಗಿ ಅವರು ಸಖಿಗೀತದ ‘ತುಮ್ ತುಮ್ ತುಮ್ ತುಂಬಿ ಬಂದಿತ್ತ ತಂಗಿ’ ಎಂದರು. ಎ.ಎ. ದರ್ಗಾ ಅವರು ಶ್ರೀಮಾತಾ ಕವನ ಸಂಕಲನದಿಂದ ಆಯ್ದುಕೊಂಡ ಜನ ಸಾಮಾನ್ಯ ಅಲ್ಲ ಎಂಬ ಕವಿತೆ ಓದಿದರು. ಹಿರಿಯ ಗಾಯಕಿ ಶ್ರೀದೇವಿ ಜೋಶಿ ಅವರು ಗಂಗಾವತರಣ ಕವನ ಸಂಕಲನದ ‘ಹೂವೆ ಇದ್ದಲ್ಲೆ ಇರು ಹೂವೆ’ ಎಂಬ ಗೀತೆ ಸುಶ್ರಾವ್ಯವಾಗಿ ಹಾಡಿದರು. ಡಾ. ಶ್ರೀನಿವಾಸ ಹೆಬ್ಬಾಳ ಅವರು ಕುದರಿಯವರ ಕಿವಿಮಾತು ಎಂಬ ಪದ್ಯವನ್ನು ವಿವರಣೆಯೊಂದಿಗೆ ವಾಚಿಸಿದರು. ರಾಜಕುಮಾರ ಮಡಿವಾಳರ ಅವರು ಸಖಿಗೀತದ ನಿಮ್ಮ ಮಾತೆ ಬೇರೆ ಎಂಬ ಸಾಲುಗಳನ್ನು ವಾಚಿಸಿದರು. ಹಿರಿಯ ಗಾಯಕಿ ರಾಧಿಕಾ ಕಾಖಂಡಕಿ ಅವರು ನಾದಲೀಲೆಯ ಕೋಲುಸಖಿ ಚಂದ್ರಮುಖಿ ಗೀತೆ ಹಾಡಿದರು. ಡಾ. ವಾದಿರಾಜಾಚಾರ್ಯ ತಡಕೋಡ ಅವರು ಕಾಳಿದಾಸನ ಮೇಘದೂತ ಮತ್ತು ವರಕವಿ ಬೇಂದ್ರೆಯವರು ಮಾಡಿರುವ ಅದರ ಅನುವಾದ ಓದುತ್ತ ಅದ್ಭುತ ವಿವರಣೆ ನೀಡಿದರು. ಹಿರಿಯರಾದ ಜಿ.ಸಿ. ತಲ್ಲೂರ ಅವರು ಬೇಂದ್ರೆಯವರು ಬಾಗಲಕೋಟೆಗೆ ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಗೀತೆಯನ್ನು ಅರ್ಥಪೂರ್ಣವಾಗಿ ಹಾಡಿದರು. ಮಿಥುನ ಜೋಶಿ ಶ್ರೀಮಾತಾ ಅಂಗಳದಲ್ಲಿ ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನ ಸೃಷ್ಟಿಯಾಗಿದೆ ಎನ್ನುತ್ತ ಗಾರುಡಿಗ ಪಾತರಗಿತ್ತಿಯ ಕವನ ಓದಿದರು. ಗರಿಗೆದರಿ ನರ್ತಿಸಿದೆ ನಿನ್ನ ಕಾವ್ಯ ಮಯೂರ ಎಂದರು. ಕೊನೆಯಲ್ಲಿ ರಂಗಕರ್ಮಿ ಡಾ. ಶಶಿಧರ ನರೇಂದ್ರ ಅವರು ಮಕ್ಕಳಿವರೇನಮ್ಮ 33 ಕೋಟಿ ಕವಿತೆಯನ್ನು ತುಂಬಾ ಭಾವಪೂರ್ಣವಾಗಿ ವಾಚನ ಮಾಡಿದರು.

ಕಾರ್ಯಕ್ರಮ ನಿರೂಪಿಸಿದ ಹಿರಿಯ ಸಾಹಿತಿ ಡಾ. ಹ.ವೆಂ. ಕಾಖಂಡಕಿ ಅವರು ತಮ್ಮ ಶಾಲಾದಿನಗಳಲ್ಲಿ ಬೇಂದ್ರೆಯವರು ಬರೆದ ಆಶೀರ್ವಾದಪೂರ್ವಕ ಪತ್ರ ಓದಿ ವಂದಿಸಿದರು. ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟಿನ ಸಮೀರ ಜೋಶಿ ಈ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿದ್ದರು. ನಗರದ ಅನೇಕ ಸಾಹಿತಿಗಳು, ಸಾಹಿತ್ಯಾಸಕ್ತರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಬೇಂದ್ರೆಯವರ ಮನೆ ಅಂಗಳ ಬೆಳಗ್ಗೆ ಕಾವ್ಯಾಸಕ್ತರಿಂದ ತುಂಬಿ ಹೋಗಿತ್ತು.
